
ರಾ-ಉಮ್‌ಳ ಆಶ್ರಮಕ್ಕೆ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುತ್ತಿದ್ದರು. ವಿವಿಧ ಆಶ್ರಮಗಳಲ್ಲಿ ಹಲವು ವಿದ್ಯೆಗಳನ್ನು ಕಲಿತಿರುತ್ತಿದ್ದ ಇವರು ಆತ್ಯಂತಿಕವಾದ ಅರಿವು ದೊರೆಯಬೇಕೆಂದರೆ ರಾ-ಉಮ್ ಬಳಿಗೆ ಹೋಗಿ ಎಂಬ ತಮ್ಮ ಗುರುಗಳ ಉಪದೇಶ ಕೇಳಿ ಮರುಭೂಮಿಯ ಮಹಾಯೋಗಿನಿಯ ಆಶ್ರಮ ತಲುಪುತ್ತಿದ್ದರು.
ಒಂದು ದಿನ ಮಧ್ಯಾಹ್ನ ಉನ್ನತ ಶಿಕ್ಷಣಾರ್ಥಿಯೊಬ್ಬ ಆಶ್ರಮ ತಲುಪಿದ. ಕಣ್ಣೆದುರಿಗೆ ಕಂಡ ವಿದ್ಯಾರ್ಥಿಗಳನ್ನೆಲ್ಲಾ ರಾ-ಉಮ್ ಎಲ್ಲಿರುತ್ತಾಳೆಂದು ಕೇಳಿದ. ಸಂಜೆಯವರೆಗೆ ಕಾಯಬೇಕು ಎಂದ ಅವರೆಲ್ಲಾ ಮಧ್ಯಾಹ್ನ ಊಟ ಮಾಡುವುದು ಆಶ್ರಮದ ನಿಯಮಗಳಲ್ಲೊಂದು ಎಂದು ತಿಳಿಸಿದರು.
ಊಟ ಮಾಡಿದ ಈತನಿಗೆ ಸಂಜೆ ರಾ-ಉಮ್‌ಳ ಭೇಟಿಗೆ ಅವಕಾಶ ಸಿಕ್ಕಿತು. ತನ್ನ ಪಾನೀಯದ ಬುರುಡೆಯೊಂದಿಗೆ ಧ್ಯಾನಸ್ಥಳಾಗಿದ್ದ ಅವಳಲ್ಲಿ ಹೋಗಿ ಈ ಶಿಕ್ಷಣಾರ್ಥಿ ನನಗೊಂದು ಪ್ರಶ್ನೆ ಕೇಳಿ ಎಂದ.
ರಾ-ಉಮ್ ಕಣ್ಣು ತೆರೆದು “ಈ ತನಕ ಕಲಿತದ್ದರಲ್ಲಿ ನೀನು ಏನೇನು ಮರೆತಿರುವೆ?” ಎಂದು ಕೇಳಿದಳು.
ಆತ ಉತ್ಸಾಹದಿಂದ ವಿವರಿಸಿದ ‘ತನ್ನ ವಿಶಿಷ್ಟ ಧ್ಯಾನ ಕೌಶಲದಿಂದ ಕಲಿತ ಪ್ರತಿಯೊಂದು ವಿಷಯವೂ ಮನನವಾಗಿದೆ. ಯಾವುದೂ ಮರೆತಿಲ್ಲ ಎಂದು ಗುರುಗಳು ಮೊದಲ ದಿನ ಮೊದಲು ಹೇಳಿದ ಮಾತಿನಿಂದ ತನ್ನ ನೆನಪಿನ ಸುರುಳಿಯನ್ನು ಬಿಚ್ಚಲಾರಂಭಿಸಿದ.
ರಾ-ಉಮ್ ಬಹಳ ಹೊತ್ತು ಕುತೂಹಲದಿಂದ ಅವನು ಹೇಳುವುದನ್ನೆಲ್ಲಾ ಕೇಳಿಸಿಕೊಂಡಳು. ಗುರುವಿನ ಒಂದೊಂದು ಮಾತನ್ನೂ ಯಥಾವತ್ತಾಗಿ ಪುನರುಚ್ಚರಿಸುತ್ತಿದ್ದ ಅವನ ಕೌಶಲವನ್ನು ಕಂಡು ಸುತ್ತಲಿದ್ದ ಶಿಷ್ಯರೆಲ್ಲಾ ಬೆರಗಾದರು.
ರಾ-ಉಮ್ ಎದ್ದು ನಿಂತಳು. “ನಾನು ಕೇಳಿದ್ದು ನೀನೇನು ಮರೆತಿರುವೆ ಎಂದು…” ಎನ್ನುತ್ತಾ ಬುರುಡೆಯಲ್ಲಿದ್ದ ಪಾನೀಯವನ್ನು ಒಂದೇ ಗುಟುಕಿಗೆ ಮುಗಿಸಿ ಹೊರಟು ಹೋದಳು!
~ ಯಾದಿರಾ

