ಇಸ್ರೇಲಿನ ದೊರೆ ದಾವೂದ ತನ್ನ ಸೇನಾಬಲವನ್ನು ವಿಸ್ತರಿಸುತ್ತಿದ್ದ. ಆಶ್ವದಳಕ್ಕೆ ಹೊಸ ಕುದುರೆಗಳನ್ನು ಸೇರಿಸಬೇಕಾಗಿತ್ತು. ಅದಕ್ಕಾಗಿ ಇಬ್ಬರು ಅಶ್ವದಳದ ಮೇಲ್ವಿಚಾರಕರನ್ನು ನಿಯೋಜಿಸಿದ.
ವಾರಗಳ ನಂತರ ತಲಾ ಆರು ಕುದುರೆಗಳೊಂದಿಗೆ ಮರಳಿ ಬಂದ ಅಶ್ವದಳದ ಮೇಲ್ವಿಚಾರಕರು ದಾವೂದನ ಎದುರು ಅವನ್ನು ನಿಲ್ಲಿಸಿದರು.
ದಾವೂದ ಮೊದಲನೆಯ ಮೇಲ್ವಿಚಾರಕನ್ನು ಕುರಿತ, “ನೀನು ತಂದಿರುವ ಕುದುರೆಗಳ ವೈಶಿಷ್ಟ್ಯತೆ ಏನು?” ಎಂದು ಕೇಳಿದ.
ಅವನು ಕುದುರೆಗಳಿಗೆ ಸನ್ನೆ ಮಾಡಿದ. ಮೊದಲನೆ ಕುದುರೆ ಹಿಂಗಾಲುಗಳ ಮೇಲೆ ನಿಂತಿತು. ಎರಡನೆಯದು ಮುಂಗಾಲುಗಳ ಮೇಲೆ ನಿಂತಿತು. ಮೂರನೆಯದು ಹಾರುವ ಭಂಗಿಯಲ್ಲೂ ನಾಲ್ಕನೆಯದು ಈಜುವ ಭಂಗಿಯಲ್ಲೂ ಐದನೆಯದು ವ್ಯಾಯಾಮ ಭಂಗಿಯಲ್ಲೂ ಆರನೆಯದು ಬೆನ್ನ ಮೇಲೂ ನಿಂತವು.
ಮೇಲ್ವಿಚಾರಕ ಜಂಭದ ನಗೆ ನಕ್ಕ.
ದಾವೂದ ಈಗ ಎರಡನೆಯವನನ್ನು ಕುರಿತು ಆತನ ಕುದುರೆಗಳ ವೈಶಿಷ್ಟ್ಯವೇನೆಂದು ಕೇಳಿದ.
“ವೀಶೇಷವೇನಿಲ್ಲ ಮಹಾರಾಜ! ಅತ್ಯುತ್ತಮ ಕುದುರೆಗಳು ಏನೆಲ್ಲ ಮಾಡಬಲ್ಲವೋ ಅದನ್ನೇ ಈ ಕುದುರೆಗಳೂ ಮಾಡುವವು” ಅಂದ.
ಅವನಿಗೆ ಬಹುಮಾನ ನೀಡುತ್ತಾ, “ಈ ಕುದುರೆಗಳನ್ನು ಸೇನೆಯ ಲಾಯದಲ್ಲಿ ಕಟ್ಟಿಸು. ನಮಗೆ ಬೇಕಿರುವುದು ಯುದ್ಧದಲ್ಲಿ ಉಪಯೋಗಕ್ಕೆ ಬರುವ ಕುದುರೆಗಳೇ ಹೊರತು ಸರ್ಕಸ್ಸಿನ ಕುದುರೆಗಳಲ್ಲ” ದಾವೂದನೆಂದ.