ಮೂಲ: ನಜತ್ ಒಝ್ಕಾಯಾ (ಸೂಫಿ ಸಂತಕವಿ) | ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನ ಬಗ್ಗೆ
ತೀವ್ರವಾಗಿ ಉದ್ವೇಗಗೊಂಡಿದ್ದ ಒಬ್ಬ ಸಾಧಕ
ನನ್ನಂಥ ಅನುಭವಿ ದರ್ವೇಶಿಯಿಂದ ಸಲಹೆ ಪಡೆಯಲು
ನಿನ್ನೆ ನನ್ನ ಮನೆಗೆ ಬಂದಿದ್ದ.
“ಚುಂಬನ ಇಷ್ಟಾನಾ?” ನಾನು ಕೇಳಿದ್ದೇ ತಡ
ಆತ, ಅಲ್ಲಿದ್ದ ಖುರ್ಚಿ ಎತ್ತಿ ನನ್ನ ಮೇಲೆ ಎಸೆದ;
“ನಿಮ್ಮಂಥವರ ಬಗ್ಗೆ ಕೇಳಿದ್ದೆ, ಇವತ್ತು ನೋಡಿದೆ” ಆತ ಸಿಟ್ಟಿನಿಂದ ಕಂಪಿಸುತ್ತಿದ್ದ…
ಸುತ್ತಿ ಬಳಸಿ ಕೇಳಿ ಪ್ರಯೋಜನವಿಲ್ಲವೆಂದು ನೇರವಾಗಿ ಮಾತಿಗಿಳಿದೆ;
“ಭಗವಂತ ಮೋಹಗೊಂಡು
ನಿನ್ನ ಕುತ್ತಿಗೆಯಿಂದ ಪಾದದವರೆಗೆ
ಮುತ್ತಿಡುತ್ತ ಬಂದರೆ ನಿನಗೆ ಹೇಗೆ ಅನಿಸಬಹುದು?”
ಈ ಬಾರಿಯಂತೂ ಆತನ ಮುಖದಲ್ಲಿ ನಿಜವಾದ ಆತಂಕ ಎದ್ದು ಕಾಣುತ್ತಿತ್ತು.
“ನೋಡು, ಪ್ರಾರ್ಥನೆಯಿಂದ ನಿನಗೆ ಆಗಬೇಕಾದದ್ದಾರೂ ಏನು?” ನಾನು ಕೇಳಿದೆ.
ಆತ ನೆಲ ನೋಡುತ್ತ ನಿಂತ;
ನಾನು ಮತ್ತೊಮ್ಮೆ ಕೇಳಿದೆ,
“ಭಗವಂತನಿಗೆ ನಿನ್ನ ಪ್ರಾರ್ಥನೆಯಿಂದ ಏನಾಗಬೇಕಾಗಿದೆ?”
ಆತನ ಮೌನ ಮುಂದುವರೆದಿತ್ತು.
ತಪ್ಪು ಉತ್ತರ ಕೊಡಲು ಹೆದರಿದ ಸ್ಕೂಲ್ ಹುಡುಗನ ಹಾಗೆ
ಕೈಕಟ್ಚಿಕೊಂಡು ನಿಂತಿದ್ದ.
ನಾನು ಚಹಾ ಮಾಡಲು ಎದ್ದೆ.
ಬಹುಶಃ ನಾನು ಅಂಥ ಒಳ್ಳೆ ದರ್ವೇಶ ಅಲ್ಲವೆನೋ?
ಭಗವಂತನೊಂದಿಗಿನ ನನ್ನ ಪ್ರಣಯ ಅಷ್ಟು ಹಳೆಯದಾದರೂ
ಚುಂಬನದ ಬಗ್ಗೆ ಗೊತ್ತಿರದ ಜನರೂ ಇರಬಹುದೆಂಬ ಕಲ್ಪನೆಯೂ ನನಗಿಲ್ಲವಲ್ಲ!
ಅವನ ಕಪ್ ಗೆ ಚಹಾ ಸುರಿದು ಅಕ್ಕರೆಯಿಂದ
ಅವನನ್ನೇ ಗಮನಿಸತ್ತ ಕೇಳಿದೆ,
“ನಿನ್ನ ಹಳ್ಳಿಯಲ್ಲಿ, ಹರೆಯದ ಹುಡುಗಿಯೊಬ್ಬಳು ಯಾವತ್ತಾದರೂ ನಿನ್ನ ಬಯಸಿದ್ದಿದೆಯೆ?”
ಆತ ಮುಗುಳ್ನಗುತ್ತ ತಲೆ ಅಲ್ಲಾಡಿಸಿದ “ಹೌದು ಬೇಕಾದಷ್ಟು ಸಲ”
“ನೋಡು, ಆ ಹುಡುಗಿಯರು ಭಗವಂತನ ಹಾಗೆ
ಅವರ ಹೃದಯ ನಿನ್ನೊಳಗೆ ನೆಲೆ ನಿಂತಿದೆ, ಮಾತಿಗಂಥ ಕೆಲಸ ಇಲ್ಲ ಇಲ್ಲಿ”
“ನಿನಗಿರುವ ಆಯ್ಕೆಗಳು ಎರಡೇ
ಒಂದು, ಪ್ರಣಯವನ್ನು ಪಕ್ಕಾ ಖಚಿತಪಡಿಸುವುದು
ಇಲ್ಲಾ ಭಗವಂತನನ್ನು ಅವನ ಪಾಡಿಗೆ ಬಿಟ್ಟು ಬಿಡುವುದು”
ಸ್ಪಷ್ಟವಾಗಿ ಹೇಳಿದೆ.
ನೇಣು ಹಾಕಲು ಬಂದವನನ್ನು ನೋಡುವಂತೆ ನನ್ನ ಆತಂಕದಿಂದ ನೋಡಿದ.
ಒಂದೂ ಮಾತನಾಡದೆ ತನ್ನ ಚೀಲ ಹೆಗಲಿಗೇರಿಸಿಕೊಂಡು
ಹೊರಟು ಹೋದ.
ಅಷ್ಟರಲ್ಲಿ ಚಹಾದ ಕಪ್ ತೆಗೆದುಕೊಂಡು ಹೋಗಲು
ಬಂದ ನನ್ನ ಹೆಂಡತಿ ಕೇಳಿದಳು,
“ಹೊಸಬನಾ?”
“ ಹೂಂ”
“ಗಂಡಸರಿಗೆ ಬದ್ಧತೆ ಎಂದರೆ ಭಯ” ನಕ್ಕಳು
ನಾನೂ ನಕ್ಕೆ