ನಸ್ರುದ್ದೀನ್ ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಏನು?

Mullaಮುಲ್ಲಾ ನಸ್ರುದ್ದೀನ್ ಪ್ರತಿದಿನವೂ ತನ್ನ ಕತ್ತೆಯನ್ನು ರಾಜ್ಯದ ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಮರಳಿನ ಮೂಟೆಗಳಿರುತ್ತಿದ್ದವು.

ಗಡಿ ಕಾವಲು ಕಾವಲುಗಾರರು ಪ್ರತಿದಿನವೂ ತಪಾಸಣೆ ಮಾಡುತ್ತಿದ್ದರು. ಮೂಟೆಗಳಲ್ಲಿ ಮರಳು ಇರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಆದರೆ ನಸ್ರುದ್ದೀನ್ ಮಾತ್ರ ಬಹಳ ಪ್ರಾಮಾಣಿಕತೆಯಿಂದ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದ. ಕಾವಲುಗಾರರು ಅವನು ತಮಾಷೆ ಮಾಡುತ್ತಿದ್ದಾನೆಂದು ನಕ್ಕು ಸುಮ್ಮನಾಗುತ್ತಿದ್ದರು.

ಹೀಗೆ ಇದು ನಡೆಯುತ್ತಲೇ ಇತ್ತು. ಗಡಿ ಕಾವಲುಗಾರರು ತಡೆದು ಮೂಟೆಗಳನ್ನು ಪರಿಶೀಲಿಸುವುದು, ನಸ್ರುದ್ದೀನ್ ತಾನು ಕಳ್ಳಸಾಗಾಣೀಕೆ ಮಾಡುತ್ತಿದ್ದೀನೆಂದು ಹೇಳುವುದು ನಡೆದೇ ಇತ್ತು. ಕೊನೆಗೊಮ್ಮ ಬೇಸತ್ತ ಕಾವಲುಗಾರರು ಮೂಟೆಗಳನ್ನು ಕೆಳಗಿಳಿಸಿ ನೀರಲ್ಲಿ ಮುಳುಗಿಸಿ ನೋಡಿದರು. ಮರಳಿನ ನಡುವೆ ಚಿನ್ನದ ಹುಡಿ ಇದ್ದೀತು ಎಂದು ಪರೀಕ್ಷೆ ಮಾಡಿದರು. ಅವರಿಗೆ ಅಂಥದ್ದೇನೂ ಸಿಗಲಿಲ್ಲ.

ಹೀಗೇ ಕೆಲವು ವರ್ಷಗಳು ನಡೆಯಿತು. ಮುಲ್ಲಾ ಬಹಳ ದೊಡ್ಡ ಶ್ರೀಮಂತನಾದ. ಪಕ್ಕದ ರಾಜ್ಯಕ್ಕೆ ಹೋಗಿ ನೆಲೆಸಿದ. ಗಡಿಯ ಕಾವಲುಗಾರರಲ್ಲಿ ಒಬ್ಬನಿಗೆ ಬಡ್ತಿ ದೊರೆತು ಅವನೂ ವಿಶೇಷ ಕೆಲಸದ ನಿಮಿತ್ತ ಪಕ್ಕದ ರಾಜ್ಯಕ್ಕೆ ಹೋಗಬೇಕಾಗಿ ಬಂತು. ಅಲ್ಲಿ ಅವನು ನಸ್ರುದ್ದೀನನನ್ನು ಭೇಟಿಯಾದ. ಅವನ ಶ್ರೀಮಂತಿಕೆ ಕಂಡು ಬೆರಗಾಗಿ ಕೇಳಿದ; “ನಸ್ರುದ್ದೀನ್, ನಿನ್ನ ಶ್ರೀಮಂತಿಕೆ ನೋಡಿ ನೀನು ಕಳ್ಳಸಾಗಾಣಿಕೆ ಮಾಡುತ್ತಿದ್ದುದು ಖಾತ್ರಿಯಾಗಿದೆ. ನೀನು ಆ ರಾಜ್ಯದಲ್ಲಿದ್ದಾಗ ಅದೇನು ಕಳ್ಳ ಸಾಗಾಣಿಕೆ ಮಾಡುತ್ತಿದ್ದೆ? ನಾವು ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲವಲ್ಲ!” ಎಂದು ಕೇಳಿದ.

ಸೇದುತ್ತಿದ್ದ ಹುಕ್ಕಾ ಬದಿಗಿಟ್ಟ ನಸ್ರುದ್ದೀನ್, “ನಾನು ದಿನವೂ ಕತ್ತೆಗಳನ್ನು ಕಳ್ಳಸಾಗಾಣೀಕೆ ಮಾಡಿ ಪಕ್ಕದ ರಾಜ್ಯಗಳಲ್ಲಿ ಮಾರುತ್ತಿದ್ದೆ” ಎಂದು ಉತ್ತರಿಸಿದ.

Leave a Reply