ಧ್ಯಾನ ಮಾಡಲು ಕಲಿಯಿರಿ #3 : ಪೂರಕ ರೇಚಕ ಕುಂಭಕ ಮತ್ತು ಉಸಿರಾಟ

ದೇಹವನ್ನು ಆರಾಮದಾಯಕ ರೀತಿಯಲ್ಲಿ ಅಣಿಗೊಳಿಸಿಕೊಳ್ಳುವ, ಸಂಕಲ್ಪ ತೊಡುವ ಎರಡು ಹಂತಗಳನ್ನು ಈ ಹಿಂದಿನ ಲೇಖನಗಳಲ್ಲಿ ನೋಡಿರುವಿರಿ. ಈಗ ಉಸಿರಾಟದ ಹಂತವನ್ನು ತಿಳಿಯೋಣ. 

dhyana

ದೇಹವನ್ನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿಕೊಂಡು, ಸಂಕಲ್ಪವನ್ನು ದೃಢಪಡಿಸಿಕೊಂಡ ನಂತರದ ಹಂತ ಪೂರಕ ರೇಚಕ ಮತ್ತು ಕುಂಭಕ.

“ನಾನು ಇನ್ನು ಧ್ಯಾನದಲ್ಲಿ ನೆಲೆ ನಿಲ್ಲುತ್ತೇನೆ” ಎಂದುಕೊಳ್ಳುತ್ತಾ ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ಒಳಗೆ ಎಳೆದುಕೊಳ್ಳಬೇಕು. ಬಳಿಕ ಒಳಗೆ ಎಳೆದುಕೊಂಡ ಉಸಿರನ್ನು ಒಂದೆರಡು ಸೆಕೆಂಡ್’ಗಳ ಕಾಲವಾದರೂ ಹಿಡಿದಿಟ್ಟುಕೊಳ್ಳಬೇಕು. ಅನಂತರ ನಿಧಾನವಾಗಿ ಹೊರಬಿಡಬೇಕು. ಹಾಗೆ ಹೊರಬಿಟ್ಟ ಮೇಲೆ, ಕೂಡಲೇ ಉಸಿರನ್ನು ಎಳೆದುಕೊಳ್ಳಬಾರದು. ಒಂದೆರಡು ಸೆಕೆಂಡ್’ಗಳ ಕಾಲ ಉಸಿರಾಟವನ್ನು ನಿಲ್ಲಿಸಿ, ಮತ್ತೆ ನಿಧಾನವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಹೀಗೆ ಎರಡು ನಿಮಿಷಗಳ ಕಾಲ ಮಾಡಬೇಕು.

ಈಗ ನೀವು ಮುಂದಿನ ಹಂತಕ್ಕೆ ಅಣಿಯಾದಿರಿ.

ಇನ್ನೀಗ ಬೆನ್ನನ್ನು ನೇರವಾಗಿಟ್ಟುಕೊಂಡು, ಕಣ್ಣು ಮುಚ್ಚಿಕೊಂಡು, ಕದಲದಂತೆ ಕುಳಿತುಕೊಳ್ಳಬೇಕು. ನಂತರ, ಪ್ರಜ್ಞಾಪೂರ್ವಕವಾಗಿ ನೀಧಾನವಾಗಿ ಉಸಿರಾಟವನ್ನು ನಡೆಸಬೇಕು. ಉಸಿರಾಡುವಾಗ ಗಾಳಿಯು ಒಳಗೆ ಹೋಗುವುದನ್ನೂ ಹೊರಕ್ಕೆ ಬರುವುದನ್ನೂ ಗಮನಿಸುತ್ತಿರಬೇಕು.

ಹೀಗೆ ಗಮನಿಸುವುದರಲ್ಲೂ ಎರಡು ವಿಧಗಳಿವೆ. ಒಂದು – ನೀವು ಎಳೆದುಕೊಂಡ ಉಸಿರು ಹೊಕ್ಕುಳನ್ನು ತಲುಪುವವರೆಗೂ ಗಮನಿಸುವುದು. ಈ ವಿಧಾನದಲ್ಲಿ ಉಸಿರಾಡುವಾಗ ಹೊಟ್ಟೆಯು ಹಿಂದೆ ಮುಂದೆ ಚಲಿಸುವುದನ್ನು ಗಮನಿಸಿ. ಇನ್ನು ಎರಡನೇ ವಿಧಾನ – ುಸಿರು ಪ್ರವೇಶಿಸುವ ಮೂಗಿನ ತುದಿಯಲ್ಲಿ ಗಮನವನ್ನು ಕೇಂದ್ರೀಕರಿಸುವುದು. ಉಸಿರಾಡುವಾಗ ಮೂಗಿನ ಹೊಳ್ಳೆಗೆ ಸ್ಪರ್ಷಿಸುವ ಗಾಳಿಯನ್ನು ಗಮನಿಸಿ.

ಹೀಗೆ ಹತ್ತು ನಿಮಿಷಗಳ ಕಾಲ ನಿಮ್ಮ ಉಸಿರಾಟವನ್ನು ಗಮನಿಸುತ್ತಿರಿ. ನಿಮಗೆ ಯಾವುದು ಅನುಕೂಲ ಅನ್ನಿಸುತ್ತದೆಯೋ ಆ ವಿಧಾನವನ್ನೆ ಆಯ್ಕೆ ಮಾಡಿಕೊಳ್ಳಿ.

ಆರಂಭಿಕ ಹಂತದಲ್ಲಿರುವ ಕೆಲವರಿಗೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಏಕಾಗ್ರತೆ ತಪ್ಪಬಹುದು. ಅಂಥವರು ಮೊದಲನೇ ವಿಧಾನ ಅನುಸರಿಸಿ. ಬೇಕಿದ್ದರೆ ಹಗುರವಾಗಿ ಹೊಕ್ಕುಳ ಮೇಲೆ ನಿಮ್ಮ ಕೈಯನ್ನು ಇರಿಸಿಕೊಂಡು ಚಲನೆಯನ್ನು ಅನುಭವಿಸಿ, ಅಲ್ಲಿ ಗಮನವನ್ನು ಇರಿಸಿ.

ಹೀಗೆ ನಿಧಾನವಾಗಿ, ಪ್ರಜ್ಞಾಪೂರ್ವಕವಾಗಿ ಉಸಿರಾಟ ನಡೆಸುವುದರಿಂದ ನಿಮ್ಮ ಮನಸ್ಸಿನ ಭಾವ ತರಂಗಗಳು ಶಾಂತವಾಗುತ್ತವೆ. ಕಲಕಿದ ಕೊಳದ ಬಳೆಯಂಥ ಅಲೆಗಳು ತಿಳಿಯಾದಾಗ ಕನ್ನಡಿಯಂತೆ ತೋರುತ್ತದೆಯಲ್ಲವೆ? ಆಗ ಅಲ್ಲಿ ತೋರುವ ಬಿಂಬ ಸ್ಪಷ್ಟವಾಗಿರುತ್ತದೆ ಅಲ್ಲವೆ? ಹಾಗೆಯೇ ಈಗ ನಿಮ್ಮ ಅಂತರಂಗದ ತರಂಗಗಳು ಕ್ರಮಬದ್ಧ ಉಸಿರಾಟದಿಂದ ಶಾಂತವಾಗಿವೆ. ಇನ್ನೀಗ ಧ್ಯಾನದಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಲು ತಯಾರಾಗಿದ್ದೀರಿ.

ಮುಂದಿನ ಹಂತವನ್ನು ನಾಳೆ ನೋಡೋಣ.

Leave a Reply