ವರರುಚಿಯಾಗಿ ಹುಟ್ಟಿದ ಪುಷ್ಪದಂತನು ತನ್ನ ಜೀವನವೃತ್ತಾಂತವನ್ನು ಕಾಣಭೂತಿಗೆ ಹೇಳುತ್ತಿದ್ದಾನೆ. ಈ ಕಥನದಲ್ಲೀಗ ವರರುಚಿಯು ತಾನು ತನ್ನ ಗುರು ವರ್ಷೋಪಾಧ್ಯಯರಿಂದ ಕೇಳಿ ತಿಳಿದ ಪಾಟಲೀಪುತ್ರ ನಗರದ ಕಥೆಯನ್ನು ಹೇಳುತ್ತಿದ್ದಾನೆ.
ಪುತ್ರಕನಿಗೆ ಯಜ್ಞದತ್ತನು ದಾನಧರ್ಮಾದಿಗಳನ್ನು ಮಾಡಲು ಸೂಚಿಸಿ, ಅದಕ್ಕೆ ಪೂರಕವಾಗಿ ಬ್ರಹ್ಮದತ್ತನ ಕಥೆಯನ್ನು ಹೇಳಲು ಆರಂಭಿಸಿದನು.ಮುಂದೆ…
ವಾರಣಾಸಿಯಲ್ಲಿ ಬ್ರಹ್ಮದತ್ತನೆಂಬ ರಾಜನಿದ್ದನು. ರಾತ್ರಿ ಅರಮನೆಯ ಉಪ್ಪರಿಗೆಯಲ್ಲಿ ನಿಂತಿದ್ದಾಗ ಬಂಗಾರದ ಮೈಕಾಂತಿಯುಳ್ಳ ಹಂಸ ಜೋಡಿಯೊಂದು ರೆಕ್ಕೆ ಬೀಸಿಕೊಂಡು ಅವನೆದುರೇ ಹಾರಿಹೋದವು. ಅವುಗಳ ಮೋಹಕ ಬಣ್ಣಕ್ಕೆ, ಹೊಳಪಿಗೆ ರಾಜನು ಮಾರುಹೋದನು. ಏನಾದರೂ ಮಾಡಿ ಆ ಹಂಸ ಪಕ್ಷಿಗಳನ್ನು ಪತ್ತೆ ಮಾಡಬೇಕು, ಅವನ್ನು ಮನದಣಿಯೆ ನೋಡಬೇಕು ಅನ್ನುವ ತೀವ್ರ ಹಂಬಲ ಅವನಲ್ಲಿ ಉಂಟಾಯಿತು. ಆ ಚಿಂತೆಯಲ್ಲೇ ಅವನು ಮುಳುಗಿಹೋದನು.
ರಾಜನ ಅನ್ಯಮನಸ್ಕತೆಯನ್ನು ಕಂಡು ಮಂತ್ರಿಯು ಕಾರಣವೇನೆಂದು ವಿಚಾರಿಸಿದನು. ಆಗ ರಾಜನು ಚಿನ್ನದ ಹಂಸಪಕ್ಷಿಗಳ ಬಗ್ಗೆ ಹೇಳಿದನು. ಆಗ ಮಂತ್ರಿಯು ಅವನಿಗೆ ಅರಮನೆಯ ಉದ್ಯಾನವನದಲ್ಲಿ ಸಕಲ ಸೌಲಭ್ಯಗಳನ್ನುಳ್ಳ ವಿಶಾಲವಾದ ಕೊಳವನ್ನು ನಿರ್ಮಿಸಲು ಹೇಳಿದನು. ಅದರಂತೆ ರಾಜನು ಕೊಳವನ್ನು ನಿರ್ಮಿಸಿ ಪಕ್ಷಿಗಳಿಗೆ ಅನುಕೂಲವಾಗುವ ಸವಲತ್ತುಗಳನ್ನು ಕಲ್ಪಿಸಿದನು.
ರಾಜ್ಯದಲ್ಲಿ ಹಾದುಹೋಗುವ ಹಕ್ಕಿಗಳೆಲ್ಲವೂ ಈ ಕೊಳದಲ್ಲಿಳಿದು ದಾಹ ತಣಿಸಿಕೊಂಡು, ಕೆಲ ದಿನಗಳವರೆಗೆ ವಿಶ್ರಮಿಸಿ ಪ್ರಯಾಣ ಮುಂದುವರೆಸುತ್ತಿದ್ದವು.
ಹಾಗೆಯೇ ದಿನಗಳು ಕಳೆದವು. ಕೊನೆಗೂ ರಾಜನು ನಿರೀಕ್ಷಿಸುತ್ತಿದ್ದ ಚಿನ್ನದ ಹಂಸಪಕ್ಷಿಗಳು ಅಲ್ಲಿಗೆ ಬಂದವು. ಅವನ್ನು ಕಂಡ ರಾಜನು ದೂರದಿಂದಲೇ ಅವುಗಳನ್ನು ಮಾತಾಡಿಸಿ ಸ್ನೇಹ ಬೆಳೆಸಿದನು. ಹಂಸಪಕ್ಷಿಗಳು ಒಂದು ವಾರದವರೆಗೆ ಅಲ್ಲಿ ತಂಗುವುದಾಗಿ ತಿಳಿಸಿದವು. ಅವುಗಳ ವಿಶ್ವಾಸ ಸಂಪಾದಿಸಿದ ರಾಜನು ಅವು ಬಂಗಾರದ ಮೈ ಪಡೆದಿದ್ದು ಹೇಗೆಂದು ಕೇಳಿದನು. ಆಗ ಹಂಸಪಕ್ಷಿ ಜೋಡಿಯು ಹೇಳಿದವು;
“ರಾಜಾ! ನಾವು ಕಳೆದ ಜನ್ಮದಲ್ಲಿ ಕಾಗೆಗಳಾಗಿದ್ದೆವು. ನಾವಿಬ್ಬರೂ ಆಹಾರಕ್ಕಾಗಿ ಕಿತ್ತಾಡುತ್ತಾ ನಿರ್ಜನವಾದ ಶಿವದೇವಾಲಯವನ್ನು ಪ್ರವೇಶಿಸಿ, ಕಿತ್ತಾಟದ ಶ್ರಮದಿಂದ ಅಲ್ಲಿಯೇ ಬಿದ್ದು ಸತ್ತುಹೋದೆವು. ಶಿವ ಸನ್ನಿಧಿಯಲ್ಲಿ ಪ್ರಾಣ ತೊರೆದ ಪುಣ್ಯದಿಂದ, ಅಲ್ಲೇ ಆವರಣದಲ್ಲಿದ್ದ ದಿವ್ಯ ಸರೋವರದಲ್ಲಿ ಚಿನ್ನದ ದೇಹವನ್ನು ಧರಿಸಿದ, ಪೂರ್ವಜನ್ಮಸ್ಮರಣೆಯುಳ್ಳ ಹಮಸಗಳಾಗಿ ಜನಿಸಿದೆವು” ಎಂದವು.
ರಾಜನು ತಾನು ಪಕ್ಷಿಗಳ ಸೌಂದರ್ಯಕ್ಕೆ ಮನಸೋತಿರುವುದಾಗಿಯೂ, ಕೆಲಕಾಲ ಅಲ್ಲಿಯೇ ತಂಗಿದ್ದು ತನ್ನ ಮನಸ್ಸಂತೋಷಪಡಿಸಬೇಕಾಗಿಯೂ ಕೇಳಿಕೊಂಡನು. ಹಂಸಗಳು ಅದಕ್ಕೊಪ್ಪಿದವು. ರಾಜನೂ ಸಂತುಷ್ಟನಾದನು.
ಈ ದೃಷ್ಟಾಂತವನ್ನು ಹೇಳಿದ ಯಜ್ಞದತ್ತನು ಪುತ್ರಕನಿಗೆ, “ರಾಜನ್! ನೀನೂ ಬ್ರಹ್ಮದತ್ತನಂತೆಯೇ ಬ್ರಾಹ್ಮಣರಿಗೆ ದಾನಾದಿಗಳನ್ನು ಏರ್ಪಡಿಸಿಸು. ಒಂದಲ್ಲ ಒಂದು ದಿನ ನಿನ್ನ ತಂದೆ ಮತ್ತು ಸಹೋದರರು ಬಂದರೂ ಬರಬಹುದು ಎಂದನು.
ಮುಂದುವರೆಯುವುದು….
(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ: