ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ.
ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ.
“ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಗೀಸನ್ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡ.
ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ‘ಟೆಕಿಸುಇ’ ಎಂದು ಬದಲಾಯಿಸಿಕೊಂಡ. ‘ನೀರಿನ ಹನಿ’ ಎಂಬುದು ಈ ಹೆಸರಿನ ಅರ್ಥ.
ನೀರನ್ನು ವ್ಯರ್ಥ ಮಾಡದಿರುವುದು ಕೂಡ ಝೆನ್. ಏನನ್ನೂ ವ್ಯರ್ಥ ಮಾಡದೆ ಇರುವುದು ಝೆನ್.