ಪಾನೀಯದ ಬುರುಡೆಯನ್ನು ಖಾಲಿ ಮಾಡಿಯೇ ಯಾಕಿಡಬೇಕು?

ಮರುಭೂಮಿಯ ಮಹಾಯೋಗಿನಿ ರಾ-ಉಮ್
ನಭಾ ಒಕ್ಕುಂದ ಬಿಡಿಸಿದ ಚಿತ್ರ : ಮರುಭೂಮಿಯ ಮಹಾಯೋಗಿನಿ ರಾ-ಉಮ್

ರಾ-ಉಮ್ ಆಶ್ರಮದಲ್ಲಿ ಒಂದು ಕಠಿಣ ನಿಯಮವಿತ್ತು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಬುರುಡೆಗೆ ಪಾನೀಯವನ್ನು ತುಂಬಿಸಿದರೆ, ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರವಷ್ಟೇ ಅದನ್ನು ಗೂಡಿನಲ್ಲಿ ಇಡಬಹುದಿತ್ತು. ಅಲ್ಲಿಯ ತನಕವೂ ಬುರುಡೆಯನ್ನು ಕಾಪಾಡುವುದು ಕಡ್ಡಾಯ.

ಇದನ್ನು ಎಲ್ಲರೂ ಸಹಜವಾಗಿಯೇ ಮಾಡುತ್ತಿದ್ದುದರಿಂದ ಈ ನಿಯಮ ಯಾಕಿದೆ ಎಂಬ ಪ್ರಶ್ನೆಯನ್ನು ಯಾರೂ ಕೇಳಿರಲಿಲ್ಲ.

ಉತ್ತರದ ಹಿಮ ಪ್ರದೇಶದ ಊರೊಂದರಿಂದ ಬಂದು ಆಶ್ರಮ ಸೇರಿದ್ದ ಶಿಷ್ಯನಿಗೆ ಈ ನಿಯಮವೇಕಿದೆ ಎಂದು ಅರ್ಥವಾಗಿರಲಿಲ್ಲ. ಉಳಿದವರು ಮಾಡುವುದನ್ನು ನೋಡಿ ತಾನೂ ಅದನ್ನು ಅನುಸರಿಸಿದ. ಆದರೆ ಅವನ ಮನಸ್ಸಿನಲ್ಲಿ ಈ ಪ್ರಶ್ನೆ ಕೊರೆಯುತ್ತಲೇ ಇತ್ತು.

ಹಿರಿಯ ಶಿಷ್ಯರನ್ನು ಕೇಳಿದಾಗ ಅವರು ನಕ್ಕು ಸುಮ್ಮನಾದರೇ ಹೊರತು ಉತ್ತರ ಕೊಡಲು ಮುಂದಾಗಲಿಲ್ಲ. ಮತ್ತಷ್ಟು ಒತ್ತಾಯ ಮಾಡಿದಾಗ, ಅವರು ‘ನಿನಗೆ ಅರ್ಥವಾಗುತ್ತದೆ, ಸ್ವಲ್ಪ ದಿನ ಕಾದು ನೋಡು’ ಎಂದರು.

ತಿಂಗಳುಗಳು ಉರುಳಿದರೂ ಅವನಿಗೆ ಉತ್ತರ ದೊರೆಯಲಿಲ್ಲ.
ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ಅವನ ಕುತೂಹಲ ಬತ್ತಲಿಲ್ಲ.

ವರ್ಷಗಳು ಉರುಳಿ ಸ್ನಾತಕನಾಗುವ ಹಂತಕ್ಕೆ ತಲುಪಿದ. ತರ್ಕದಲ್ಲಿ ಜಾಣನಾಗಿದ್ದ ಆತ ಮುಂದೆ ಲೌಕಿಕನಾಗಿ ಬದುಕುವ ತೀರ್ಮಾನಕ್ಕೆ ಬಂದ. ಸ್ನಾತಕನಾಗಿ ಆಶ್ರಮಕ್ಕೆ ವಿದಾಯ ಹೇಳುವ ದಿನ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯನ್ನು ರಾ-ಉಮ್‌ಗೇ ಕೇಳಿಬಿಡೋಣ ಎಂದು ತೀರ್ಮಾನಿಸಿದ.

ಸಂಜೆಯ ಪಾನೀಯ ಸೇವನೆಯ ಹೊತ್ತಿನಲ್ಲಿ ರಾ-ಉಮ್ ಎದುರು ಹೋಗಿ ನಿಂತ. ಅವಳು ಕಣ್ಣಲ್ಲೇ ಪ್ರಶ್ನಿಸಿದಳು. ಅವನು ಕೇಳಿದ, ‘ಬುರುಡೆಗೆ ಒಮ್ಮೆ ಪಾನೀಯವನ್ನು ತುಂಬಿಸಿದ ನಂತರ ಅದನ್ನು ಮುಗಿಸಲೇಬೇಕೆಂಬ ನಿಯಮದ ತರ್ಕವೇನು?’

ರಾ-ಉಮ್‌ಗೆ ಸಿಟ್ಟು ನೆತ್ತಿಗೇರಿತು ‘ಮೂರ್ಖ! ನಿನ್ನ ಬುರುಡೆಯನ್ನು ನೆಲಕ್ಕೆಸೆ’ ಎಂದು ಆದೇಶಿಸಿದಳು.

ಶಿಷ್ಯ ಬುರುಡೆಯಲ್ಲಿದ್ದ ಕೊನೆಯ ಗುಟುಕನ್ನು ಗಂಟಲಿಗಿಳಿಸಿ ಗುರುವಿನ ಆದೇಶವನ್ನು ಪಾಲಿಸಿದ. ಬುರುಡೆ ಒಡೆದು ಚೂರು ಚೂರಾಯಿತು.

ರಾ-ಉಮ್ ಶಾಂತ ಧ್ವನಿಯಲ್ಲಿ ಹೇಳಿದಳು, ‘ಆಶ್ರಮದಲ್ಲಿ ಬೆಕ್ಕುಗಳು ಹೆಚ್ಚು. ಬುರುಡೆಗಳು ಒಡೆಯುತ್ತವೆ!’

ಶಿಷ್ಯ ಆಶ್ರಮದಲ್ಲೇ ಉಳಿದು ಮತ್ತೆ ಅಧ್ಯಯನ ಆರಂಭಿಸಿದ

Leave a Reply