ಸ್ಯೂಸ್ ದೇವನನ್ನು ಪ್ರಾರ್ಥಿಸಿ ಒಲಿಸಿಕೊಂಡ ಈಯೋಸ್, ಟಿಥೋನಸನನ್ನು ಚಿರಾಯುವನ್ನಾಗಿ ಮಾಡಬೇಕೆಂದು ಕೇಳಿಕೊಂಡಳು. ಸ್ಯೂಸ್ ದೇವ ಅದನ್ನು ದಯಪಾಲಿಸಿದ. ಆದರೆ…
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಉಷಾದೇವತೆ ಈಯೋಸ್ ಅಪ್ರತಿಮ ಸುಂದರಿ. ಅವಳನ್ನು ಹೊಂದಲು ದೇವತೆಗಳು ತಮ್ಮತಮ್ಮಲ್ಲೆ ಹೊಡೆದಾಡುತ್ತಿದ್ದರು. ಈಯೋಸ್ ಕೂಡಾ ದೇವತೆಗಳು, ಮನುಷ್ಯರೆನ್ನದೆ ಹಲವು ಜನರೊಡನೆ ಸಂಬಂಧ ಇರಿಸಿಕೊಂಡಿದ್ದಳು. ತಾನು ಯಾರನ್ನಾದರೂ ಬಯಸಿ ಅವರು ನಿರಾಕರಿಸಿದರೆ, ಅವರನ್ನು ಹೊತ್ತುಕೊಂಡು ತರಲೂ ಆಕೆ ಹಿಂದೆಮುಂದೆ ನೋಡುತ್ತಿರಲಿಲ್ಲ.
ಆದರೆ ಈಯೋಸ್ ದುರದೃಷ್ಟವಂತೆ. ಅವಳು ಪ್ರೇಮಿಸಿದ ಯಾವ ಗಂಡಸೂ ಅವಳೊಡನೆ ಹೆಚ್ಚು ಕಾಲ ಇರುತ್ತಿರಲಿಲ್ಲ. ಇಂಥಾ ಈಯೋಸ್ ಟಿಥೋನಸ್’ನನ್ನು ಮನಸಾರೆ ಪ್ರೇಮಿಸಿದಳು. ಟಿಥೋನಸ್ ಸುರಸುಂದರಾಂಗನೂ ವೀರನೂ ಶೂರನೂ ದಯಾಮಯಿಯೂ ಆಗಿದ್ದ. ಅವನನ್ನು ಈಯೋಸ್ ಅಪಹರಿಸಿ ತನ್ನ ರಾಜ್ಯಕ್ಕೆ ತಂದಳು. ಇವನನ್ನಾದರೂ ಶಾಶ್ವತವಾಗಿ ಜೊತೆಯಿಟ್ಟುಕೊಳ್ಳಬೇಕು ಎಂದು ಬಯಸಿದಳು.
ಸ್ಯೂಸ್ ದೇವನನ್ನು ಪ್ರಾರ್ಥಿಸಿ ಒಲಿಸಿಕೊಂಡ ಈಯೋಸ್, ಟಿಥೋನಸನನ್ನು ಚಿರಾಯುವನ್ನಾಗಿ ಮಾಡಬೇಕೆಂದು ಕೇಳಿಕೊಂಡಳು. ಸ್ಯೂಸ್ ದೇವ ಅದನ್ನು ದಯಪಾಲಿಸಿದ.
ಹೀಗೆ ಟಿಥೋನಸ್ ಚಿರಾಯುವೇನೋ ಆದ. ಅವರಿಬ್ಬರೂ ಬಹಳ ಕಾಲ ಚೆನ್ನಾಗಿಯೂ ಇದ್ದರು. ಆದರೆ ಮಣ್ಣಲ್ಲಿ ಹುಟ್ಟಿದವರ ನಿಯಮದಂತೆ ಟಿಥೋನಸ್ ಕಾಲಕ್ರಮೇಣ ಮುದಿಯಾಗುತ್ತಾ ಹೋದ. ಕೊನೆಗೆ ಮುಪ್ಪಿನ ಮಹಾ ಮುದುಕನಾಗಿಬಿಟ್ಟ. ದೇಹ ಕುಗ್ಗಿ ಮುದುಡಿ ಚೆಂಡಿನಂತಾದ.
ಚಿರಯೌವನೆ ಈಯೋಸಳು ಯಾವಾಗಲೋ ಅವನನ್ನ ಪ್ರೀತಿಸೋದು ಬಿಟ್ಟಿದ್ದಳು. ಚೆಂಡಿನಂತಾದ ಮುದಿ ಟಿಥೋಸನ್ನನ ದೇಹ ಜೀರ್ಣವಾಗುತ್ತಾ ಕೊನೆಗೆ ಓಟ್ಸ್ ಧಾನ್ಯದಷ್ಟು ಗಾತ್ರಕ್ಕೆ ಇಳಿಯಿತು. ಅವನ ದೇಹವಿಲ್ಲದೆ ಹೋದರೂ ಚಿರಂಜೀವಿಯಾದ್ದರಿಂದ ಅಸ್ತಿತ್ವ ಉಳಿದಿತ್ತು. ಹಾಗಂತಲೇ ಅವ ಕಾಣಿಸದೆ ಹೋದರೂ ಅವನ ದನಿ ಕೇಳುತ್ತಲೇ ಇರುತ್ತಿತ್ತು.
ಯಾವಾಗಲೂ ಕಿರುಚಿಕೊಳ್ತಿದ್ದ ಟಿಥೋನಸ್’ನನ್ನು ಇಯೋಸ್ ಕಿರಿಕಿರಿಯಿಂದ ಕೂಡಿ ಹಾಕಿದಳು. ಕೊನೆಗೊಂದು ದಿನ ಪಾಪ ಅನ್ನಿಸಿ, ಅವನನ್ನ ಮಿಡತೆಯಾಗಿ ಮಾಡಿ ಕಿಟಕಿಯಾಚೆ ಬಿಟ್ಟಳು. ಟಿಥೋನಸ್ ಕೀಯ್ ಕೀಯ್ ಅಂತ ಕೀಗುಟ್ಟುತ್ತ ಭೂಮಿಯತ್ತ ಹಾರಿ ಹೋದ.
ಭೂಮಿಯಲ್ಲಿ ಮೊದಲ ಮಿಡತೆ ಕಾಣಿಸಿಕೊಂಡಿದ್ದು ಹೀಗೆ. ಮುಂದೆ ಟಿಥೋನಸ್ ಕೀಟಗಳ ಅಧಿದೇವತೆಯಾಗಿ ಮನ್ನಣೆ ಪಡೆದ.