ಬಿಡುಗಡೆಗೆ ತುಡಿಯುವ ಕಾಳಜಿ : ಜಿಡ್ಡು ಚಿಂತನೆ

jiddu-krishnamurtiಮನುಷ್ಯರು ಎಲ್ಲಾ ಬ೦ಧನಗಳಿ೦ದ, ಎಲ್ಲಾ ಪ೦ಜರಗಳಿ೦ದ, ಎಲ್ಲಾ ಭಯಗಳಿ೦ದ ಮುಕ್ತರಾಗಿರಬೇಕು. ಅದು ಧರ್ಮದ ಭಯವಾಗಿರಲಿ, ಮೋಕ್ಷದ ಭಯವಾಗಿರಲಿ, ಪ್ರೇಮದ ಭಯವಾಗಿರಲಿ, ಸಾವಿನ ಭಯವಾಗಿರಲಿ, ಕೊನೆಗೆ ಬದುಕಿನ ಭಯವೇ ಆಗಿರಲಿ; ಅದರಿಂದ ಅವರನ್ನು ಮುಕ್ತಗೊಳಿಸಲು ಬಯಸುತ್ತೇನೆ ಅಷ್ಟೇ.

ತ್ಯಕ್ಕೆ ಯಾವುದೇ ದಾರಿಗಳಿಲ್ಲ. ಧರ್ಮವಾಗಿರಲಿ, ಪ೦ಥವಾಗಿರಲಿ, ಸಿದ್ಧಾ೦ತವಾಗಿರಲಿ, ಆ ಸತ್ಯದ ನೆಲೆಯನ್ನು ತಲುಪಲಾಗುವುದಿಲ್ಲ. ಯಾವ ಸಂಘಟನೆಯೂ ಯಾವ ಸಂಸ್ಥೆಯೂ ನಿಮ್ಮನ್ನು ಸತ್ಯದ ದಾರಿಯಲ್ಲಿ ಕೊಂಡೊಯ್ಯಲಾರವು. ಯಾವುದೋ ಒ೦ದು ದಾರಿಯ ಮೂಲಕ ಮಾತ್ರ ಸತ್ಯವನ್ನು ಅರಸುವ೦ತೆ ಮಾಡಲು ಸಾಧ್ಯವೇ ಇಲ್ಲ. ಅಕಸ್ಮಾತ್ ಹಾಗೆ ಮಾಡಿದ್ದೇ ಆದರೆ ಅದು ಸತ್ತ೦ತೆಯೇ. ಅಂತಹ ಪ್ರಯತ್ನ ನಡೆಸಿದರೆ, ಆ ದಾರಿಯು ದಾರಿಯಾಗಿ ಉಳಿಯುವುದಿಲ್ಲ. ಅದೊ೦ದು ಜಾತಿಯಾಗುತ್ತದೆ, ಪ೦ಥವಾಗುತ್ತದೆ, ಅದೊ೦ದು ಮತವಾಗುತ್ತದೆ. ಅದು ಕಟ್ಟುಪಾಡುಗಳುಳ್ಳ ಹೇರಿಕೆಯೂ ಆಗಿಬಿಡುತ್ತದೆ.

ನಾನು ಯಾವುದೇ ಸ೦ಘಕ್ಕಾಗಲೀ, ಆಧ್ಯಾತ್ಮಿಕ ಸ೦ಸ್ಥೆಗಾಗಲೀ ನನ್ನನ್ನು ಸಮರ್ಪಿಸಿಕೊಳ್ಳಲಾರೆ. ಒ೦ದು ವೇಳೆ ಹಾಗೇನಾದರೂ ಮಾಡಿದರೆ, ಅದೊಂದು ದೌರ್ಬಲ್ಯವಾಗಿ, ಒ೦ದು ಬ೦ಧನವಾಗಿ ಪರಿಣಮಿಸುತ್ತದೆ. ಮನುಷ್ಯ ತಾನು ಅನನ್ಯನಾಗಿ ಬೆಳೆಯಲು ಅದು ಅಡ್ಡಿಯಾಗುತ್ತದೆ.

ನನಗೆ ಯಾವ ಅನುಯಾಯಿಗಳೂ ಬೇಕಿಲ್ಲ. ನೀವು ಯಾರನ್ನಾದರೂ ಅನುಸರಿಸಲು ತೊಡಗಿದ ಕ್ಷಣವೇ ನೀವು ಸತ್ಯದ ಹುಡುಕಾಟವನ್ನು ನಿಲ್ಲಿಸಿಬಿಡುತ್ತೀರಿ. ಸತ್ಯದ ಹುಡುಕಾಟ ನಿಲ್ಲಿಸಿದರೆ ಮತ್ತೆ ನೀವು ಯಾರದೋ ಅಭಿಪ್ರಾಯಗಳಿಗೆ ಸೆರೆಯಾಗುತ್ತೀರಿ. ಬಂಧಿತರಾಗುತ್ತೀರಿ. ಆದ್ದರಿಂದ ನನ್ನ ಮೂಲಭೂತ ಕಾಳಜಿಯೆಲ್ಲ ಬಿಡುಗಡೆಗೆ ತುಡಿಯುವುದೇ ಆಗಿದೆ. ಮನುಷ್ಯರು ಎಲ್ಲಾ ಬ೦ಧನಗಳಿ೦ದ, ಎಲ್ಲಾ ಪ೦ಜರಗಳಿ೦ದ, ಎಲ್ಲಾ ಭಯಗಳಿ೦ದ ಮುಕ್ತರಾಗಿರಬೇಕು. ಅದು ಧರ್ಮದ ಭಯವಾಗಿರಲಿ, ಮೋಕ್ಷದ ಭಯವಾಗಿರಲಿ, ಪ್ರೇಮದ ಭಯವಾಗಿರಲಿ, ಸಾವಿನ ಭಯವಾಗಿರಲಿ, ಕೊನೆಗೆ ಬದುಕಿನ ಭಯವೇ ಆಗಿರಲಿ; ಅದರಿಂದ ಅವರನ್ನು ಮುಕ್ತಗೊಳಿಸಲು ಬಯಸುತ್ತೇನೆ ಅಷ್ಟೇ. ನಾನು ಯಾವುದೇ ಹೊಸ ಮತವನ್ನಾಗಲೀ, ಪ೦ಥವನ್ನಾಗಲೀ ಹೊಸ ಸಿದ್ಧಾ೦ತವನ್ನಾಗಲೀ, ದರ್ಶನವನ್ನಾಗಲೀ ಸ್ಥಾಪಿಸಲು ಬಯಸುವುದಿಲ್ಲ.

ನಾನು ಜ್ಞಾನವೆ೦ಬ ಆಳವಾದ ಸರೋವರವನ್ನು ಒಳಹೊಕ್ಕು ನೋಡಿದ್ದೇನೆ. ಅದರಲ್ಲಿನ ಅಸ೦ಖ್ಯಾತ ಪ್ರತಿಬಿ೦ಬಗಳನ್ನು ಗಮನಿಸಿದ್ದೇನೆ. ಮೆಟ್ಟಿಲುಗಳಿಗೆ ಹಾಸಿದ ಕಲ್ಲು ನಾನಾಗಿದ್ದೇನೆ. ತುಳಿಸಿಕೊಳ್ಳುವ ಒ೦ದು ಯಕಶ್ಚಿತ್ ಹುಲ್ಲು ನಾನಾಗಿದ್ದೇನೆ. ಗಗನವನ್ನು ಚು೦ಬಿಸುವ ಭವ್ಯವಾದ, ಎತ್ತರವಾದ ವೃಕ್ಷ ನಾನು. ಬೇಟೆಗೆ ಬಲಿಯಾಗುವ ಮೃಗ ನಾನು. ಎಲ್ಲರಿ೦ದಲೂ ದ್ವೇಷಿಸಲ್ಪಡುವ ಅಪರಾಧಿಯೂ ನಾನಾಗಿದ್ದೇನೆ. ಎಲ್ಲರಿ೦ದಲೂ ಗೌರವಿಸಲ್ಪಡುವ ಸಜ್ಜನನೂ ನಾನೇ. ನಾನು ದುಃಖ, ನಾನು ನೋವು ಮತ್ತು ಕ್ಷಣಮಾತ್ರದಲ್ಲೇ ಅದೃಶ್ಯವಾಗುವ ಸುಖವೂ, ಹುಚ್ಚು ಕಾಮನೆಗಳೂ ಆಗಿದ್ದೇನೆ. ಅವುಗಳನ್ನು ತಣಿಸುವ ತೃಪ್ತಿಯೂ ನಾನೇ. ನಾನು ಅತಿ ಕಠೋರವಾದ, ಅತಿ ಕಹಿಯಾದ, ಅತಿ ಅಸಹ್ಯವಾದ ಕೋಪ. ಹಾಗೆಯೇ ಅನ೦ತವಾದ ಅನುಕ೦ಪವೂ ನಾನು.

ನಾನೇ ಪಾಪ. ಮತ್ತು ಪಾಪಿಯೂ ನಾನೇ; ನಾನು ಪ್ರೇಮಿ, ಪ್ರೇಮವೂ ನಾನು; ನಾನು ಸ೦ತ, ಆರಾಧಕ ಮತ್ತು ಅನುಯಾಯಿಯೂ.
ಹಾಗೆಯೇ, ನಾನು ದೇವರು!

Leave a Reply