ಕಥಾ ಸರಿತ್ಸಾಗರ : ವರರುಚಿಯಾದ ಪುಷ್ಪದಂತ ಮತ್ತು ಕಾಣಭೂತಿಯಾದ ಸುಪ್ರತೀಕರ ಭೇಟಿ

ಕಥೆಗಳನ್ನು ಕದ್ದು ಕೇಳಿದ ಪುಷ್ಪದಂತ ಮತ್ತು ಆತನ ಪರವಹಿಸಿದ ಮಾಲ್ಯವಂತರು ಪಾರ್ವತಿಯಿಂದ ಶಾಪ ಪಡೆದುದನ್ನೂ ಕಾಣಭೂತಿ ಎಂಬ ಪಿಶಾಚದೊಡನೆ ವ್ಯವಹರಿಸುವ ಮೂಲಕ ಶಾಪವಿಮೋಚನೆ ಆಗುವುದೆಂಬ ಅಭಯ ಪಡೆದುದನ್ನೂ ಹಿಂದಿನ ಕಥೆಯಲ್ಲಿ ಓದಿದ್ದೀರಿ. ಈಗ ಶಪಿತ ಪುಷ್ಪದಂತನು ಭೂಮಿಯಲ್ಲಿ ಎಲ್ಲಿ ಹುಟ್ಟಿದನು, ಮತ್ತು ಕಾಣಭೂತಿಯನ್ನು ಭೇಟಿಯಾದಾಗ ನಡೆದುದೇನು ಎಂದು ನೋಡೋಣ.

katha2

ಪಾರ್ವತಿಯಿಂದ ಶಾಪ ಪಡೆದ ಪುಷ್ಪದಂತನು ಕೌಶಾಂಬಿ ಎಂಬ ಮಹಾನಗರದಲ್ಲಿ ಕಾತ್ಯಾಯನ ವಂಶದಲ್ಲಿ ವರರುಚಿ ಎಂಬ ಹೆಸರಿನಿಂದ ಹುಟ್ಟಿದನು ಹಾಗೂ ಮಾಲ್ಯವಂತನು ಸುಪ್ರತಿಷ್ಠಿತ ಎಂಬ ನಗರದಲ್ಲಿ ಗುಣಾಢ್ಯನೆಂಬ ಹೆಸರಿನಿಂದ ಜನಿಸಿದನು.

ವರರುಚಿಯು ಎಲ್ಲ ವಿದ್ಯೆಗಳನ್ನು ಕರಗತ ಮಾಡಿಕೊಂಡು ಖ್ಯಾತಿ ಗಳಿಸಿದ್ದನು. ನಂದ ರಾಜನ ಮಂತ್ರಿಯಾಗಿ ನೇಮಕಗೊಂಡಿದ್ದ ವರರುಚಿಗೆ ಕ್ರಮೇಣ ಲೌಕಿಕ ವ್ಯವಹಾರಗಳಲ್ಲಿ ಅನಾಸಕ್ತಿ ಬೆಳೆಯಿತು. ವೈರಾಗ್ಯ ತಾಳಿ ವಿಂಧ್ಯವಾಸಿನೀ ದೇವತೆಯ ದರ್ಶನ ಪಡೆಯಲು ತಪಸ್ಸನ್ನು ಆಚರಿಸಿದನು. ಕನಸಿನಲ್ಲಿ ಕಾಣಿಸಿಕೊಂಡ ದೇವಿಯು ಆತನಿಗೆ “ವಿಂಧ್ಯಾಟವಿಗೆ ಹೋಗು, ಅಲ್ಲಿ ಕಾಣಭೂತಿಯೆಂಬ ಪಿಶಾಚವನ್ನು ಕಾಣು” ಎಂದು ಆದೇಶವಿತ್ತಳು.

ಅದರಂತೆ ವರರುಚಿಯು ವಿಂಧ್ಯಾಟವಿಗೆ ಹೋದನು. ಅಲ್ಲಿ ದೊಡ್ಡದೊಂದು ಮರದಲ್ಲಿ ಹತ್ತಾರು ಮರಿ ಪಿಶಾಚಗಳಿಂದ ಸುತ್ತುವರಿದಿದ್ದ ಕಾಣಭೂತಿಯನ್ನು ಕಂಡನು. ವರರುಚಿಯನ್ನು ನೋಡುತ್ತಲೇ ಕಾಣಭೂತಿಯು ಕೆಳಗಿಳಿದು ಆತನ ಕಾಲಿಗೆ ನಮಸ್ಕರಿಸಿದನು.

ಅವನ ನಡವಳಿಕೆಯನ್ನು ಕಂಡು ವರರುಚಿಗೆ ಅಚ್ಚರಿಯಾಯಿತು. “ಇಂಥಾ ಸನ್ನಡತೆಯನ್ನು ಹೊಂದಿರುವ ನೀನಗೇಕೆ ಈ ದುರ್ಗತಿ ಬಂದಿತು? ನೀನೇಕೆ ಪಿಶಾಚವಾದೆ?” ಎಂದು ಪ್ರಶ್ನಿಸಿದನು.

ಅದನ್ನು ಕೇಳಿ ಕಾಣಭೂತಿಯು ತನ್ನ ಕಥೆಯನ್ನು ಹೇಳತೊಡಗಿದನು:

ಕಾಣಭೂತಿಯು ಕುಬೇರನ ಸೇವಕನಾಗಿದ್ದ ಸುಪ್ರತೀಕನೆಂಬ ಒಬ್ಬ ಯಕ್ಷ. ಅವನಿಗೆ ಸ್ಥೂಲ ಶಿರನೆಂಬ ರಾಕ್ಷಸನ ಜೊತೆಗೆ ಸ್ನೇಹವಿದ್ದಿತು. ಇದರಿಂದ ಕೋಪಗೊಂಡ ಕುಬೇರನು “ರಾಕ್ಷಸರ ಗೆಳೆತನ ಮಾಡಿರುವ ನೀನು ಪಿಶಾಚವಾಗು” ಎಂದು ಶಾಪಕೊಟ್ಟನು. ಇದರಿಂದ ಸುಪ್ರತೀಕನು ತೀವ್ರ ಆಘಾತಕ್ಕೊಳಗಾದನು. ಆಗ ಅವನ ತಮ್ಮ ದೀರ್ಘಜಂಘನು ಕುಬೇರನ ಕಾಲಿಗೆ ಬಿದ್ದು ಶಾಪವಿಮೋಚನೆಗಾಗಿ ಬೇಡಿಕೊಂಡನು. ಆಗ ಕುಬೇರನು, “ಶಪಿತನಾಗಿ ಭೂಮಿಯಲ್ಲಿ ಜನಿಸುವ ಪುಷ್ಪದಂತನಿಂದ ಬೃಹತ್ಕಥೆಯನ್ನು ಕೇಳಿ, ಅವನ ಜೊತೆಗೇ ಶಾಪ ಪಡೆದು ಮನುಷ್ಯನಾಗಿ ಹುಟ್ಟುವ ಮಾಲ್ಯವಂತನಿಗೆ ಅದನ್ನು ಹೇಳಬೇಕು. ಆಗಲೇ ಇವನಿಗೆ ಶಾಪ ವಿಮೋಚನೆ” ಎಂದನು.

ಆದರೆ ಕಾಣಭೂತಿ ಪಿಶಾಚವಾಗಿ ಹುಟ್ಟುತ್ತಲೇ ಅವನಿಗೆ ಶಾಪದ ವಿಚಾರವೂ ತನ್ನ ಯಕ್ಷ ಜನ್ಮವೂ ಮರೆತುಹೋದವು. ಆದರೆ ಸಂಸ್ಕಾರಗಳು ಹಾಗೆಯೇ ಉಳಿದಿದ್ದವು. ಪಿಶಾಚವಾಗಿ ಉಜ್ಜಯಿನಿಯ ಸ್ಮಶಾನದಲ್ಲಿ ಇರುತ್ತಿದ್ದಾಗ ಒಮ್ಮೆ ಶಿವ ಪಾರ್ವತಿಯರು ಅಲ್ಲಿಗೆ ಬಂದರು. ಪಾರ್ವತಿಯು ಶಿವನನ್ನು ಕುರಿತು, “ನಿನಗೆ ಸ್ಮಶಾನದಲ್ಲಿ, ತಲೆಬುರುಡೆಗಳಲ್ಲಿ ಇಷ್ಟೊಂದು ಆಸಕ್ತಿ ಯಾಕೆ?” ಎಂದು ಕೇಳಿದಳು. ಆಗ ಶಿವನು ತಾನು ಸ್ಮಶಾನವಾಸಿಯಾದ ಕಥೆಯನ್ನು ಹೇಳತೊಡಗಿದನು.

 

Leave a Reply