ಒಬ್ಬ ಝೆನ್ ಮಾಸ್ಟರ್ ನ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬ ಜಾಸ್ತಿ ಆಗಿ ಶಾಲೆಯ ಜಾಗ ತುಂಬ ಇಕ್ಕಟ್ಟಾಗತೊಡಗಿತು. ಇದನ್ನು ಗಮನಿಸಿದ ಆ ಊರಿನ ವ್ಯಾಪಾರಿ ಶಾಲೆಯ ಕಟ್ಟಡವನ್ನು ವಿಸ್ತರಿಸುವ ಸಲುವಾಗಿ 500 ಬಂಗಾರದ ನಾಣ್ಯಗಳನ್ನು ಶಾಲೆಗೆ ದಾನ ನೀಡಲು ನಿರ್ಧರಿಸಿದ.
ಒಂದು ದಿನ ಶಾಲೆಗೆ ಆಗಮಿಸಿದ ವ್ಯಾಪಾರಿ, 500 ಬಂಗಾರದ ನಾಣ್ಯಗಳ ಚೀಲವನ್ನು ಝೆನ್ ಮಾಸ್ಟರ್ ಕೈಗಿತ್ತ.
“ಆಯಿತು, ಈ ನಾಣ್ಯಗಳನ್ನು ಸ್ವೀಕರಿಸುತ್ತ್ತೇನೆ” ಎಂದ ಮಾಸ್ಟರ್.
ಮಾಸ್ಟರ್ ನ ನಿರ್ಲಿಪ್ತ ಉತ್ತರ ಕೇಳಿ ವ್ಯಾಪಾರಿಗೆ ಸಿಟ್ಟು ಬಂತು.
ವ್ಯಾಪಾರಿ : ಈ ಚೀಲದಲ್ಲಿ 500 ಬಂಗಾರದ ನಾಣ್ಯಗಳಿವೆ.
ಮಾಸ್ಟರ್ : ಆಗಲೇ ಹೇಳಿದೆಯಲ್ಲ.
ವ್ಯಾಪಾರಿ : ನಾನು ಶ್ರೀಮಂತನಿರಬಹುದು ಆದರೆ 500 ಬಂಗಾರದ ನಾಣ್ಯಗಳು ನನಗೂ ದೊಡ್ಡ ಮೊತ್ತವೇ.
ಮಾಸ್ಟರ್ : ನನ್ನಿಂದ ಕೃತಜ್ಞತೆ ಏನಾದರೂ ಬಯಸುತ್ತಿರುವೆಯಾ?
ವ್ಯಾಪಾರಿ : ತಪ್ಪಾ?
ಮಾಸ್ಟರ್ : ಖಂಡಿತ ತಪ್ಪು. ಕೊಡುವುದು ಯಾವಾಗಲೂ ಕೊಡುವವನ ಅವಶ್ಯಕತೆ ಆಗಿರುವುದರಿಂದ, ಕೃತಜ್ಞತೆ ಹೇಳಬೇಕಾದವನು ಕೊಡುವವನೇ.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)