ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ತಾವೋ ಮಾರ್ಗದಲ್ಲಿ
ಹತೋಟಿಗೆ ಬಲಪ್ರಯೋಗ ,
ಗೆಲುವಿಗೆ ಆಯುಧ, ನಿಷಿದ್ಧ.
ಸೈನಿಕರು ಓಡಾಡಿದಲ್ಲೆಲ್ಲ
ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು.
ಹಿಂಸೆ ಅಂಟುರೋಗ,
ಉದ್ದೇಶ ಎಷ್ಟೇ ಒಳ್ಳೆಯದಾದರೂ….
ನಿಜದ ನಾಯಕ
ಯುದ್ಧದ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ
ಮಲಗಿರುವ ಜ್ವಾಲಾಮುಖಿ ಕಾಣಬಲ್ಲ.
ಅದಕ್ಕೇ ಅವನಿಗೆ ಯುದ್ಧದ ಬಗ್ಗೆ ಹೆಮ್ಮೆಯಿಲ್ಲ.
ಅವನಿಗೆ ತನ್ನ ಬಗ್ಗೆ ನಂಬಿಕೆ
ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ,
ಅವನಿಗೆ ತನ್ನ ಬಗ್ಗೆ ಸಮಾಧಾನ
ಆದ್ದರಿಂದ ಬೇರೆಯವರ ಒಪ್ಪಿಗೆ ಬೇಕಿಲ್ಲ,
ಅವನು ತನ್ನನ್ನು ಒಪ್ಪಿಕೊಂಡಿರುವದರಿಂದ
ಜಗತ್ತು ಅವನನ್ನು ಒಪ್ಪಿಕೊಂಡಿದೆ.