ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?

Yadira stories

ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. ಶಿಷ್ಯರು ಕೆಲವೊಮ್ಮೆ ಹುಡುಕುವ ಪ್ರಕ್ರಿಯೆಯಲ್ಲಿ ಕಲಿಯುತ್ತಿದ್ದರು. ಕೆಲವೊಮ್ಮೆ ಉತ್ತರ ಕಂಡುಕೊಂಡ ಮೇಲೆ ಅವರ ಕಲಿಕೆ ಪೂರ್ಣಗೊಳ್ಳುತ್ತಿತ್ತು.

ವಾ-ಐನ್-ಸಾಇಲ್‌ ಆಶ್ರಮದಲ್ಲಿದ್ದಾಗ ನಡೆದ ಘಟನೆ ಇದು.

ನಸುಕಿನ ಗಂಟೆ ಬಾರಿಸಿತು ಶಿಷ್ಯರೆಲ್ಲಾ ಬಂದು ನಿಂತರು. ಹಿಂದಿನ ರಾತ್ರಿಯ ಪಾನೀಯ ಸಾಧನೆಯಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ರಾ-ಉಮ್ ಏಳುವಾಗ ತಡವಾಗಿತ್ತು. ಬೆಳಗಿನ ಉಪಾಹಾರವೂ ಇಲ್ಲದೆ ಶಿಷ್ಯರೆಲ್ಲಾ ಕಾದರು.

ತನ್ನ ಚಹಾದ ಪಾತ್ರೆ ಮತ್ತು ಬಟ್ಟಲಿನೊಂದಿಗೆ ಹೊರಬಂದ ರಾ-ಉಮ್ ಇಂದು ಅಧ್ಯಾತ್ಮವನ್ನು ಅರ್ಥ ಮಾಡಿಕೊಳ್ಳೋಣ ಅಂದಳು.

ಶಿಷ್ಯರೆಲ್ಲಾ ಒಮ್ಮೆಗೇ ಮೈಯೆಲ್ಲಾ ಕಿವಿಯಾದರು!

“ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?” ರಾ-ಉಮ್ ಕೇಳಿದ ಪ್ರಶ್ನೆಗೆ ಬಗೆ ಬಗೆಯ ಉತ್ತರಗಳು ಬಂದವು. ಅವುಗಳಲ್ಲಿ ಹೆಚ್ಚಿನವು “ಅವಳು ಆಧ್ಯಾತ್ಮಿಕಳಾಗುತ್ತಾಳೆ”, “ಅವಳಿಗೆ ಜ್ಞಾನೋದಯವಾಗುತ್ತದೆ” ಎಂಬುದನ್ನೇ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಿದ್ದವು.

ರಾ-ಉಮ್ ತನ್ನ ಚಹಾವನ್ನು ಗುಟುಕರಿಸಿ ಮತ್ತೆ ಕೇಳಿದಳು, “ಆಮೇಲೆ ಅವಳೇನಾಗುತ್ತಾಳೆ…?”

ಶಿಷ್ಯರು ಮೌನವಾಗುಳಿದರು.

ರಾ-ಉಮ್‌ನ ಚಹಾದ ಬಟ್ಟಲು ಖಾಲಿಯಾಯಿತು. ಅವಳು ಚಹಾದ ಪಾತ್ರೆಯನ್ನು ಎತ್ತಿಕೊಂಡಳು.

ಶಿಷ್ಯರೆಲ್ಲರೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದೇ ತಮ್ಮ ಇಂದಿನ ಕಲಿಕೆ ಎಂದುಕೊಂಡು ನಿತ್ಯಾಹ್ನಿಕಗಳಿಗೆ ಹೊರಡಲು ಸಿದ್ಧರಾದರು.

ಆಗ ವಾ-ಐನ್‌ನ ಧ್ವನಿ ಕೇಳಿಸಿತು, “ಅವಳು ಮನುಷ್ಯನಾಗುತ್ತಾಳೆ!”

ರಾ-ಉಮ್ ಪಾತ್ರೆಯಿಂದ ಮತ್ತಷ್ಟು ಚಹಾವನ್ನು ತನ್ನ ಬಟ್ಟಲಿಗೆ ಸುರಿದುಕೊಳ್ಳುತ್ತಿದ್ದಳು.

Leave a Reply