ಸಂತೋಷ ಘಟಿಸುವುದು ವರ್ತಮಾನದಲ್ಲಿ ~ ಜಿಡ್ಡು ಕೃಷ್ಣಮೂರ್ತಿ

Jiddu

ನಾವು ಏನನ್ನು ಯೋಚಿಸುತ್ತೇವೋ ಅದೇ ಆಗಿರುತ್ತೇವೆ. ನಮ್ಮ ಅಲೋಚನೆಗಳೇ ನಮ್ಮ ಮನಸ್ಸು. ನಮ್ಮ ಮನಸ್ಸು ನಮ್ಮ ಭೂತಕಾಲದ ಸ್ಮರಣೆಯ ಫಲ. ಭೂತಕಾಲದ ಸ್ಮರಣೆಯಿಂದ ಆಲೋಚನೆಗಳೂ ಉತ್ಪನ್ನವಾಗುತ್ತವೆ. ನಾವು ಭವಿಷ್ಯದ ಬಗ್ಗೆ ಆಲೋಚಿಸುವುದೂ ಕೂಡಾ ಭೂತದ ಆಲೋಚನೆಗಳ ಆಧಾರದ ಮೇಲೆಯೇ.

ಗತಿಸಿಹೋದುದರ ನೆನಪುಗಳನ್ನು ಮರೆತರೆ ಅಲ್ಲಿ ಆಲೋಚನೆ ಎಂಬುದೇ ಇರುವುದಿಲ್ಲ. ನೆನಪು ಎ೦ಬುದು ಕಾಲಕ್ಕೆ ಸಂಬಂಧಿಸಿದ್ದು. ಆದರೆ ಸ೦ತೋಷ ಹಾಗಲ್ಲ. ಅದು ಕಾಲದ ಉತ್ಪನ್ನವಲ್ಲ. ಸ೦ತೋಷ ಘಟಿಸುವುದು ವರ್ತಮಾನದಲ್ಲಿ. ವರ್ತಮಾನ ಒ೦ದು ಕಾಲರಹಿತ ಸ್ಥಿತಿ. ಆದ್ದರಿಂದಲೇ ಕ್ರಾ೦ತಿ ಸಾಧ್ಯವಾಗುವುದು ವರ್ತಮಾನದಲ್ಲಿ ಮಾತ್ರ. ಅದು ಭವಿಷ್ಯದಲ್ಲೆಲ್ಲೋ ಘಟಿಸುವುದಿಲ್ಲ. ಅದು ವರ್ತಮಾನದ ಘಟನೆ. ಪುನರುಜ್ಜೀವನ ಸಂಭವಿಸುವುದು ಈಗ, ಇಂದು ಹೊರತು ನಾಳೆಯಲ್ಲ.

ಜೀವನದ ಸೌಂದರ್ಯ ಇರುವುದೇ ವರ್ತಮಾನದಲ್ಲಿ. ಅದು ಕಳೆದ ಕ್ಷಣದಂತೆ ಇರುವುದಿಲ್ಲ. ಇಂದು ನೆನ್ನೆಯ ದಿನದಂತೆ ಇರುವುದಿಲ್ಲ. ಆದರೆ ನಾವು ಭೂತದ, ಗತಿಸಿಹೋದ ಕಾಲದ ನೆನಪುಗಳ ಹೊರೆಯನ್ನು ಅದೆಷ್ಟು ಹೊತ್ತುಕೊಂಡಿರುತ್ತೇವೆ ಅಂದರೆ, ನಮಗೆ ವರ್ತಮಾನದ ಹೊಸತನವನ್ನು ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲ. ನಮ್ಮನ್ನು, ನಮ್ಮವರನ್ನು ಹೊಸತಾಗಿ ನೋಡಲು ಸಾಧ್ಯವಾಗುವುದಿಲ್ಲ.

ಅದನ್ನು ಸಾಧ್ಯ ಮಾಡಿಕೊಳ್ಳಬೇಕು. ವರ್ತಮಾನದಲ್ಲಿ ಬದುಕುವುದನ್ನು ರೂಢಿಸಿಕೊಂಡರೆ ಅದು ಖಂಡಿತ ಸಾಧ್ಯವಾಗುತ್ತದೆ. ವರ್ತಮಾಣದಲ್ಲಿ ನಾವು ಇರುವಿಕೆಯ ಅನುಭವವನ್ನು, ಆನಂದವನ್ನು ಹೊಂದಬಹುದು. ಅನುಭವವಾಗುತ್ತಿರುವ ಕ್ಷಣದಲ್ಲಿ ಅಲ್ಲಿ ಗಮನಿಸುವವನೂ ಇರುವುದಿಲ್ಲ, ಗಮನಿಸಲ್ಪಡುವುದೂ ಇರುವುದಿಲ್ಲ. ಅಲ್ಲಿ ಅನುಭವಿಸುವಿಕೆ ಮಾತ್ರ ಇರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.