ಧ್ಯಾನ ಮಾಡಲು ಕಲಿಯಿರಿ : ವೀಕೆಂಡ್ ಮೆಡಿಟೇಶನ್

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿ ದಿನ ಮಾಡುವ ಧ್ಯಾನ ವಿಧಾನಗಳು ಮತ್ತು ವಾರಾಂತ್ಯದ ಧ್ಯಾನ ವಿಧಾನದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪ್ರತಿದಿನ ಮಾಡುವ ಧ್ಯಾನ ಯಾವುದಾದರೊಂದು ನಿರ್ದಿಷ್ಟ ಉದ್ದೇಶ ಮತ್ತು ಬಗೆಯನ್ನು ಹೊಂದಿರುತ್ತದೆ. ವಾರಾಂತ್ಯದ ಧ್ಯಾನ ಮೂರು ತಂತ್ರಗಳ ಮಿಶ್ರಣ ~ ಚಿತ್ಕಲಾ

ಭಾನುವಾರ ಅಂದರೆ ಅದೊಂದು ಬಗೆಯ ಸೋಮಾರಿತನದ ದಿನ. ಅದು ರಜಾ ದಿನವಾದ್ದರಿಂದ ಹೊತ್ತುಹೊತ್ತಿನ ಧಾವಂತ ಇರುವುದಿಲ್ಲ. ಹಾಗೆಂದೇ ನಿಧಾನವಾಗಿ ಏಳುವುದನ್ನು ರೂಢಿ ಮಾಡಿಕೊಂಡಿರುತ್ತೀರಿ. ನಿಮ್ಮ ನಿದ್ರೆ ಮುಗಿದಿದ್ದರೂ ಹಾಸಿಗೆಯ ಮೇಲೆ ಹೊರಳುತ್ತಲಾದರೂ ಇರುತ್ತೀರಿ. ನಿಮಗೆ ನಿದ್ರೆ ಬೇಕಿರುತ್ತದೆಯೋ ಒಟ್ಟಿನಲ್ಲಿ ಭಾನುವಾರ ನಿಧಾನವಾಗಿ ಏಳಬೇಕು ಅನ್ನುವುದಕ್ಕೆ ಫಿಕ್ಸ್ ಆಗಿಬಿಟ್ಟಿರುತ್ತೀರಿ.

ನೀವು ಮಾಡಬೇಕಿರುವ ಮೊದಲ ಕೆಲಸ, ಈ ರೂಢಿಗತ ಅಭ್ಯಾಸದಿಂದ ಹೊರಬರುವುದು. ಭಾನುವಾರ ಬೆಳಗ್ಗೆ ಐದು ಗಂಟೆಗೆ ಎದ್ದುಬಿಡಿ. ಪ್ರತಿದಿನ ನೀವು ಅದಕ್ಕಿಂತ ತಡವಾಗಿ ಏಳುತ್ತಿರಬಹುದು. ಪರವಾಗಿಲ್ಲ. ಭಾನುವಾರ ಬೆಳಗ್ಗೆ ಅದನ್ನು ಮುರಿಯಿರಿ. ತಡವಾಗಿ ಏಳುವ ರೂಢಿ ಮುರಿದು ಐದು ಗಂಟೆಗೆ ಏಳುವ ಸಂಕಲ್ಪ ಮಾಡಿ.

ಎದ್ದು ಮುಖ ತೊಳೆದ ನಂತರ ಕಿಟಕಿಗಳನ್ನು ತೆರೆದು, ಯಾವುದಾದರೂ ಶ್ಲೋಕ, ಸ್ತುತಿ, ಸುಪ್ರಭಾತ, ಭಜನೆ – ಈ ಬಗೆಯ ಸಂಗೀತ ಆನ್ ಮಾಡಿಕೊಳ್ಳಿ. ನೀವು ಆಸ್ತಿಕರೋ ನಾಸ್ತಿಕರೋ ಅನ್ನುವುದೆಲ್ಲ ಇಲ್ಲಿ ಬೇಡ. ಸಂಗೀತ ಕೇಳಲು ಧಾರ್ಮಿಕ ಪ್ರವೃತ್ತಿ – ನಿವೃತ್ತಿಗಳ ಅಡ್ಡಿ ಇಲ್ಲ.

ಸಂಗೀತ ಕೇಳುತ್ತಾ ನಿಧಾನವಾಗಿ ಕೈಕಾಲುಗಳನ್ನು ಆಡಿಸಿ. ಮೈಯೊಳಗಿನ ಆಲಸ್ಯವನ್ನು, ಜಾಡ್ಯವನ್ನು ಹೊರಹಾಕಿ. ಐದರಿಂದ ಹತ್ತು ನಿಮಿಷ ನಿಮ್ಮ ದೇಹದೊಡನೆ ಸಂಭಾಷಿಸಿ. ಸಂಭಾಷಿಸುವುದು ಅಂದರೆ, ಅದರ ಪ್ರತಿ ಅಂಗುಲವನ್ನೂ ಗಮನಿಸುವುದು. ವಾರವಿಡೀ ನಿರ್ಲಕ್ಷ್ಯ ಮಾಡಿದ್ದ ನಿಮ್ಮದೇ ದೇಹವನ್ನು ನೀವು ಪ್ರೀತಿಯಿಂದ ನೋಡಿಕೊಳ್ಳಲು ಇದು ಸರಿಯಾದ ಸಮಯ.

ಹೀಗೆ ಹತ್ತು ನಿಮಿಷ ಕಳೆದ ನಂತರ, ಮ್ಯೂಸಿಕ್ ಆಫ್ ಮಾಡಿ. ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಕಣ್ಣುಗಳನ್ನು ಹಗುರವಾಗಿ ಮುಚ್ಚಿ. ನಿಮ್ಮ ಬಲಗೈಯನ್ನು ಸ್ವಲ್ಪವೂ ಭಾರ ಬೀಳದಂತೆ ನಿಮ್ಮ ನೆತ್ತಿಯ ಮೇಲೆ ಇಟ್ಟುಕೊಳ್ಳಿ. ಎಡಗೈಯನ್ನು ಹೊಕ್ಕುಳ ಮೇಲೆ ಅಷ್ಟೇ  ಹಗುರವಾಗಿ ಇಟ್ಟುಕೊಳ್ಳಿ. ನಿಮ್ಮ ಅಂಗೈ ಸ್ಪರ್ಶ ನಿಮ್ಮ ನೆತ್ತಿಯನ್ನು ಸೋಕುತ್ತಲೇ ನೀವು ಭಾವಾವಿಷ್ಟರಾಗುತ್ತೀರಿ. ಅದನ್ನು ಗಮನಿಸಿ,. ಬೇರೆ ಯಾವ ಯೋಚನೆಗಳೂ ಬೇಡ. ನಿಮ್ಮ ಅಂಗೈ ಸ್ಪರ್ಶವನ್ನು ನಿಮ್ಮ ನೆತ್ತಿಯಿಂದಲೂ, ನೆತ್ತಿಯ ಸ್ಪಂದನೆಯನ್ನು ಅಂಗೈಯಿಂದಲೂ ಅನುಭವಿಸಿ. ಹಾಗೆಯೇ ಹೊಕ್ಕುಳ ಮೇಲೆ ಇಟ್ಟಿರುವ ಕೈ ಉಸಿರಾಟದ ಚಲನೆಯನ್ನು ಅನುಭವಿಸುತ್ತ ಇರಲಿ.

ಈ ಇಡೀ ಪ್ರಕ್ರಿಯೆಯಲ್ಲಿ ಯಾವ ಆಲೋಚನೆಯನ್ನೂ ನೀವು ಮಾಡಬಾರದು. ತಾನಾಗಿಯೇ ನಿಮ್ಮ ಮನಸ್ಸಿನಲ್ಲಿ ಯಾವುದೆಲ್ಲ ಆಲೋಚನೆ ಹರಿಯುತ್ತದೆ ಅನ್ನುವುದನ್ನು ಗಮನಿಸಿ. ನಿಮ್ಮ ಗಮನ ನೆತ್ತಿ ಮತ್ತು ಅಂಗೈ ನಡುವಿನ ಸ್ಪರ್ಶವಿನಿಮಯದ ಮೇಲೆ ಹೆಚ್ಚು ಏಕಾಗ್ರಗೊಳ್ಳುತ್ತಾ ಹೋಗಲಿ. ಆ ಏಕಾಗ್ರತೆ ಹೆಚ್ಚಿದಂತೆಲ್ಲ ಮನಸ್ಸಿನಲ್ಲಿ ಬೇರೆ ಸಂಗತಿಗಳ ಮೆರವಣಿಗೆ ಹಾಯುವುದು ನಿಲ್ಲುತ್ತದೆ. ನಿಮ್ಮ ಉದ್ವೇಗ ಕಡಿಮೆಯಾಗುತ್ತಾ ಶಾಂತಿ ನೆಲೆಸುತ್ತದೆ. ನೆತ್ತಿಯ ಕಂಪನದ ಅನುಭವ ನಿಂತಿದೆ ಎಂದು ಅನ್ನಿಸಿದಾಗ ತಲೆಯ ಮೇಲಿಂದ ಕೈತೆಗೆಯಿರಿ. ಹೊಕ್ಕುಳ ಮೇಲಿಂದಲೂ ತೆಗೆಯಿರಿ. ಈಗ ಮೂಗಿನ ಹೊಳ್ಳೆಗಳಿಗೆ ಗಾಳಿ ಸೋಕುವುದನ್ನೆ ಗಮನಿಸುತ್ತಾ ಉಸಿರಾಟ ನಡೆಸಿ.

ಈ ಹಂತದಲ್ಲಿ ನೀವು ಆಲೋಚನಾ ಶೂನ್ಯರಾಗಿರುತ್ತೀರಿ. ನಿಮ್ಮೊಡನೆ ನೀವಿದ್ದೀರಿ, ನಿಮಗಾಗಿ ನೀವಿದ್ದೀರಿ ಅನ್ನುವ ಒಂದು ಸಮಾಧಾನದ ಭಾವನೆ ನಿಮ್ಮನ್ನು ಆವರಿಸಿರುತ್ತದೆ. ಇದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಸಂಗೀತ, ಧ್ಯಾನದ ಈ ಎರಡು ಹಂತಗಳು ಮುಗಿಯುವ ವೇಳೆಗೆ 30 ನಿಮಿಷ ಕಳೆದಿರುತ್ತವೆ. ಈಗ ನರ್ತನದ ಸಮಯ. ನಿಮಗಿಷ್ಟ ಬಂದ ಮ್ಯೂಸಿಕ್ ಹಾಕಿಕೊಂಡು. ಪ್ರಜ್ಞಾಪೂರ್ವಕವಾಗಿ, ಆದರೆ ಆಲೋಚನಾರಹಿತವಾಗಿ ನರ್ತಿಸಿ. 15 ನಿಮಿಷಗಳ ಕಾಲ ಜಗದ ಪರಿವೆಯೇ ಇಲ್ಲದಂತೆ ನರ್ತಿಸಿ. ಮೈ ಬೆವರಿಳಿದು, ಮನಸ್ಸು ಹಗುರವಾಗುವವರೆಗೂ ನರ್ತಿಸಿ.

ಸಂಗೀತ ನಿಲ್ಲಿಸಿ, ನಿಮ್ಮ ಕೈಗಳನ್ನು ನಿಮ್ಮ ಹೆಗಲುಗಳಿಗೆ ಮುಟ್ಟಿಸಿ, ನಿಮ್ಮನ್ನು ನೀವು ಅಪ್ಪಿಕೊಂಡು ಹಾಗೇ ಎರಡು ನಿಮಿಷ ನಿಂತುಕೊಳ್ಳಿ. ನಿಮ್ಮ ದೇಹವನ್ನು ಅನುಭವಿಸಿ. ನಿಮ್ಮ ಮನಸ್ಸನ್ನು ಅನುಭವಿಸಿ. ಎರಡನೇ ಹಂತದಲ್ಲಿ ನಿಮ್ಮ ಅಂತರಂಗದ ಜೊತೆ ನೀವಿದ್ದೀರಿ ಎಂಬ ಖಾತ್ರಿಯನ್ನು ನಿಮಗೆ ನೀವೇ ಕೊಟ್ಟುಕೊಂಡಿರಿ. ಈಗ ನಿಮ್ಮ ದೇಹದೊಡನೆ ನೀವಿದ್ದೀರೆಂದು ಖಾತ್ರಿ ನೀಡುತ್ತಿದ್ದೀರಿ.

ಈ ಮುಕ್ಕಾಲು ಗಂಟೆಯ ಮೂರು ತಂತ್ರಗಳ ಸಮ್ಮಿಶ್ರಣವೇ ‘ವೀಕೆಂಡ್ ಮೆಡಿಟೇಶನ್’. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನೂ ಧೈರ್ಯವನ್ನೂ, ಪ್ರೇಮವನ್ನೂ ತುಂಬುವ ಧ್ಯಾನವಿಧಾನ. ಈ ಭಾನುವಾರವೇ ಇದನ್ನೊಮ್ಮೆ ಪ್ರಯತ್ನಿಸಿ ನೋಡಿ.

Leave a Reply