ಪ್ರೇಮ, ಪ್ರಣಯ, ಪ್ರಾರ್ಥನೆ ಇತ್ಯಾದಿ…. ~ ಒಝ್ಕಾಯ ಸೂಫಿ ಕಾವ್ಯ

ಮೂಲ : ಸೂಫಿ ಕವಿ ನಜತ್ ಒಝ್ಕಾಯ  | ಕನ್ನಡಕ್ಕೆ : ಚಿದಂಬರ ನರೇಂದ್ರ

sufi2

ನ್ನ ಹತ್ತಿರ ಕೂತಿರುವ ಈ ಮನುಷ್ಯ
ಎಷ್ಟು ಮಾತನಾಡುತ್ತಾನೆ ?
ಇವನ ಬಾಯಿ ಮುಚ್ಚಿಸಬೇಕಲ್ಲ…

ಬಹುತೇಕರಿಗೆ ಮೌನ, ದಿಗಿಲು
ತಪ್ಪಿಸಿಕೊಳ್ಳಲು, ಇಲ್ಲದುದರ ಬಗ್ಗೆಯೂ ವ್ಯಾಖ್ಯಾನ.

ಧ್ವನಿಯ ಬಗ್ಗೆ ಅಕ್ಕರೆ ಏನಿಲ್ಲ
ಮೌನದ ಬಗ್ಗೆ ಮಾತ್ರ ಆತಂಕ.

ಕಾರಣ?
ಅದೇ, ಮೌನದ ಸಲಿಗೆ
ಸಲಿಗೆ ಎಂದರೆ ಎಂಥೆಂಥವರೂ ತಬ್ಬಿಬ್ಬು

ಮಾತು ಬಟ್ಚೆ, ಮೌನ ಬೆತ್ತಲು
ಪ್ರಾರ್ಥನೆಯಲ್ಲಿ ಎಂಥ ಸಂಕೋಚ?
ಕಳಚಿ, ಶರಣಾಗಿ.

The intimacy of Silence

sufi 1

ಪ್ರೇಮ,
ಹುಲಿಯ ಅವತಾರ.
ಅಪರೂಪದ ಬೆಕ್ಕು , ಚೆಲುವಿನ ಬನಿ,
ಚರ್ಮದ ಕೆಳಗೆ ಹುರಿಗಟ್ಟಿರುವ
ಸ್ನಾಯುಗಳ ಮಾಯಗಾರ.
ಬದುಕು-ಸಾವಿನ ತಕ್ಕಡಿಯ
ತನ್ನ ನಿಷ್ಠುರ ದವಡೆಯಲ್ಲಿ ಸರಿದೂಗಿಸುವ
ಗಂಭೀರ ವ್ಯಾಪಾರಿ.

ಪ್ರೇಮ ಊಹಾತೀತ,
ಇನ್ನೇನು ಜಾಡು ಸಿಕ್ಕಿತು ಎನ್ನುವಾಗಲೇ
ಹೆಜ್ಜೆ ಅಳಿಸಿ ಹಾಕಿಬಿಡುವ ಚತುರ ಚೋರ
ಕಾಯುವ ನಾಟಕವಾಡುವ ವೇಷಧಾರಿ,
ಕೊಲ್ಲಲು ಹಾರುವ ತನಕ
ಸದ್ದು ಮಾಡದೇ ಸುಮ್ಮನಿದ್ದುಬಿಡುವ ತಂತ್ರಗಾರ,
ಎಂಥ ಕಾಡಿನ ಗರ್ಭದಲ್ಲೂ
ಬೇಟೆಯ ವಾಸನೆ
ಕ್ಷಣಮಾತ್ರದಲ್ಲಿ ಪತ್ತೆಹಚ್ಚಿಬಿಡುವ ಚಾಣಾಕ್ಷ ಗೂಢಚಾರ.

ಸ್ವರ್ಗ, ನರಕ ಎರಡರಲ್ಲೂ
ಪ್ರೇಮದ್ದೇ ಸರ್ಕಾರ.
ಬಿಸಿ ಉಸಿರಿನಿಂದ ಜೀವ ತುಂಬುತ್ತದೆಯಾದರೂ
ಗರ್ಜಿಸಿಯೇ ಅಸ್ತಿತ್ವ ಘೋಷಣೆ
ಹರಿತ ಉಗುರುಗಳ ನಡುವೆಯೇ ಲಲ್ಲೆವಾತು.

ಪ್ರೇಮ, ಭಯಂಕರ.
ಎಂಥ ಧೈರ್ಯಶಾಲಿಗಳೂ
ಒಂದರೆಘಳಿಗೆ ಬೆಚ್ಚಿ ಬೀಳುತ್ತಾರೆ.

ನನ್ನ ಮಾತು ಕೇಳಿ
ಈಗಲೇ ಮನೆಗೆ ಹೋಗಿ
ನಿಮ್ಮ ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಿ
ಇದು ಬೇಟೆಯಾಡಲೇ ಬೇಕಾದಂಥ ವ್ಯಾಘ್ರ.

Love is a Tiger

sufi3

ಲ್ಲಂತ ಹುಡುಕಲಿ
ಅಂಥ ಒಳ್ಳೆಯ ಹೆಂಡತಿಯ
ಭಗವಂತನ ಜೊತೆಗಿನ ನನ್ನ ಪ್ರಣಯವ
ಅರ್ಥ ಮಾಡಿಕೊಳ್ಳುವವಳ.

ಕೆಲವರಿಗೆ ಅಸೂಯೆ
ಕೆಲವರಿಗೆ ಪಟ್ಟದ ಹುಚ್ಚು
ಕೆಲವರಿಗಂತೂ
ಇದು ಅರ್ಥವೇ ಆಗದ ಕಿಚ್ಚು.

ಇಬ್ಬರು ಪ್ರೇಮಿಗಳನ್ನು ಒಟ್ಟಿಗೆ ಪ್ರೇಮಿಸುವುದು
ಅಳ್ಳೆದೆಗೆ ಸಾಧ್ಯವಿಲ್ಲ

ಇಬ್ಬರು ಹೆಂಡಿರ ಮಾಲಿಕ
ಅಥವಾ
ನಲವತ್ತೈದು ಹೆಂಡಿರ ಸುಲ್ತಾನನನ್ನು
ಕೇಳಿ ನೋಡಿ
ಅವರ ಮನೆಯಲ್ಲಿ ಎಷ್ಟು ಸಮಾಧಾನ ಇದೆಯೆಂದು.

ಹುಡುಕಿ, ಹುಡುಕಿ…..

ಮೂವರೂ ಕೂಡಲೊಪ್ಪುವ
ಕನ್ನೆ ಏನಾದರು ಸಿಕ್ಕರೆ
ಕೂಡಲೇ ಅಪ್ಪಿಕೊಂಡು ಬಿಡಿ.

Pleasing two loves

sufi 5

ನ್ನ ಪ್ರಾರ್ಥನೆ ಆಗಾಗ,
ತುಣುಕುಗಳಲ್ಲಿ , ದಿನವಿಡೀ,
ಅಂಥ ಮಹತ್ವದ್ದೇನಲ್ಲ, ಬಹುತೇಕ ಹರಟೆ.

ಭಗವಂತನಿಗಾಗಿ
ನಾನು ಹಾಡುವ ಹಾಡುಗಳು
ನೂರಕ್ಕೆ ನೂರು ಸಿಲ್ಲಿ,
ಪ್ರಾರ್ಥನೆ, ಅಪ್ಪಟ ಗಾಸಿಪ್
ಹಾಸಿಗೆಯೊಳಗಿನ ಗುಸುಗುಸು.

ಗಂಭೀರವಾಗಿರಲೇಬೇಕೆ ?
ಭಗವಂತನೊಡನೆಯ ನನ್ನ ವ್ಯವಹಾರ
ತಲೆಹಿಡುಕತನಕ್ಕಿಂತ ಕೀಳೆ?

ಪ್ರಾರ್ಥನೆ
ಗೆಳೆಯರ ನಡುವಿನ ಕಾಡು ಹರಟೆ
ಭಗವಂತನನ್ನು
ಬೋರು ಹೊಡೆಸುವುದಕ್ಕಿಂತ
ಸಿಟ್ಟಿಗೇಳಿಸುವುದೇ ಒಳ್ಳೆಯ ಚೌಕಾಸಿ.

Silly chatter

 

sufi7

ಪ್ರೇಮದಲ್ಲಿ ಮುಳುಗಿರುವ ಮನುಷ್ಯ
ತನ್ನ ಪ್ರೇಮವನ್ನು ಜಾಹೀರು ಮಾಡುವುದು
ಎರಡು ರೀತಿಯಲ್ಲಿ

ಹಾಡಿ ಹಾಡಿ ಹೇಳುತ್ತಾನೆ
ಮಾಳಿಗೆ ಮೇಲೆ ನಿಂತು
ಊರಿಗೆ ಊರೇ ಕುಣಿಯುವಂತೆ
ಇಲ್ಲಾ
ಯಾರಿಗೂ ಕಾಣದಂತೆ ಕಳ್ಳ
ಕದ್ದ ಒಡವೆಯ
ಕಣ್ಣಿಗೊತ್ತಿಕೊಂಡು ಮುಚ್ಚಿಡುವಂತೆ
ಬಚ್ಚಿಟ್ಟುಕೊಳ್ಳುತ್ತಾನೆ ಎದೆಯಲ್ಲಿ

ನಾನು ಹಾಗೆಲ್ಲ
ಮಾಳಿಗೆ ಏರಿ ಹಾಡುವುದಿಲ್ಲ
ಅದು ಜೈಲಿನ ಹಾದಿ, ಗೊತ್ತು ನನಗೆ
ಬದಲಾಗಿ
ಗಲ್ಲ ಉಬ್ಬಿಸಿ ಓಡಾಡುತ್ತೇನೆ ಊರೆಲ್ಲ
ಬಾಯಲ್ಲಿ ಉಂಡಿ ತುಂಬಿಕೊಂಡ
ತುಂಟ ಹುಡುಗನಂತೆ

ಸಿಕ್ಕಿಹಾಕಿಕೊಂಡರೆ
ಕುಣಿದಾಡುತ್ತ ಉಸುರುತ್ತೇನೆ
ಅವರ ಕಿವಿಯಲ್ಲಿ ಮಾತ್ರ.

When a person falls in love

*

(ಚಿತ್ರಗಳು : ಇಂಟರ್ನೆಟ್)

1 Comment

Leave a Reply