ಅಷ್ಟಾವಕ್ರ ಮತ್ತು ಅಮೃತಮತಿಯರ ಪ್ರಣಯ ಪ್ರಸಂಗ ಕನ್ನಡದ ಮಹಾಕವಿ ಜನ್ನನ `ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುತ್ತದೆ. ಮೂಲದಲ್ಲಿ ಈ ಕಥನದ ಉದ್ದೇಶ ಹಿಂಸೆಯ ಸಂಕಲ್ಪವೇ ಮಹಾಪಾಪ ಎನ್ನುವುದನ್ನು ಸಾರುವುದಾಗಿದೆ.
ಯಶೋಧರ ಒಬ್ಬ ಸದ್ಗುಣಿ ರಾಜ. ಅಮೃತಮತಿ ಅವನ ಸ್ಫುರದ್ರೂಪಿ ಹೆಂಡತಿ. ಸಾತ್ತ್ವಿಕ ಗುಣದ ರಾಜನಲ್ಲಿ ರುಚಿ ಕಾಣದ ಅಮೃತಮತಿ, ಇರುಳಲ್ಲಿ ಪಾನಮತ್ತನಾಗಿ ಹಾಡುವ ಮಾವುತನ ಮೋಹಕ್ಕೆ ಬೀಳುತ್ತಾಳೆ. ಅವನೋ ಎಂಟು ಕಡೆ ಗೂನುಳ್ಳ ಕುರೂಪಿ ಅಷ್ಟಾವಕ್ರ. ಕ್ರೂರಿ, ಶುದ್ಧ ಒರಟ. ಅವನೊಡನೆ ಪ್ರಣಯ ಸಲ್ಲಾಪದ ಬಯಕೆಯಿಂದ ರಾಣಿ ರಾಜನನ್ನು ವಂಚಿಸಿ ಅವನ ಗುಡಿಸಲಿಗೆ ಹೋಗುವ ಪರಿಪಾಠ ಶುರುವಿಡುತ್ತಾಳೆ.
ಒಮ್ಮೆ ರಾಜನಿಗೆ ಇದು ತಿಳಿಯುತ್ತದೆ. ಅವಳನ್ನು ಹಿಂಬಾಲಿಸಿ ಹೋಗುತ್ತಾನೆ. ಅಲ್ಲಿ ಮಾವುತ ತಡವಾಗಿ ಬಂದಳೆಂದು ಅಮೃತಮತಿಯನ್ನು ಕಾಲಿನಿಂದ ಒದ್ದು ಹಿಂಸಿಸುತ್ತಾನೆ. ಕೀಳು ಮಾತುಗಳಿಂದ ನಿಂದಿಸುತ್ತಾನೆ. ಅಷ್ಟೆಲ್ಲ ಆದರೂ ಅಮೃತಮತಿ ಅವನ ಮನವೊಲಿಸುತ್ತಾ ಪರಿಪರಿಯಾಗಿ ಅನುನಯಿಸುತ್ತಾ ಅವನನ್ನು ಸಮಾಧಾನ ಮಾಡುತ್ತಾಳೆ. ಇದನ್ನು ಕಂಡ ರಾಜನಿಗೆ ದುಃಖಾವೇಗಗಳು ಉಂಟಾಗಿ ಅವರಿಬ್ಬರನ್ನೂ ಕೊಂದುಬಿಡಬೇಕೆಂದು ಒರೆಯಿಂದ ಖಡ್ಗ ತೆಗೆಯುತ್ತಾನೆ. ಆದರೆ ಮನಸ್ಸು ಬದಲಾಯಿಸಿ ಮನೆಗೆ ಮರಳುತ್ತಾನೆ.
ಮರು ದಿನ ಅವನ ತಾಯಿ ಚಂದ್ರಮತಿ ಮಗನ ಮುಖದ ನೋವನ್ನು ಓದುತ್ತಾಳೆ. ಕಾರಣ ಕೇಳುತ್ತಾಳೆ. ಅವನು ಕೆಟ್ಟ ಕನಸು ಬಿತ್ತೆಂದು ಸುಳ್ಳು ಹೇಳುತ್ತಾನೆ. `ಶ್ರೇಷ್ಟವಾದ ರಾಜಹಂಸವೊಂದು ಕೊಚ್ಚೆಯಲ್ಲಿ ಹೊರಳುವುದ ಕಂಡೆ’ ಎನ್ನುತ್ತಾನೆ. ಜ್ಯೋತಿಷಿಗಳನ್ನು ಕರೆಸಿದ ಮಹಾರಾಣಿ ಸ್ವಪ್ನದೋಷಕ್ಕೆ ಪರಿಹಾರ ಕೇಳುತ್ತಾಳೆ. ಅವರು ಹುಂಜವನ್ನು ಬಲಿಕೊಡಬೇಕು ಅನ್ನುತ್ತಾರೆ. ಆದರೆ ಜೈನ ಕುಲದ ಯಶೋಧರ ಪ್ರಾಣಿ ಬಲಿಗೆ ಒಪ್ಪುವುದಿಲ್ಲ. ಕೊನೆಗೆ ಹಿಟ್ಟಿನ ಹುಂಜವನ್ನು ಮಾಡಿ ಬಲಿ ಕೊಡುವ ನಿರ್ಧಾರವಾಗುತ್ತದೆ.
ಪೂಜಾದಿಗಳೆಲ್ಲ ಮುಗಿದು ಇನ್ನೇನು ಹಿಟ್ಟಿನ ಹುಂಜ ಬಲಿ ಕೊಡಬೇಕು ಅನ್ನುವಾಗ ಅದರ ಚೆಂದಕ್ಕೆ ಮನಸೋತ ಭೂತವೊಂದು ಬಂದು ಸೇರಿಕೊಳ್ಳುತ್ತದೆ. ಕತ್ತಿಯಿಂದ ಹಿಟ್ಟಿನ ಹುಂಜದ ತಲೆ ತರಿದಾಗ ಅದರೊಳಗಿನ ಭೂತ ಕಿರುಚುತ್ತಾ ರಕ್ತ ಕಾರಿಕೊಂಡು ಬೀಳುತ್ತದೆ.
ಮುಂದಿನ ಜನ್ಮಗಳಲ್ಲಿ ಪಾಪಪ್ರಜ್ಞೆ ಇದ್ದು ಕೂಡ ಹಿಂಸೆಯ ಸಂಕಲ್ಪ ಮಾಡಿದ ದೋಷಕ್ಕಾಗಿ ಯಶೋಧರ ಮತ್ತು ಅವನ ತಾಯಿ ಕೀಳು ಜನ್ಮಗಳನ್ನು ಎತ್ತುತ್ತ ಹೋಗುತ್ತಾರೆ. ಪಾಪ ಪ್ರಜ್ಞೆಯೇ ಇಲ್ಲದೆ ವಿದ್ರೋಹ ಮಾಡಿದ ಅಮೃತಮತಿ ಮತ್ತು ಅಷ್ಟಾವಕ್ರ ಉತ್ತಮ ಜನ್ಮಗಳನ್ನು ಪಡೆಯುತ್ತಾರೆ.