ಜ್ಞಾನೋದಯವಾಗಿದೆ ಎಂದು ಗೊತ್ತಾಗೋದು ಹೇಗೆ?

Mullaಮುಲ್ಲಾ ನಸ್ರುದ್ದೀನ್ ಊರಿನ ಮುಖ್ಯ ಬೀದಿಯಲ್ಲಿ ನಡೆದು ಹೋಗುತ್ತಿದ್ದ. ಅವನನ್ನು ಒಂದು ಪುಟ್ಟ ಹಿಂಡು ಹಿಂಬಾಲಿಸುತ್ತಿತ್ತು. ಆ ಹಿಂಡಿನಲ್ಲಿದ್ದ ಜನರು ನಸ್ರುದ್ದೀನ್ ಏನೆಲ್ಲ ಮಾಡುವನೋ ಅವನ್ನು ಹಾಹಾಗೇ ಅನುಕರಿಸುತ್ತಿದ್ದರು.
ಅವನು ಒಂದು ಹೆಜ್ಜೆ ಮುಂದಿಟ್ಟರೆ ತಾವೂ ಮುಂದಿಡುವರು. ನಿಂತರೆ ತಾವೂ ನಿಲ್ಲುವರು.
ನಸ್ರುದ್ದೀನ್ ಎರಡೂ ಕೈ ಎತ್ತಿ ‘ಹಹಹಾ…’ ಎಂದು ಗಹಗಹಿಸಿ ನಗಾಡಿದ.
ಅವನನ್ನು ಅನುಕರಿಸುತ್ತಿದ್ದ ಹಿಂಡೂ ಹಾಗೆಯೇ ಮಾಡಿತು.

ಮುಖ್ಯ ಬೀದಿಯ ಅಂಗಡಿ ಸಾಲಿನಲ್ಲಿ ನಸ್ರುದ್ದೀನನ ಒಬ್ಬ ಗೆಳೆಯನಿದ್ದ. ನಸ್ರುದ್ದೀನನನ್ನೂ ಅವನನ್ನು ಹಿಂಬಾಲಿಸುತ್ತಿದ್ದ ಹಿಂಡಿನ ವರ್ತನೆಯನ್ನೂ ನೋಡಿದ ಅವನಿಗೆ ತಲೆ ಬುಡ ಅರ್ಥವಾಗಲಿಲ್ಲ.
ಚಪ್ಪಾಳೆ ಹೊಡೆದು ನಸ್ರುದ್ದೀನನನ್ನು ಗೆಳೆಯ ಕರೆದ.
ನಸ್ರುದ್ದೀನ್ ಅವನತ್ತ ಹೊರಟಾಗ ಹಿಂಡು ಕೂಡ ಹೊರಟಿತು. ಕಣ್ಣಲ್ಲೇ  ಸನ್ನೆ ಮಾಡಿ ಅಲ್ಲೇ ನಿಲ್ಲುವಂತೆ ಸೂಚಿಸಿದ.

“ಇದೇನು ನಡೀತಿದೆ ನಸ್ರುದ್ದೀನ್? ಅವರೆಲ್ಲ ಯಾರು?” ಕೇಳಿದ ಗೆಳೆಯ.
“ನಾನೀಗ ಸೂಫಿ ಗುರುವಾಗಿದ್ದೀನಿ. ಅವರೆಲ್ಲ ನನ್ನ ಶಿಷ್ಯರು. ಅವರಿಗೆ ಜ್ಞಾನೋದಯದ ದಾರಿ ತೋರಿಸುತ್ತಿದ್ದೀನಿ” ಅಂದ ನಸ್ರುದ್ದೀನ್.
“ಓಹೋ… ಹಾಗೋ! ಅವರಿಗೆ ಜ್ಞಾನೋದಯವಾಗಿದೆ ಅಂತ ನಿನಗೆ ಹೇಗೆ ಗೊತ್ತಾಗುತ್ತೆ?” ಗೆಳೆಯನಿಗೆ ಆಶ್ಚರ್ಯ.
“ದಿನಾ ಬೆಳಗ್ಗೆ ಎದ್ದು ನನ್ನ ಶಿಷ್ಯರನ್ನು ಎಣಿಸುತ್ತೇನೆ. ಯಾರು ಬಿಟ್ಟುಹೋಗಿದ್ದಾರೋ ಅವರಿಗೆ ಜ್ಞಾನೋದಯವಾಗಿದೆ ಎಂದರ್ಥ”

ಸೂಫಿ ಗುರು ನಸ್ರುದ್ದೀನ್ ಕೈಗಳನ್ನು ಮೇಲಕ್ಕೆತ್ತಿ “ಹಹಹಾ…” ಎಂದು ನಗುತ್ತಾ ಹಿಂಡನ್ನು ಮುನ್ನಡೆಸಿಕೊಂಡು ಹೊರಟ.

Leave a Reply