ಸಂಕಲ್ಪ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿರಲಿ. ಯಾವ ಕಾರಣಕ್ಕೂ ನೀವು ನಿಮ್ಮ ಮೇಲೆ ಮೇಲೆ ಧ್ಯಾನವನ್ನು ಹೇರಿಕೊಳ್ಳುತ್ತಿಲ್ಲ, ನೀವು ಧ್ಯಾನ ಮಾಡಲು ಬಯಸುತ್ತಿದ್ದೀರಿ, ಆದಕ್ಕಾಗಿ ಸಿದ್ಧತೆ ನಡೆಸಿದ್ದೀರಿ ಅನ್ನುವುದು ನಿಮಗೆ ಖಾತ್ರಿ ಇರಬೇಕು.
ದೇಹವನ್ನು ಆರಾಮದಾಯಕ ರೀತಿಯಲ್ಲಿ ಅಣಿಗೊಳಿಸಿಕೊಂಡು ಕುಳಿತುಕೊಳ್ಳುವುದು ಹೇಗೆಂದು ಕಳೆದ ಲೇಖನದಲ್ಲಿ ನೋಡಿದಿರಿ. ಈಗ ಧ್ಯಾನ ಪ್ರಕ್ರಿಯೆಯ ಎರಡನೆ ಹಂತಕ್ಕೆ ಹೋಗೋಣ. ಈ ಪ್ರಕ್ರಿಯೆಯ ಎರಡನೆ ಹಂತ, ಧ್ಯಾನ ಮಾಡುವ ಸಂಕಲ್ಪ ತೊಡುವುದು.
ಧ್ಯಾನ ಮಾಡುವುದು ಎಂದರೆ ಎಲ್ಲ ಆಲೋಚನೆಗಳಿಂದ ಮುಕ್ತರಾಗಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ ನಮ್ಮ ಮನಸ್ಸು ನಾಗಾಲೋಟದಲ್ಲಿ ಓಡುತ್ತಾ ಕ್ಷಣಕ್ಕೊಂದು ಚಿತ್ರವನ್ನು ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿಸುತ್ತಾ ವಿಚಲಿತಗೊಳಿಸುತ್ತ ಇರುತ್ತದೆ. ನಾವು ಅಭ್ಯಾಸ ಬಲದಿಂದ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಆದ್ದರಿಂದ ಧ್ಯಾನಕ್ಕೆ ಕೂರುವ ಮೊದಲು ನಾವು ಚಿತ್ತಚಾಂಚಲ್ಯಕ್ಕೆ ಅವಕಾಶ ನೀಡುವುದಿಲ್ಲವೆಂದು ದೃಢ ಸಂಕಲ್ಪ ಮಾಡಬೇಕಾಗುತ್ತದೆ.
ಈಗ, ಸಂಕಲ್ಪ ತೊಡುವುದು ಹೇಗೆಂದು ನೋಡೋಣ.
ಯಾವುದೇ ಒಂದು ಸಂಗತಿ ನಮಗೆ ಮನದಟ್ಟಾಗಬೇಕು ಎಂದರೆ ಅದನ್ನು ನಮಗೆ ನಾವೇ ಹಲವಾರು ಬಾರಿ ಹೇಳಿಕೊಳ್ಳಬೇಕಾಗುತ್ತದೆ. ನಮ್ಮನ್ನು ನಾವು ಕನ್ವಿನ್ಸ್ ಮಾಡಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಹೀಗೆ ಮಾಡಿ. ನೀವು ಸರಿಯಾಗಿ ಕುಳಿತುಕೊಂಡ ನಂತರ ಮೊದಲ ಎರಡು – ಮೂರು ನಿಮಿಷ ನಿಮ್ಮನ್ನು ನೀವು ಗಮನಿಸಿಕೊಳ್ಳುತ್ತಾ “ನಾನು ಈಗ ಧ್ಯಾನಕ್ಕೆ ಕೂರುತ್ತಿದ್ದೇನೆ. ಯಾವುದೂ ನನ್ನನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ” ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಮನಸ್ಸಿನೊಳಗೆ ಇದನ್ನು ಬಿಟ್ಟೂಬಿಡದಂತೆ ಮನನ ಮಾಡಿಕೊಳ್ಳುತ್ತ ನಿಮ್ಮ ಒಳಗೆ ಆಗುತ್ತಿರುವ ಬದಲಾವಣೆಯನ್ನು ಗಮನಿಸಿಕೊಳ್ಳಿ. ಮೊದಲು ನಿಮ್ಮ ಸಂಕಲ್ಪ ವಾಕ್ಯ ಮನನ ಮಾಡಿಕೊಳ್ಳಲಿಕ್ಕೆ ಅಡ್ಡಿಯುಂಟಾಗುತ್ತದೆ. “ನಾನು ಈಗ ಧ್ಯಾನಕ್ಕೆ ಕೂರುತ್ತಿದ್ದೇನೆ” ಅಂದುಕೊಳ್ಳುವಾಗಲೇ ಸಂಕಲ್ಪ ತುಂಡರಿಸಿದಂತಾಗುತ್ತದೆ. ಆದರೆ ಅದಕ್ಕೆ ಅವಕಾಶ ನೀಡದಂತೆ ನೀವು ನಿರಂತರವಾಗಿ, ಸಂಕಲ್ಪ ನಿಮ್ಮೊಳಗೆ ದೃಢವಾಗಿ ನೆಲೆಯೂರುವವರೆಗೂ ಮನನ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಧ್ಯಾನಕ್ಕೆ ಕೂರದೆ ಬೇರೆ ದಾರಿಯೇ ಇಲ್ಲ, ಮನಸ್ಸಿನ ಒಳಗೆ ಇನ್ಯಾವ ಚಟುವಟಿಕೆಗಳಿಗೂ ಆಸ್ಪದವೇ ಇಲ್ಲ ಎನ್ನುವುದು ನಿಮ್ಮ ಅಂತರಂಗಕ್ಕೆ ಮನವರಿಕೆಯಾದ ನಂತವಷ್ಟೆ ಮುಂದಿನ ಹೆಜ್ಜೆ.
ಸಂಕಲ್ಪ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿರಲಿ. ಯಾವ ಕಾರಣಕ್ಕೂ ನೀವು ನಿಮ್ಮ ಮೇಲೆ ಮೇಲೆ ಧ್ಯಾನವನ್ನು ಹೇರಿಕೊಳ್ಳುತ್ತಿಲ್ಲ, ನೀವು ಧ್ಯಾನ ಮಾಡಲು ಬಯಸುತ್ತಿದ್ದೀರಿ, ಆದಕ್ಕಾಗಿ ಸಿದ್ಧತೆ ನಡೆಸಿದ್ದೀರಿ ಅನ್ನುವುದು ನಿಮಗೆ ಖಾತ್ರಿ ಇರಬೇಕು. ಧ್ಯಾನ ಹೇರಿಕೆಯಾದರೆ ನೀವು ಖಿನ್ನತೆಗೆ ಜಾರುವ ಅಪಾಯವಿರುತ್ತದೆ. ಏಕೆಂದರೆ ಧ್ಯಾನವೆಂದರೆ ಆಲೋಚನೆಗಳಿಲ್ಲದ ಸ್ಥಿತಿ. ನೀವು ಸಹಜವಾಗಿ ಧ್ಯಾನವನ್ನು ಬಯಸಿ ಕುಳಿತಾಗ ಆಲೋಚನೆಗಳಿಂದ ಮುಕ್ತರಾಗುತ್ತೀರಿ. ಅದೇ ವೇಳೆಗೆ, ಧ್ಯಾನವನ್ನು ನಿಮ್ಮ ಮೇಲೆ ಹೇರಿಕೊಂಡರೆ ನಿಮ್ಮೆಲ್ಲ ಆಲೋಚನೆಗಳು ನಿಮ್ಮ ಅಂತರಂಗದಲ್ಲಿ ಚರಟದಂತೆ ಹುದುಗಿ ಕೂರುತ್ತವೆ. ಮುಂದೆ ಇದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಆದ್ದರಿಂದ, ದೇಹವನ್ನು ಅಣಿಗೊಳಿಸಿಕೊಳ್ಳುವಾಗಲೇ ಧ್ಯಾನ ಮಾಡಲು ನೀವು ಹೃತ್ಪೂರ್ವಕವಾಗಿ ಬಯಸುತ್ತಿದ್ದೀರೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಅದು ನಿಮಗೆ ಖಾತ್ರಿಯಾದ ನಂತರವಷ್ಟೆ ಸಂಕಲ್ಪದ ಹಂತಕ್ಕೆ ಮುಂದುವರಿಯಿರಿ.
(ಮುಂದುವರೆಯುವುದು)
Excellent thoughtful writings. Basic mental stability. Appreciate..