ಕಥಾಸರಿತ್ಸಾಗರ : ಕದ್ದು ಕಥೆ ಕೇಳಿದ ಪುಷ್ಪದಂತನಿಗೆ ಶಾಪ

ಸೋಮದೇವನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರವು 21,500 ಶ್ಲೋಕಗಳುಳ್ಳ ಕೃತಿ. ನೂರಾರು ಕಥೆಗಳು ಬಂದು ಸೇರಿ ಉಂಟಾದ ಕಥಾ ಸಮುದ್ರವಿದು. ಆದ್ದರಿಂದಲೇ ಇದಕ್ಕೆ ‘ಕಥಾ ಸರಿತ್ಸಾಗರ’ ಎಂಬ ಹೆಸರು. ಈ ಕಥೆಗಳನ್ನು ಹಲವು ಆಕರಗಳಿಂದ ಸಂಗ್ರಹಿಸಿ, ಸರಳವಾಗಿ ಅನುವಾದಿಸಿ ನೀಡುವ ಪ್ರಯತ್ನವಿದು… 

katha

ಕೈಲಾಸದಲ್ಲಿ ಒಮ್ಮೆ ಪಾರ್ವತಿಯು ಶಿವನಿಗೆ ಕಥೆ ಹೇಳೆಂದು ಪೀಡಿಸಿದಳು. ಶಿವನು ತನ್ನ ಪ್ರೀತಿಯ ಮಡದಿಯ ಕೋರಿಕೆಯನ್ನು ನಿರಾಕರಿಸಲಾಗದೆ, ವಿದ್ಯಾಧರರ ಕಥೆ ಹೇಳುವುದಾಗಿ ಒಪ್ಪಿಕೊಂಡನು. ಆಗ ಪಾರ್ವತಿಯು, “ನೀನು ಹೇಳುವ ಕಥೆಯನ್ನು ನಾನೊಬ್ಬಳೇ ಕೇಳಬೇಕು” ಎಂದು ತಾಕೀತು ಮಾಡಿ, “ಇಲ್ಲಿ ಯಾರೂ ಪ್ರವೇಶಿಸದಂತೆ ಬಾಗಿಲಲ್ಲೇ ನಿಂತು ನೋಡಿಕೋ” ಎಂದು ನಂದಿಗೆ ಆದೇಶಿಸಿದಳು.

ಅದರಂತೆ ನಂದಿ ಬಾಗಿಲನ್ನು ಮುಚ್ಚಿ ಹೊರಗೆ ನಿಂತುಕೊಂಡನು. ಶಿವನು ಪಾರ್ವತಿಗೆ ಏಳು ವಿದ್ಯಾಧರರ ಕಥೆಗಳನ್ನು ಹೇಳತೊಡಗಿದನು.

ಅದೇ ವೇಳೆಗೆ ಅಲ್ಲಿಗೆ ಬಂದ ಪುಷ್ಪದಂತನೆಂಬ ಗಣೋತ್ತಮನು ನಂದಿ ಅಡ್ಡಿಪಡಿಸಿದರೂ ಒಳಗೆ ಹೋಗಲೆತ್ನಿಸಿದನು. ನಂದಿಯು ಬಿರುಸು ಮಾತುಗಳಿಂದ ಅವನನ್ನು ತಡೆದಾಗ ಪುಷ್ಪದಂತನು ಮತ್ತಷ್ಟು ಕುತೂಹಲಿಯಾದನು. ಏನಾದರಾಗಲಿ ಒಳಗೆ ಹೋಗಿಯೇ ತೀರುವೆನೆಂದು ತನ್ನ ಯೋಗಶಕ್ತಿಯಿಂದ ಒಂದು ದುಂಬಿಯ ರೂಪ ತಾಳಿ ಒಳ ಹೊಕ್ಕನು. ಪಾರ್ವತಿಯೊಡನೆ ತಾನೂ ಕಥೆಗಳನ್ನು ಕೇಳಿ ಆನಂದಿಸಿದನು.

ಮನೆಗೆ ಬಂದ ಪುಷ್ಪದಂತ, ಯಾರಿಗೂ ಹೇಳಕೂಡದು ಎಂದು ಎಚ್ಚರಿಕೆ ನೀಡಿ, ತನ್ನ ಪತ್ನಿಗೆ ವಿದ್ಯಾಧರರ ಕಥೆಗಳನ್ನು ಹೇಳಿದನು. ಅವನ ಹೆಂಡತಿ ಜಯಾ, ತಾನು ಹೊಸ ಕಥೆಗಳನ್ನು ಕೇಳಿದೆನೆಂದು ಸಂಭ್ರಮ ಪಟ್ಟಳು. ಹಾಗೂ ಗಂಡನ ಎಚ್ಚರಿಕೆಯನ್ನೂ ಮೀರಿ, ಆ ಕಥೆಗಳನ್ನು ಯಾರಿಗಾದರೂ ಹೇಳಲೇಬೇಕು ಎಂಬ ತುಡಿತ ಉಂಟಾಯಿತು. ಆಕೆ ಪಾರ್ವತಿಯ ಕೋಣೆಯ ದ್ವಾರಪಾಲಕಿ. ಆದ್ದರಿಂದ, ಪಾರ್ವತಿಗೇ ಅವನ್ನು ಹೇಳುವೆನೆಂದು ಹೋದಳು.

ಜಯಾ ಹೇಳಿದ ಕಥೆಗಳನ್ನು ಕೇಳಿ ಪಾರ್ವತಿಗೆ ಶಿವನ ಮೇಲೆ ಸಿಟ್ಟು ಬಂತು. “ನೀನು ಹೇಳಿದ ಕಥೆಗಳು ಹೊಸತೇನಲ್ಲ, ಜಯಾಳಿಗೂ ಅವು ಗೊತ್ತು” ಎಂದು ಬೈದಳು.

ಹೆಂಡತಿ ಬೈದರೆ ಯಾವ ಗಂಡನಿಗೆ ತಾನೆ ಬೇಸರವಾಗುವುದಿಲ್ಲ? ಅದರಲ್ಲೂ ತನ್ನ ಪ್ರೀತಿಯ ಮಡದಿಯ ಮುನಿಸು ಶಿವನಿಗೆ ತಾಳಲಾಗಲಿಲ್ಲ. ತನ್ನ ದಿವ್ಯ ದೃಷ್ಟಿಯಿಂದ ನೋಡಿ, ಪುಷ್ಪದಂತನ ವಂಚನೆಯನ್ನು ತಿಳಿದನು. ಪಾರ್ವತಿಗೂ ಅದನ್ನು ತಿಳಿಸಿದನು.

ಈಗ ಪಾರ್ವತಿಯ ಕೋಪ ಪುಷ್ಪದಂತನೆಡೆಗೆ ತಿರುಗಿತು. ಅವನನ್ನು ಆ ಕೂಡಲೇ ಕರೆಯಲು ಆದೇಶಿಸಿದಳು. ಪುಷ್ಪದಂತನ ಆಪ್ತಸ್ನೇಹಿತ ಮಾಲ್ಯವಂತನೆಂಬ ಗಣೋತ್ತಮ ಅವನನ್ನು ಕರೆತಂದನು. ಪಾರ್ವತಿಯು ಪುಷ್ಪದಂತನಿಗೆ “ನೀನು ನಮ್ಮನ್ನು ವಂಚಿಸಿದ್ದೀಯ. ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟು” ಎಂದು ಶಾಪ ಕೊಟ್ಟಳು.

ಪುಷ್ಪದಂತ ತೀವ್ರ ಸಂತಾಪದಿಂದ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡನು. ಗೆಳೆಯ ಮಾಲ್ಯವಂತನೂ ಅವನಿಗಾಗಿ ಪ್ರಾರ್ಥಿಸಿದನು. ಅವನ ಮೇಲೂ ಕೋಪ ತಾಳಿದ ಪಾರ್ವತಿ ಅವನನ್ನೂ ಶಪಿಸಿದಳು. ಕೊನೆಗೆ ಜಯಾ ಶಿವಶಿವೆಯರ ಕಾಲಿಗೆ ಬಿದ್ದು ತನ್ನ ಪತಿಯನ್ನೂ ಅವನ ಗೆಳೆಯನನ್ನೂ ಮನ್ನಿಸಿ ಶಾಪವಿಮೋಚನೆ ನೀಡಬೇಕೆಂದು ಕೇಳಿಕೊಂಡಳು.

ಜಯೆಯ ಮನವಿಗೆ ಕರಗಿದ ಪಾರ್ವತಿಯು, “ಸುಪ್ರತೀಕ ಎಂಬ ಯಕ್ಷನು ಕುಬೇರನ ಶಾಪದಿಂದ ವಿಂಧ್ಯಾರಣ್ಯದಲ್ಲಿ ಕಾಣಭೂತಿಯೆಂಬ ಪಿಶಾಚವಾಗಿದ್ದಾನೆ. ಅವನನ್ನು ನೋಡಿದಾಗ ನಿನಗೆ ಪೂರ್ವಜನ್ಮ ಸ್ಮರಣೆಯಾಗಿ, ಅವನಿಗೆ ಈ ಕತೆಯನ್ನು ಹೇಳುವೆ. ಆಗ ನಿನಗೆ ಶಾಪ ವಿಮೋಚನೆಯಾಗುವುದು. ಹಾಗೂ ಕಥೆಯನ್ನು ಕೇಳಿದ ಕಾಣಭೂತಿಯು ಅದನ್ನು ಮಾಲ್ಯವಂತನಿಗೆ ಹೇಳಿ ಶಾಪವಿಮುಕ್ತಿ ಪಡೆಯುವನು. ಈ ಕತೆಯನ್ನು ಲೋಕದಲ್ಲಿ ಪ್ರಚುರಪಡಿಸಿದ ಮೇಲೆ ಮಾಲ್ಯವಂತನೂ ಶಾಪವನ್ನು ಕಳೆದು ಕೈಲಾಸಕ್ಕೆ ಮರಳುವನು” ಎಂದು ಹೇಳಿದಳು.

ಹೀಗೆ ಕದ್ದು ಕಥೆ ಕೇಳಿದ ತಪ್ಪಿಗೆ ಪುಷ್ಪದಂತನಿಗೂ, ಅವನ ಪರ ವಹಿಸಿದ್ದಕ್ಕೆ ಮಾಲ್ಯವಂತನಿಗೂ ಕಥೆ ಹೇಳುವ ಮತ್ತು ಕೇಳುವ ಪ್ರಕ್ರಿಯೆಯ ಮೂಲಕವೇ ಪಾರ್ವತಿಯು ಶಾಪವಿಮೋಚನೆನ್ನು ವಿಧಿಸಿದಳು.

Leave a Reply