ಅಧ್ಯಾತ್ಮ ಡೈರಿ ~ ಪ್ರೇಮದಲ್ಲಿ ಕಳೆದುಕೊಳ್ಳಬಾರದು, ಕಂಡುಕೊಳ್ಳಬೇಕು

ಹಾಲು ಮತ್ತು ಸಕ್ಕರೆ ಪರಸ್ಪರ ಬೆರೆತು ಹೊಸತೊಂದು ರುಚಿ ಹುಟ್ಟಿಸುತ್ತವೆಯೇ ಹೊರತು ಸಕ್ಕರೆ ಹಾಲಾಗಿಯೋ ಹಾಲು ಸಕ್ಕರೆಯಾಗಿಯೋ ಮಾರ್ಪಡುವುದಿಲ್ಲ. ಪ್ರೇಮದಲ್ಲಿಯೂ ಹಾಗೆಯೇ. ಪ್ರೇಮಿಗಳು ಪರಸ್ಪರ ಪ್ರೇಮದಲ್ಲಿ ಬೆರೆತರೂ ತಮ್ಮ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು. ಸಾಂಗತ್ಯದಲ್ಲಿ ಅವರಿಬ್ಬರ ಗುರುತು ಒಂದೇ ಆದರೂ ತಮ್ಮ ವೈಯಕ್ತಿಕ ಇರುವಿಕೆಯನ್ನು ಉಳಿಸಿಕೊಂಡಿರಬೇಕು ~ ಅಲಾವಿಕಾ

p19

ಪ್ರೇಮದಲ್ಲಿ ಕಳೆದುಹೋದೆ ಅನ್ನುತ್ತಾ ರೆ. ಅದು ಬೇರೆ. ಪ್ರೇಮದಲ್ಲಿ ಕಳೆದುಕೊಂಡೆ ಅನ್ನುತ್ತಾರೆ. ಅದು ಮತ್ತೊಂದು ಥರದ್ದು. ಪ್ರೇಮದಲ್ಲಿ ಕಲೆದುಹೋಗುವುದು ಅಂದರೆ ಅದರ ಗುಂಗು ಹಿಡಿಸಿಕೊಳ್ಳೋದು. ಉನ್ಮತ್ತರಾಗೋದು. ಅದೇನೂ ಹಾನಿ ತರುವ ಸಂಗತಿಯಲ್ಲ. ಪ್ರೇಮದ ಗುಂಗು ಬಹಳ ಹೊತ್ತು ಇರುವಂತದ್ದೂ ಅಲ್ಲ. ಆದರೆ ಪ್ರೇಮದಲ್ಲಿ ಕಳೆದುಕೊಳ್ಳೋದು ಬಹಳ ಗಂಭೀರ ವಿಷಯ.

ಕೆಲವರು ಪ್ರೇಮದ ಹಪಾಹಪಿಗೆ ಬಿದ್ದು ವಿವೇಚನೆಯನ್ನೆ ಕಳೆದುಕೊಳ್ಳುತ್ತಾರೆ. ವಿಪರೀತ ಭಾವನಾತ್ಮಕ ಅವಲಂಬನೆಯನ್ನೇ ಉತ್ಕಟ ಪ್ರೇಮ ಅಂದುಕೊಳ್ಳುತ್ತಾರೆ. ಮತ್ತು ತಮ್ಮತನವನ್ನು ಬಿಟ್ಟುಕೊಡುವುದನ್ನೇ ಸಮರ್ಪಣೆ ಅಂದುಕೊಳ್ಳುತ್ತಾರೆ. ಸಮಸ್ಯೆ ಶುರುವಾಗೋದು ಇಲ್ಲೇ.

ಹಾಲಿಗೆ ಸಕ್ಕರೆ ಬೆರೆಸುತ್ತೇವೆ. ಅವೆರಡೂ ಚೆನ್ನಾಗಿ ಹೊಂದಿಕೊಂಡು ಸಿಹಿಯಾಗುತ್ತದೆ. ನಾವು ಅದನ್ನು ‘ಹಾಲು ಸಕ್ಕರೆ’ ಅಥವಾ ‘ಸಿಹಿ ಹಾಲು’ ಅನ್ನುತ್ತೇವೆಯೇ ಹೊರತು ಬರೀ ‘ಹಾಲು’ ಅಥವಾ ಬರೀ ‘ಸಕ್ಕರೆ’ ಅನ್ನುತ್ತೇವೆಯೇ? ಹಾಲು ಮತ್ತು ಸಕ್ಕರೆ ಪರಸ್ಪರ ಬೆರೆತು ಹೊಸತೊಂದು ರುಚಿ ಹುಟ್ಟಿಸುತ್ತವೆಯೇ ಹೊರತು ಸಕ್ಕರೆ ಹಾಲಾಗಿಯೋ ಹಾಲು ಸಕ್ಕರೆಯಾಗಿಯೋ ಮಾರ್ಪಡುವುದಿಲ್ಲ.

ಪ್ರೇಮದಲ್ಲಿಯೂ ಹಾಗೆಯೇ. ಪ್ರೇಮಿಗಳು ಪರಸ್ಪರ ಪ್ರೇಮದಲ್ಲಿ ಬೆರೆತರೂ ತಮ್ಮ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು. ಸಾಂಗತ್ಯದಲ್ಲಿ ಅವರಿಬ್ಬರ ಗುರುತು ಒಂದೇ ಆದರೂ ತಮ್ಮ ವೈಯಕ್ತಿಕ ಇರುವಿಕೆಯನ್ನು ಉಳಿಸಿಕೊಂಡಿರಬೇಕು.

ಇಲ್ಲವಾದರೆ ಏನಾಗುತ್ತದೆ? ಪ್ರೇಮದಲ್ಲಿ ಅಸಹನೆ ಶುರುವಾಗುತ್ತದೆ. ಏಕೆಂದರೆ ಮನುಷ್ಯ ಜೀವಿಯಲ್ಲಿ ಮಿಥ್ಯಾಹಂಕಾರ ಇರುತ್ತದೆ. ಇದು ತನ್ನ ಗುರುತಿನ ಕುರಿತು ವಿಪರೀತ ಕಾನ್ಷಿಯಸ್ ಆಗಿರುತ್ತದೆ. ಎಷ್ಟೇ ಸಮರ್ಪಣೆ, ಎಷ್ಟೇ ಪ್ರೇಮವೆಂದರೂ ಅಲ್ಲಿ ತನ್ನ ಗುರುತನ್ನು ಬಯಸುತ್ತಿರುತ್ತದೆ. ಅದನ್ನು ಅದುಮಿಕೊಂಡು ಪ್ರೇಮಿಗಾಗಿ ಬದುಕುತ್ತೇನೆ, ಪ್ರೇಮಿಯ ಗುರುತನ್ನು ತನ್ನ ಗುರುತಾಗಿಸಿಕೊಳ್ಳುತ್ತೇನೆ ಎನ್ನುವವರು ಸಂಪೂರ್ಣವಾಗಿ ಅದನ್ನು ಮಾಡಲೂ ಆಗದೆ, ಬಿಡಲೂ ಆಗದೆ ಚಡಪಡಿಸಿಹೋಗುತ್ತಾರೆ. ಈ ಚಡಪಡಿಕೆ ಸಂಬಂಧದ ಮೇಲೆ ಪರಿಣಾಮ ಬೀರಿ ಬಿರುಕು ಬೀಳುವ ತಾರಕಕ್ಕೂ ಏರಬಹುದು. ಆದ್ದರಿಂದಲೇ ಕೆಲವೊಮ್ಮೆ ಪ್ರೇಮ ವಿವಾಹಗಳು ಬಿರುಕು ಬೀಲುವುದು. ಈ ಕಾರಣದಿಂದಲೇ ಅತ್ಯಂತ ಪ್ರೀತಿಯ ಜೋಡಿಗಳು ಪರಸ್ಪರ ಮುಖ ನೋಡದಂತೆ ದೂರಾಗುವುದು.

ಹಾಗಾದರೆ ಪ್ರೇಮಿಯನ್ನೇ ಬದುಕುವ ಉತ್ಕಟತೆ ಸಾಧ್ಯವೇ ಇಲ್ಲವೆ? ಸಾಧ್ಯವಿದೆ. ಆದರೆ ಅದು ಬೇಡುವ ವೇದಿಕೆ ಬೇರೆಯೇ. ಅದು ಸಾಮಾನ್ಯ ಲೌಕಿಕದ ಮಾತಲ್ಲ.

ಜನಸಾಮಾನ್ಯರ ಪ್ರೀತಿ ಪ್ರೇಮ ಪ್ರಣಯಗಳು ಸ್ವಾರ್ಥಿಯೂ ಅವಲಂಬಿತವೂ ಸಂಕುಚಿತವೂ ಆಗಿರುತ್ತವೆ. ಆದ್ದರಿಂದ ಪ್ರೇಮಿಗಳು ತಮ್ಮ ಪ್ರೇಮ ಅದೆಷ್ಟೇ ಉತ್ಕಟವಾದದ್ದು ಅಂದುಕೊಂಡರೂ ತಮ್ಮತನವನ್ನು ಉಳಿಸಿಕೊಂಡೇ ಅದನ್ನು ನಿಭಾಯಿಸುವುದು ಅತ್ಯಗತ್ಯ. ಇಂಥಾ ಎಚ್ಚರದಲ್ಲಿ ಪ್ರೇಮಿಗಳು ತಮ್ಮನ್ನು ತಾವು ಕಳೆದುಕೊಳ್ಳಲಾರರು. ಇಲ್ಲಿ ಸಂಗಾತಿಯ ಸಹಕಾರದಿಂದ, ಪರಸ್ಪರ ಪ್ರತಿಬಿಂಬಿಸುವಿಕೆಯಿಂದ ನೀವು ನಿಮ್ಮನ್ನು ಪಡೆದುಕೊಳ್ಳುವಿರಿ. ವಾಸ್ತವ ಅರ್ಥ ಮಾಡಿಕೊಂಡು ಮುಂದಡಿ ಇಡುವ ಸಂಯಮ ನಮ್ಮಲ್ಲಿರಬೇಕಷ್ಟೆ.     

Leave a Reply