ಮಕ್ಕಳು ಶಾಲಾ ಪರೀಕ್ಷೆ ಬರೆಯುವಾಗ ಪೋಷಕರು ಅದನ್ನು ಬದುಕಿನ ಪರೀಕ್ಷೆ ಎಂದೇ ಪರಿಗಣಿಸುತ್ತಾರೆ ಮತ್ತು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಅವರ ಆತಂಕ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ, ಪರೀಕ್ಷೆಯ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಹೇಗೆ ಸಹಕಾರಿಯಾಗಿ ವರ್ತಿಸಬಹುದು ಅನ್ನುವುದಕ್ಕೆ 5 ಸರಳ ಸೂತ್ರಗಳು ಇಲ್ಲಿವೆ…
ಕೆಲವು ಶಾಲೆಗಳಲ್ಲಿ ಪರೀಕ್ಷೆಗಳು ಮುಗಿದಿವೆ ಮತ್ತು ಕೆಲವು ಕಡೆ ಈಗಿನ್ನೂ ಶುರುವಾಗಿವೆ. ಅದರಲ್ಲೂ ಇದು ಹತ್ತನೇ ತರಗತಿಯ ಪರೀಕ್ಷೆಗಳ ಕಾಲ. ಶಿಕ್ಷಣದ ಒಂದು ಘಟ್ಟವನ್ನು ನಿರ್ಣಯಿಸುವುದರಿಂದ ಹತ್ತನೇ ತರಗತಿಯ ಪರೀಕ್ಷೆಗಳಿಗೆ ಹೆಚ್ಚು ಮಹತ್ವ. ಹಾಗೆಂದೇ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಲ್ಲಿ ಆತಂಕ ಮನೆಮಾಡಿರುತ್ತದೆ. ಮೊದಲೇ ಪರೀಕ್ಷೆಯ ಒತ್ತಡದಲ್ಲಿರುವ ಮಕ್ಕಳ ಮೇಲೆ ಪೋಷಕರ ಆತಂಕ ಮತ್ತಷ್ಟು ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳು ವಿಚಲಿತಗೊಂಡು, ಪರೀಕ್ಷೆ ಬರೆಯುವಾಗ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಆದಷ್ಟೂ ಪೋಷಕರು ಪರೀಕ್ಷಾ ದಿನಗಳಲ್ಲಿ ಸಮಾಧಾನದಿಂದ ಇರುವುದನ್ನು ರೂಢಿಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಪೋಷಕರು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಐದೇ ಐದು ಸರಳ ಸೂತ್ರಗಳು ಇಲ್ಲಿವೆ:
1.ಮಕ್ಕಳೊಂದಿಗೆ ಮಾತಾಡಿ : ಪರೀಕ್ಷಾ ದಿನಗಳಲ್ಲಿ ಬಹುತೇಕ ತಾಯ್ತಂದೆಯರು ಮಕ್ಕಳನ್ನು ಹೆಚ್ಚು ಮಾತನಾಡಿಸುವುದಿಲ್ಲ. ಅವರಿಗೆ ಡಿಸ್ಟರ್ಬ್ ಆಗಬಹುದು, ಡೈವರ್ಟ್ ಆಗಬಹುದು ಅನ್ನುವ ಕಾರಣಗಳನ್ನು ತಮಗೆ ತಾವೇ ಆರೋಪಿಸಿಕೊಂಡು, ಮಕ್ಕಳನ್ನು ಪುಸ್ತಕಗಳೊಡನೆ ಒಂಟಿಯಾಗಿ ಬಿಟ್ಟುಬಿಡುತ್ತಾರೆ. ಇದರಿಂದ ಮಕ್ಕಳಲ್ಲಿ ಏಕಾಕಿತನದ ಆತಂಕ ಉಂಟಾಗುವ ಅಪಾಯವೇ ಹೆಚ್ಚು. ಆದ್ದರಿಂದ, ಪರೀಕ್ಷೆ ನಡೆಯುವಾಗ ಸಾಧ್ಯವಾದಷ್ಟೂ ಮಕ್ಕಳ ಜೊತೆಯಿರಿ. ಎಷ್ಟು ಸಿದ್ಧತೆ ನಡೆಸಿದ್ದಾರೆ, ಎಷ್ಟು ವೀಶ್ವಾಸದಿಂದ ಇದ್ದಾರೆ, ಏನಾದರೂ ಅನುಮಾನಗಳಿವೆಯೇ ಇತ್ಯಾದಿ ವಿಚಾರಿಸಿ. ಹಾಗೆಯೇ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ತೋರುವ ನಿಮ್ಮ ವಿಶ್ವಾಸವನ್ನು ತೋರ್ಪಡಿಸಿ.
2. ಶಿಸ್ತು ಬದಿಗಿರಿಸಿ : ಕೆಲವು ಪೋಷಕರು ಮನೆಯನ್ನು ಮಿಲಿಟರಿ ಶಾಲೆ ಮಾಡಿಕೊಂಡಿರುತ್ತಾರೆ. ಮಕ್ಕಳಿಗೆ ಶಿಸ್ತು ಕಲಿಸುವ ಉದ್ದೇಶವೇನೋ ಒಳ್ಳೆಯದೇ. ಆದರೆ ಅತಿಯಾದ ಹೇರಿಕೆ ಆಗಬಾರದು. ಪರೀಕ್ಷೆ ಅವಧಿಯಲ್ಲಿ ಮಕ್ಕಳು ಓದಿಗೆ ಹೆಚ್ಚು ಗಮನ ಕೊಡುವುದರಿಂದ ಹಾಗೂ ಇತರ ಸಂಗತಿಗಳ ಮೇಲೆ ಆಸಕ್ತಿ ಕಳೆದುಕೊಂಡಿರುವುದರಿಂದ ಶಿಸ್ತುಪಾಲನೆಯನ್ನು ಸ್ವಲ್ಪ ವ್ಯತ್ಯಾಸ ಆಗುವುದುಂಟು. ಅವರ ಕೋಣೆ, ಪುಸ್ತಕಗಳ ಓರಣ ಇತ್ಯಾದಿಗಳ ಬಗ್ಗೆ ತಲೆ ಕೆಡಸಿಕೊಳ್ಳದೆ, ಮಕ್ಕಳು ಸಾಧ್ಯವಾದಷ್ಟೂ ಮುಕ್ತವಾಗಿರಲು ಸಹಕಾರ ನೀಡುವುದು ಅತ್ಯಗತ್ಯ.
3. ಆರೋಗ್ಯ ಸಂಭಾಳಿಸಿ : ಪರೀಕ್ಷೆ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಪರೀಕ್ಷಾಭಯ ಮತ್ತು ಆತಂಕದಿಂದ ಕೆಲವು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ತಲೆ ನೋವು ಮತ್ತು ಜ್ವರ ಪರೀಕ್ಷೆಯ ಸಮಯದ ಸಾಮಾನ್ಯ ಸಮಸ್ಯೆಗಳು. ಇದು ದೈಹಿಕ ಕಾಯಿಲೆಯಾಗಿರದೆ, ಮಾನಸಿಕ ಬಳಲಿಕೆಯಿಂದ ಬರುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸಮಸ್ಯೆಯ ಮೂಲವನ್ನು ಗುರುತಿಸದೆ ಮಕ್ಕಳಿಗೆ ಮದ್ದು ನುಂಗಿಸಿ ಮತ್ತೊಂದು ಸಮಸ್ಯೆಗೆ ಕಾರಣವಾಗಬೇಡಿ. ಮಕ್ಕಳನ್ನು ಮೊದಲು ಭಯದಿಂದ ಹೊರತನ್ನಿ. ನಿಮ್ಮ ಸಾಂತ್ವನವೇ ಮಕ್ಕಳ ಮನಸ್ಸಿಗೆ ಸೂಕ್ತ ಮದ್ದಾಗಬಲ್ಲದು.
4. ಊಟೋಪಚಾರದತ್ತ ಗಮನ: ಓದುವ ಧಾವಂತ, ಗಡಿಬಿಡಿ ಮತ್ತು ಆತಂಕಗಳಿಂದಾಗಿ ಪರೀಕ್ಷಾ ದಿನಗಳಲ್ಲಿ ಮಕ್ಕಳು ಆಹಾರದತ್ತ ಗಮನವನ್ನೇ ಕೊಡುವುದಿಲ್ಲ. ಇದರು ಮಕ್ಕಳ ದೇಹಾರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಸರಿಯಾಗಿ ತಿನ್ನದೆ ಪರೀಕ್ಷೆ ಬರೆಯಲು ಕುಳಿತಾಗ ದೇಹ ದಣಿಯುವುದು, ಶಕ್ತಿ ಸೋರಿದಂತಾಗುವುದು, ತಲೆ ತಿರುಗುವುದು – ಮೊದಲಾದ ಸಮಸ್ಯೆಗಳು ಬಾಧಿಸತೊಡಗುತ್ತವೆ. ಆದ್ದರಿಂದ ಪೋಷಕರು ಸಾಧ್ಯವಾದಷ್ಟೂ ಈ ದಿನಗಳಲ್ಲಿ ಆರೋಗ್ಯ ಕಾಯುವ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕು.
5. ಹೋಲಿಕೆ ಮಾಡದಿರಿ : ಮಕ್ಕಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿ ನೀವು ಏನೇನು ಮಾಡಬೇಕು ಎಂದು ನೋಡಿದಿರಿ. ಈಗ ಏನು ಮಾಡಬಾರದು ಎಂಬುದನ್ನೂ ನೋಡಿ. ಈ ಸಂದರ್ಭದಲ್ಲಿ ನೀವು ಮಾಡಲೇಬಾರದ ಕೆಲಸವೆಂದರೆ – ಹೋಲಿಕೆ. ಮಕ್ಕಳು ಆಯಾ ದಿನದ ಪರೀಕ್ಷೆ ಬರೆದು ಮನೆಗೆ ಬಂದಾಗ ಅವರನ್ನು “ನೀನು ಹೇಗೆ ಬರೆದಿದ್ದೀಯ” ಎಂದು ವಿಚಾರಿಸುವುದು ಸರಿ. ಆದರೆ ಅದರ ಜೊತೆಗೆ ಮಕ್ಕಳ ಸಹಪಾಠೀಗಳ ಹೆಸರುಗಳನ್ನು ಉಲ್ಲೇಖಿಸಿ “ಅವರು ಹೇಗೆ ಮಾಡಿದ್ದಾರೆ, ಇವರು ಹೇಗೆ ಮಾಡಿದ್ದಾರೆ…” ಎಂದೆಲ್ಲ ವಿಚಾರಿಸುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ಪರೀಕ್ಷೆ ಬರೆಯುವುದು ತಮ್ಮ ಪ್ರಗತಿಗಾಗಿ ಹೊರತು ಮತ್ತೊಬ್ಬರ ಜೊತೆ ಸ್ಪರ್ಧಿಸಲಿಕ್ಕಲ್ಲ ಅನ್ನುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮತ್ತು ಬೇರೆಯವರ ಜೊತೆ ಹೋಲಿಸುತ್ತಾ ಮಕ್ಕಳ ಮೇಲೆ ಒತ್ತಡ ಹೇರಲು ಹೋಗಬಾರದು.
ಇಷ್ಟು ಮಾಡುವುದು ಬಹಳ ಸುಲಭ ಅಲ್ಲವೆ? ಇವಿಷ್ಟರ ಜೊತೆ ಪೋಷಕರು ಹೆಚ್ಚುವರಿಯಾಗಿ ಇನ್ನೂ ಒಂದು ಕೆಲಸ ಮಾಡಬಹುದು. ಮಲಗುವ ಮುನ್ನ ಐದರಿಂದ ಹತ್ತು ನಿಮಿಷಗಳ ಕಾಲ ಕಣ್ಣುಮುಚ್ಚಿ ಸಮಾಧಾನದಿಂದ ಕುಳಿತುಕೊಳ್ಳಿ. ನಿಮ್ಮ ಆತಂಕವನ್ನೂ ಒತ್ತಡವನ್ನೂ ತಹಬಂದಿಗೆ ತಂದುಕೊಳ್ಳಿ. ಧ್ಯಾನದಿಂದ ಮನಸ್ಸನ್ನು ಶಾಂತಗೊಳಿಸಿಕೊಳ್ಳಿ. ಅನಂತರ ಮಕ್ಕಳ ಜೊತೆ ಸಂತೋಷದಿಂದ, ಪ್ರೀತಿಯಿಂದ ನಾಲ್ಕು ಮಾತುಗಳನ್ನಾಡಿ, ಅವರ ಜೊತೆ ನೀವಿದ್ದೀರೆಂಬ ಭರವಸೆ ತುಂಬಿ ಮಲಗಿಸಿ. ನೀವು ತೋರುವ ಈ ಪ್ರೀತಿ ಎದುರು ಮಕ್ಕಳು ಶಾಲೆಯ ಪರೀಕ್ಷೆಗಳೇನು, ಬದುಕಿನ ಪರೀಕ್ಷೆಯನ್ನೇ ನಗುನಗುತ್ತ ಗೆದ್ದು ಬರುವುದು ಖಚಿತ!