ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #2 ~ ಸಾಂತ್ವನ ಧ್ಯಾನ

ಪ್ರೇಮ ವೈಫಲ್ಯದ ಗಾಯವನ್ನು ಮಾಯಿಸುವ ‘ಸಾಂತ್ವನ ಧ್ಯಾನ’ ನಡೆಸುವ ವಿಧಾನ ಇಲ್ಲಿದೆ. ~ ಚಿತ್ಕಲಾ

ಪ್ರೇಮ, ಯಾವುದೇ ವ್ಯಕ್ತಿಯ ಬದುಕಿನಲ್ಲಿ ಘಟಿಸುವ ಅತ್ಯಂತ ಮಧುರವಾದ ಸಂಗತಿ. ಆದ್ದರಿಂದ ಪ್ರೇಮ ವೈಫಲ್ಯ ಭಾವುಕವಾಗಿ ಆಳವಾದ ಗಾಯವನ್ನು ಉಂಟು ಮಾಡಿಬಿಡುತ್ತದೆ. ಪ್ರೇಮದ ಭಾವನೆ ನಮಗೆ ಅದೆಷ್ಟು ಪ್ರಿಯವೆಂದರೆ, ನಾವು ಅದರಿಂದ ಉಂಟಾಗುವ ಗಾಯವನ್ನೂ ಸುಖಿಸುತ್ತೇವೆ. ಅದನ್ನು ಮರೆಯದಂತೆ ಕಾಪಾಡಿಕೊಳ್ಳುತ್ತೇವೆ. ಎಲ್ಲಿಯವೆರೆಗೆ ಗಾಯದ ನೆನಪು ಅಳಿಯುವುದಿಲ್ಲವೋ ಅಲ್ಲಿಯವರೆಗೆ ಅದು ಮಾಯುವುದೂ ಇಲ್ಲ. ಅದನ್ನು ಹಾಗೇ ಉಳಿಸಿಕೊಂಡು, ಅದರಿಂದ ಉಂಟಾಗುವ ನೋವನ್ನು ಮತ್ತೆ ಮತ್ತೆ ಕೆದಕಿ ಅನುಭವಿಸುವುದು ನಮಗೆ ಅಭ್ಯಾಸವಾಗಿಬಿಡುತ್ತದೆ.

ಪ್ರಿಯತಮರೊಂದಿಗೆ ಸಹಜೀವನ ನಡೆಸಲು ಅವಕಾಶ ಸಿಗದೆ ಹೋಗುವುದನ್ನೇ ನಾವು ಪ್ರೇಮ ವೈಫಲ್ಯ ಅಂದುಕೊಳ್ಳುತ್ತೇವಲ್ಲವೆ? ಇದು ಕೆಲವೊಮ್ಮೆ ಖಿನ್ನತೆಗೆ ದೂಡುತ್ತದೆ. ಇನ್ನು ಕೆಲವರಲ್ಲಿ ಮಾನಸಿಕ ಒತ್ತಡ, ಉದ್ವೇಗಗಳನ್ನು ಉಂಟುಮಾಡಿದರೆ, ಮತ್ತೆ ಕೆಲವರು ಬೈಪೋಲಾರ್’ನಂಥ ತೀವ್ರ ಮಾನಸಿಕ ಸಮಸ್ಯೆಗೂ ಒಳಗಾಗುತ್ತಾರೆ. ಆದ್ದರಿಂದ, ಆರಂಭಿಕ ಹಂತದಲ್ಲೇ ಇದನ್ನು ಗುರುತಿಸಿಕೊಂಡು ಮನಸ್ಸನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವುದು ಒಳ್ಳೆಯದು.

ಸಾಂತ್ವನ ಧ್ಯಾನ

ಇದು ಘಾಸಿಗೊಂಡ ಮನಸ್ಸನ್ನು ಮುದ್ದಿಸುವ ಧ್ಯಾನ ವಿಧಾನ. ಮುಚ್ಚಿದ ಕೋಣೆಯಲ್ಲಿ, ಮುಂಜಾನೆಯ ವೇಳೆ ಇದನ್ನು ಮಾಡುವುದು ಒಳ್ಳೆಯದು. ಬೆಳಗ್ಗೆ 5ರಿಂದ 6 ಗಂಟೆಯ ಹೊತ್ತಿಗೆ ಈ ಧ್ಯಾನಕ್ಕೆ ಕುಳಿತರು ಮನಸ್ಸು ಹೆಚ್ಚು ಪ್ರಫುಲ್ಲಿತವಾಗುವುದು.

ಧ್ಯಾನಕ್ಕೆ ಕೂರುವ ಕೋಣೆ ಆಹ್ಲಾದಕರವಾಗಿರಲಿ. ಕಿಟಕಿಯನ್ನು ತೆರೆದಿಟ್ಟುಕೊಳ್ಳಿ. ಹೊರಗಿನ ಎಳೆ ಬೆಳಕು, ಹೊರಜಗತ್ತು ಎಚ್ಚರಗೊಳ್ಳುವ ಸದ್ದು ನಿಮ್ಮನ್ನು ತಲುಪಲಿ. ವಜ್ರಾಸನದಲ್ಲಿ ಕುಳಿತುಕೊಳ್ಳಿ. ಕಣ್ಮುಚ್ಚಿ ದೀರ್ಘವಾಗಿ, ನಿಧಾನವಾಗಿ ಉಸಿರಾಟ ಆರಂಭಿಸಿ. ಐದು ನಿಮಿಷ ಹೀಗೆ ಮಾಡುವುದರಿಂದ ಉಸಿರಾಟಕ್ಕೊಂದು ರಿದಮ್ ಸಿಗುತ್ತದೆ. ಮುಂದೆ ಧ್ಯಾನ ಮುಗಿಯುವವರೆಗೂ ಅದನ್ನು ಕಾಯ್ದುಕೊಳ್ಳಬೇಕು.

ನಿಮ್ಮ ಪ್ರೇಮವೈಫಲ್ಯದ ಗಾಯದ ಮೇಲೆ ಗಮನವನ್ನು ಕೇಂದ್ರೀಕರಿಸಿ. ನಿಮಗೆ ನೋವಾಗಿರುವುದು ಅಹಂಕಾರಕ್ಕೆ ಪೆಟ್ಟು ಬಿದ್ದುದರಿಂದಲೋ? ಬಯಸಿದವರು ಜೊತೆಯಾಗಲಿಲ್ಲ ಅನ್ನುವ ನಿರಾಶೆಯಿಂದಲೋ ಎಂದು ಅವಲೋಕಿಸಿ. ನಿಮ್ಮ ಒಳಗಣ್ಣಿನ ನೋಟವನ್ನು ನಿಮ್ಮ ಮೆದುಳಿನತ್ತ ಹರಿಸಿ. ಪ್ರಾಮಾಣಿಕವಾಗಿರಿ. ಅಲ್ಲಿ ಓಡುತ್ತಿರುವ ಆಲೋಚನೆಗಳನ್ನು ಸಾಕ್ಷೀಭಾವದಿಂದ ಗಮನಿಸಿ. ಸಂಭಾಷಣೆಗಳನ್ನು ಹೆಣೆಯಬೇಡಿ. ಸಮಜಾಯಿಷಿಗಳನ್ನು ಕೊಡಬೇಡಿ. ಮನಸ್ಸು ತನ್ನಿಂತಾನೆ ಚಿತ್ರಗಳನ್ನು, ವಾದಗಳನ್ನು ಸೃಷ್ಟಿಸುತ್ತಾ ನಿಮ್ಮನ್ನು ಬಲೆಯಲ್ಲಿ ಕೆಡುವಲು ಯತ್ನಿಸುವುದು. ನೀವು ಆ ಬಲೆಯಲ್ಲಿ ಬೀಳಬೇಡಿ. ನಿಧಾನವಾಗಿ ಉಸಿರಾಡುತ್ತಾ ಅದನ್ನು ಗಮನಿಸುತ್ತಿರಿ.

ಆಲೋಚನೆಗಳ ಹರಿವು ಕಡಿಮೆಯಾಗುತ್ತಾ ಸಾಗಿದ ಮೇಲೆ ನಿಮ್ಮ ಮೆದುಳಿನ ಮೇಲೆ ಬಿಳಿಯ ಬೆಳಕಿನ ಧಾರೆಯನ್ನು ಕಲ್ಪಿಸಿಕೊಳ್ಳಿ. ಅದು ನಿಮ್ಮ ಮೆದುಳನ್ನು ಚುಂಬಿಸಲಿ. ಹೌದು. ಇದು ಕೃತಕವೆನ್ನಿಸುತ್ತದೆ. ಆದರೆ ನೀವಿದನ್ನು ಮಾಡಲೇಬೇಕು. ತಲೆಯ ಕಿಟಕಿ ತೆರೆದು, ಅದರಿಂದ ಬೆಳಕಿನ ಕೋಲೊಂದು ಒಳಗೆ ತೂರುತ್ತಿರುವಂತೆಯೂ, ಅದು ನಿಮ್ಮ ಮೆದುಳಿನ ಮೇಲೆ ಬಿದ್ದು ತೋಯಿಸುತ್ತಿರುವಂತೆಯೂ ಭಾವಿಸಿ. ಆ ಭಾವನೆ ಕ್ರಮೇಣ ನಿಮ್ಮ ಅನುಭವಕ್ಕೆ ಬರತೊಡಗುತ್ತದೆ. ನಿಮ್ಮ ಮೆದುಳು, ನಿಮ್ಮ ಆಲೋಚನೆಗಳು ಶಾಂತವಾಗುತ್ತಾ, ಸಮಾಧಾನಗೊಳ್ಳುತ್ತಾ ಕ್ರಮೇಣ ನಿಶ್ಚಲವಾಗುತ್ತವೆ. ಈ ನಿಶ್ಚಲತೆಯ ಆನಂದವನ್ನು, ಸಮಾಧಾನವನ್ನು ನೀವು ಅನುಭವಿಸುತ್ತೀರಿ. ನಿಮ್ಮ ಮೆದುಳಿನ ಮೇಲೆ ಸಹಾನುಭೂತಿಯ ನೋಟವನ್ನು ಹರಿಸಿ. ಅದನ್ನು ಮುದ್ದಿಸಿ, ಸಂತೈಸಿ. ಆದರೆ ಅಲ್ಲಿ ಅನುಕಂಪ ಇರಬಾರದು. ನೀವು ನಿಮ್ಮ ದುಃಖದ ಕಾರಣವನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅಹಮ್ಮಿಗೆ, ಬಯಕೆಗೆ, ನಿರೀಕ್ಷೆಗೆ, ಅಸ್ತಿತ್ವಕ್ಕೆ, ಕನಸಿಗೆ ಘಾಸಿಯಾಗಿದ್ದರಿಂದ ನಿಮಗೆ ದುಃಖವಾಗಿದೆ ಅಷ್ಟೆ. ಪ್ರೇಮ ಯಾವತ್ತೂ ದುಃಖವನ್ನು ತರುವುದಿಲ್ಲ. ತಂದುಕೊಂಡಿರುವುದು ನೀವು. ಇದಕ್ಕೆ ಕಾರಣ ಆ ನಿಟ್ಟಿನಲ್ಲಿ ಆಲೋಚಿಸುವ ನಿಮ್ಮ ಮೆದುಳು. ಆದ್ದರಿಂದ ಮೆದುಳನ್ನು ಸಹಾನುಭೂತಿಯಿಂದ ಸಂತೈಸಿ.

ಮೆದುಳನ್ನು ಸಂತೈಸುವುದು ಅಂದರೇನು? ಮೆದುಳು ಇರುವ ಭಾಗದಲ್ಲಿ ಒಳಗಣ್ಣಿನ ಪ್ರೇಮಪೂರ್ಣ ನೋಟವನ್ನು ಹರಿಸುವುದು; ಭಾವಿಸಿದ ಬೆಳಕಿನಲ್ಲಿ ಅದನ್ನು ತೋಯಿಸುವುದು; ಅದರ ಆಲೋಚನಾಕ್ರಮವನ್ನು ವಿಶಾಲಗೊಳಿಸಲು ಪ್ರೇರೇಪಿಸುವುದು; ಅಷ್ಟೇ. ಕಿಟಕಿ ತೆರೆದ ಕೋಣೆಯಲ್ಲಿ, ಬೆಳಗಿನ ಮುಂಜಾವದಲ್ಲಿ ಇದನ್ನು ಮಾಡಬೇಕಿರುವ ಉದ್ದೇಶವೂ ಅದೇ. ಹೇಗೆ ಕಿಟಕಿಯ ಮೂಲಕ ಹೊರಗಿನ ಬೆಳಕು, ಹೊರಜಗತ್ತು ನಿಮ್ಮ ಕೋಣೆಯನ್ನು ಪ್ರವೇಶಿಸುವುದೋ, ನಿಮ್ಮ ಒಳಗಣ್ಣಿನ ಮೂಲಕ ಅವು ನಿಮ್ಮ ಮೆದುಳನ್ನು ತಲುಪುವವು.

ಬೆಳಗಿನ ವೇಳೆ ಈ ಸಾಂತ್ವನ ಧ್ಯಾನವನ್ನು ಒಂದು ತಿಂಗಳವರೆಗೆ ಪ್ರತಿದಿನವೂ ಮಾಡಿ. ನಿಮ್ಮೊಳಗೆ ಮಡುಗಟ್ಟಿದ ಪ್ರೇಮವನ್ನು ನಿಮ್ಮ ಕುಟುಂಬ, ನಿಮ್ಮ ಸ್ನೇಹಿತರು, ಪ್ರಾಣಿಪಕ್ಷಿಗಳು, ಸಂಬಂಧವೇ ಇಲ್ಲದ ದಾರಿಹೋಕರು ಅಥವಾ ಸಹಪ್ರಯಾಣಿಕರು – ಇತ್ಯಾದಿ ಜನರೊಡನೆ ಹಂಚಿಕೊಳ್ಳಿ. ನಿಮ್ಮ ಓದು, ನಿಮ್ಮ ಉದ್ಯೋಗ, ನಿಮ್ಮ ಹವ್ಯಾಸಗಳತ್ತ ಗಮನ ಕೊಡಿ. ವೈಯಕ್ತಿಕ ಜೀವನದ ಯಶಸ್ಸು ಪ್ರೇಮವೈಫಲ್ಯದ ಗಾಯವನ್ನು ಅಳಿಸಿಹಾಕಿ, ಪ್ರೇಮಿಯನ್ನಷ್ಟೆ ನೆನಪಿನಲ್ಲಿ ಉಳಿಸುವುದು.

ನೆನಪಿಡಬೇಕಾದ ಅಂಶ : ಸಾಧ್ಯವಾದಷ್ಟೂ ಒಬ್ಬರೇ ಇರುವುದನ್ನು ಅವಾಯ್ಡ್ ಮಾಡಿ. ಲವಲವಿಕೆಯ ಸಂಗೀತವನನನ್ನು ಕೇಳಿ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ರೂಢಿ ಮಾಡಿಕೊಳ್ಳಿ. ಇದರಿಂದ ರಾತ್ರಿಯ ನೀರವತೆಯಲ್ಲಿ ಪ್ರೇಮದ ನೆನಪು ಉಲ್ಬಣಗೊಳ್ಳುವುದನ್ನು ತಡೆಯಬಹುದು ಹಾಗೂ ಬೆಳಗಿನ ಆಹ್ಲಾದವನ್ನು ತುಂಬಿಕೊಂಡು ಜೀವನ ಪ್ರೀತಿ ಬೆಳೆಸಿಕೊಳ್ಳಲು ಅನುಕೂಲವಾಗುವುದು.

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.