ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು.
ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು.
ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? ಎಂದು ಯೋಚಿಸಿದನು. ಹಾಗಾದರೆ ನಾನು ಅವನಿಂದ ಆ ಸತ್ಯವನ್ನು ಕೊಂಡು ತಂದು, ನನ್ನ ಬಳಿಯೇ ಇರಿಸಿಕೊಳ್ಳುತ್ತೇನೆ. ಆಗ ಪ್ರಜರೆಗಳು ನನ್ನ ಬಳಿಯೇ ಬರುತ್ತಾರೆ ಎಂದು ನಿಶ್ಚಯಿಸಿದನು.
ತನ್ನ ನಿಶ್ಚಯವನ್ನು ಮಂತ್ರಿಗೆ ಹೇಳಿದಾಗ ಆತ ಒಳಗೊಳಗೇ ನಕ್ಕು, “ಹಾಗೆಯೇ ಆಗಲಿ ಪ್ರಭೂ” ಎಂದು ತಲೆಯಾಡಿಸಿದನು.
ಬಿಂಬಾಸುರನ ಪರಿವಾರ ಮಹಾವೀರನ ಬಳಿ ಹೋಯಿತು. ಆತ ಅಲ್ಲಿ ನೆರೆದಿದ್ದ ಜನರು ಮಾಡುತ್ತಿದ್ದುದನ್ನೇ ಅನುಸರಿಸಿ, ಮಹಾವೀರನಿಗೆ ನಮಸ್ಕರಿಸಿ ಸತ್ಕರಿಸಿದನು. ಅನಂತರ, “ಸ್ವಾಮಿ, ನಿಮ್ಮ ಬಳಿ ಸತ್ಯವಿದೆ ಎಂದು ಕೇಳಿದೆ. ನಿಮಗೇನು ಬೇಕು ಹೇಳಿ. ಎಷ್ಟು ಬೇಕು ಕೇಳಿ. ನನ್ನ ಅರ್ಧ ರಾಜ್ಯ… ಅರ್ಧವೇಕೆ, ಪೂರ್ಣ ರಾಜ್ಯವನ್ನೇ ತೆತ್ತು ಅದನ್ನು ಕೊಳ್ಳಲು ಸಿದ್ಧವಿದ್ದೇನೆ” ಎಂದನು.
ಇದನ್ನು ಕೇಳಿದ ಮಹಾವೀರ ನಸುನಗುತ್ತಾ, “ರಾಜಾ, ನಾನೂ ಒಂದು ಕಾಲದಲ್ಲಿ ರಾಜನಾಗಿದ್ದವನೇ. ನನ್ನಲ್ಲೂ ರಾಜ್ಯವಿದ್ದಿತು. ಅದನ್ನೆಲ್ಲ ಬಿಟ್ಟು 40 ವರ್ಷಗಳ ಕಾಲ ಶೋಧಿಸಿ ಪಡೆದ ಸತ್ಯವನ್ನು ನಾನು ಮತ್ತೊಂದು ರಾಜ್ಯಕ್ಕಾಗಿ, ಪದವಿಯ ಆಸೆಗಾಗಿ ಮಾರಿಬಿಡಲೇ? ನನ್ನಿಂದಾಗದು” ಎಂದುಬಿಟ್ಟ.
ಬಿಂಬಾಸುರನಿಗೆ ನಿರಾಶೆಯಾಯಿತು. ಹಾಗಾದರೆ ತಾನು ಸತ್ಯವನ್ನು ಪಡೆಯಲು ಬೇರೆ ದಾರಿಯೇ ಇಲ್ಲವೇ ಎಂದು ವಿಚಾರಿಸಿದ. ಅದಕ್ಕೆ ಮಹಾವೀರ, “ನಿನ್ನ ರಾಜಧಾನಿಯ ಕೊಳಗೇರಿಯ ತುದಿಯಲ್ಲಿ ನನ್ನ ಶಿಷ್ಯನೊಬ್ಬನಿದ್ದಾನೆ. ಅವನ ಬಳಿಯೂ ಸತ್ಯವಿದೆ. ಆತ ಕಡುಬಡವ. ನೀನು ಹಣ ಕೊಡುವಿಯಾದರೆ ಆತ ಅದನ್ನು ಮಾರಬಹುದು” ಎಂದು ಹೇಳಿದನು.
ಸಂತುಷ್ಟನಾದ ಬಿಂಬಾಸುರ ಕೊಳಗೇರಿಯ ತುದಿಯ ಮನೆಯ ಮುಂದೆ ಕೆಸರಿನಲ್ಲಿ ತನ್ನ ರತ್ನಖಚಿತ ರಥವನ್ನು ನಿಲ್ಲಿಸಿದನು. ಕೆಳಗಿಳಿದು ಜಾಡಮಾಲಿಯಾಗಿದ್ದ ಮಹಾವೀರನ ಶಿಷ್ಯನ ಮನೆಯ ಕದ ತಟ್ಟಿದನು; ಮತ್ತು, “ಪುಣ್ಯವಂತನೇ! ನೀನು ಕೇಳಿದಷ್ಟು ಹಣ ಕೊಡುವೆ. ಮಹಾವೀರರು ನಿನ್ನಲ್ಲಿ ಸತ್ಯವಿದೆ ಎಂದು ಹೇಳಿದ್ದಾರೆ. ಎಲ್ಲಿ, ತಡಮಾಡದೆ ಅದನ್ನು ನನಗೆ ಮಾರಿಬಿಡು” ಎಂದನು.
ಇದನ್ನು ಕೇಳಿದ ಜಾಡಮಾಲಿಯು “ಮಹಾಪ್ರಭೂ! ಸತ್ಯ ನನ್ನೊಳಗೆ ಹುದುಗಿಕೊಂಡಿದೆ. ನೀವು ನನ್ನನ್ನು ಕತ್ತರಿಸಿದರೂ ಅದನ್ನು ನ್ನಿಂದ ಪಡೆಯಲಾಗದು. ಏಕೆಂದರೆ ಅದು ಕಣ್ಣಿಗೆ ಕಾಣುವುದಿಲ್ಲ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ನಿಸ್ವಾರ್ಥದಿಂದ ಮಾಡುತ್ತೇನೆ. ದುರಾಸೆ ಪಡುವುದಿಲ್ಲ. ಹಿಂಸೆ ಮಾಡುವುದಿಲ್ಲ. ಇತರರಿಗೆ ಕೇಡು ಬಯಸುವುದಿಲ್ಲ. ನನ್ನ ಪಾಲಿನ ಸತ್ಯ ಈ ನಡತೆಗಳಲ್ಲಿ ಅಡಗಿದೆ. ನೀವೂ ಅವನ್ನು ಅನುಸರಿಸಿದರೆ, ನನ್ನ ಬಳಿ ಇರುವ ಸತ್ಯ ನಿಮ್ಮ ಬಳಿಯೂ ಲಭ್ಯವಾಗುತ್ತದೆ” ಎಂದನು.
ಜಾಡಮಾಲಿಯ ಮಾತಿನಿಂದ ಬಿಂಬಾಸುರನಿಗೆ ‘ಸತ್ಯ’ದ ಅರಿವಾಯಿತು. ಅಂದಿನಿಂದಲೇ, ಅದನ್ನು ಹೊಂದುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸತೊಡಗಿದನು.