ಆತ್ಮಾವಿಶ್ವಾಸದಿಂದಲೇ ಸಿದ್ಧಿಸುವುದು ಗೆಲುವು

ಎಲ್ಲಿಯವರೆಗೆ ಗೆಲುವನ್ನು ನಾವು ಅನಿವಾರ್ಯ ಎಂದು ಭಾವಿಸುವುದಿಲ್ಲವೋ, ಅದನ್ನು ಜೀವನದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದಕ್ಕಾಗಿ ನಮ್ಮ ಸಂಪೂರ್ಣ ಬದ್ಧತೆ, ಸಾಮರ್ಥ್ಯ, ಕೌಶಲ್ಯಗಳನ್ನು ಧಾರೆ ಎರೆಯುವುದಿಲ್ಲ. ನಮ್ಮ ಆತ್ಮ ವಿಶ್ವಾಸದ ಪ್ರಮಾಣ ಹೆಚ್ಚಿಸಿಕೊಳ್ಳುವುದಿಲ್ಲ. ಯಾವಾಗ ಅದು ಬದುಕಿನ ಪ್ರಶ್ನೆಯಾಗುತ್ತದೋ ಆಗ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಶುರುವಿಡುತ್ತೇವೆ.

ಸೋಲು ಮತ್ತು ಗೆಲುವು ಸಾಂದರ್ಭಿಕ ಸತ್ಯಗಳು. ಇವೆರಡೂ ತಾತ್ಕಾಲಿಕ. ಆದರೆ ಈ ಎರಡು ಸಂಗತಿಗಳು ಹಲವು ಆಯಾಮಗಳಲ್ಲಿ ಹಲವು ಪಾಠಗಳನ್ನು ಕಲಿಸುತ್ತವೆ. ಕಲಿಕೆ ಕೇವಲ ಗೆಲುವಿನಲ್ಲಿ ಇರುವುದಿಲ್ಲ. ವಾಸ್ತವದಲ್ಲಿ ಸೋಲುಂಡ ಅವಧಿಯ ಕಲಿಕೆಗಳು ಗೆಲುವಿಗೆ ಮೆಟ್ಟಿಲಾಗುತ್ತವೆ.

ಆತ್ಮವಿಶ್ವಾಸ ಮುಖ್ಯ

ಜಪಾನಿನ ಪ್ರಖ್ಯಾತ ಕುಸ್ತಿಪಟು ಓ ನಮಿ ತಾನು ಭಾಗವಹಿಸಿದ್ದ ಪಂದ್ಯಗಳಲ್ಲಿ ಒಮ್ಮೆ ಕೂಡ ಗೆಲುವು ಕಂಡಿರಲಿಲ್ಲ. ಅವನನ್ನು ಸೋಲಿನ ಸರದಾರ ಎಂದೇ ಕರೆಯಲಾಗುತ್ತಿತ್ತು. ಅಷ್ಟರಮಟ್ಟಿಗೆ ನಮಿ ಪಂದ್ಯಗಳಲ್ಲಿ ಕೈಚೆಲ್ಲಿ ಮರಳುತ್ತಿದ್ದ. ಹಾಗೆಂದು ಅವನೇನೂ ಕಡಿಮೆ ಸಾಮರ್ಥ್ಯದವನಲ್ಲ. ಅಭ್ಯಾಸ ನಡೆಸುವಾಗ ಅವನ ಪಟ್ಟುಗಳನ್ನು ಕಂಡವರು ಬೆರಗಾಗುತ್ತಿದ್ದರು. ಆದರೆ ಪಂದ್ಯಗಳಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡುತ್ತಿದ್ದ. ಅವನ ಈ ಗತಿಯನ್ನು ಕಂಡು ಬೌದ್ಧ ಬಿಕ್ಖುವೊಬ್ಬ ಆತನಿಗೆ ತನ್ನ ಆತ್ಮವಿಶ್ವಾಸದ ಅವಲೋಕನ ಮಾಡುವಂತೆ ಸೂಚಿಸಿದ. ತಾನೇಕೆ ಇಷ್ಟು ಅಸ್ಥಿರತೆಯಲ್ಲಿರುತ್ತೇನೆಂದು ಅವಲೋಕಿಸುವಂತೆ ಹೇಳಿದ. ಅದರಂತೆ ನಮಿ ಇಡಿ ರಾತ್ರಿ ಕುಳಿತು ಯೋಚಿಸಿದ. ತನ್ನ ಆತ್ಮವಿಶ್ವಾಸವನ್ನು ಕುರಿತು ಧ್ಯಾನಿಸಿದ. ಆತನಿಗೆ ತನ್ನ ಸಾಮರ್ಥ್ಯದ ಅರಿವಾಯ್ತು. ತಾನು ಯಾರಿಗೂ ಕಡಿಮೆಯಲ್ಲವೆಂದು ಮನದಟ್ಟಾಯ್ತು.

ಅಷ್ಟೇ…. ಅಲ್ಲಿಂದ ಮುಂದೆ ಒ ನಮಿ ಹಿಂತಿರುಗಿ ನೋಡಲಿಲ್ಲ. ಅನಂತರದಲ್ಲಿ ಆತ ಒಂದೇ ಒಂದು ಪಂದ್ಯವನ್ನೂ ಸೋಲಲಿಲ್ಲ.

ಸೋಲು ಸಾಮರ್ಥ್ಯದ ಕೊರತೆಯಿಂದ ಬರುವಂಥದ್ದಲ್ಲ. ಅದು ಆತ್ಮವಿಶ್ವಾಸದ ಕೊರತೆಯಿಂದ ಉಂಟಾಗುವಂಥದ್ದು. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ನುರಿತ ತರಬೇತಿ ಪಡೆದು ಪಂದ್ಯಕ್ಕೆ ಪ್ರವೇಶ ಪಡೆಯುತ್ತಾನೆ ಎಂದರೆ ಆತನಲ್ಲಿ ಸಾಮರ್ಥ್ಯ ಇರಲೇಬೇಕು. ಏಕೆಂದರೆ ತರಬೇತಿ, ನಿಯಮಗಳು, ಮಾನದಂಡ – ಇವೆಲ್ಲವೂ ಎಲ್ಲರಿಗೂ ಒಂದೇ ಬಗೆಯವಾಗಿರುತ್ತವೆ. ಹಾಗಿದ್ದೂ ಒಬ್ಬರು ಗೆಲ್ಲುತ್ತಾರೆ ಮತ್ತು ಸೋಲು ಒಬ್ಬರದಾಗುತ್ತದೆ. ಅಥವಾ ಒಂದು ತಂಡ ಗೆಲ್ಲುತ್ತದೆ ಮತ್ತೊಂದು ತಂಡ ಸೋಲಿಗೆ ಶರಣಾಗುತ್ತದೆ. ಇದಕ್ಕೆ ಕಾರಣವೇನು? ನಾವು ಯಾವುದೋ ಒಂದು ಗುರಿ ಇಟ್ಟುಕೊಂಡಿರುತ್ತೇವೆ. ಅದನ್ನು ಸಾಧಿಸಲಾಗದೆ ಮತ್ತೆ ಮತ್ತೆ ಹಿಂತೆಗೆಯುತ್ತೇವೆ. ಆದರೆ ಅದೇ ಗುರಿಯನ್ನು ಸಾಧಿಸದೆ ವಿಧಿಯಿಲ್ಲ, ಅದು ಬದುಕಿಗೆ ಅನಿವಾರ್ಯ ಎಂದಾದಾಗ ಹೇಗಾದರೂ ಮಾಡಿ ಅದನ್ನು ನಮ್ಮದಾಗಿಸಿಕೊಳ್ತೇವೆ. ಯಾಕೆ ಹೀಗೆ?

ಉತ್ತರ ಸ್ಪಷ್ಟ. ಎಲ್ಲಿಯವರೆಗೆ ಗೆಲುವನ್ನು ನಾವು ಅನಿವಾರ್ಯ ಎಂದು ಭಾವಿಸುವುದಿಲ್ಲವೋ, ಅದನ್ನು ಜೀವನದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದಕ್ಕಾಗಿ ನಮ್ಮ ಸಂಪೂರ್ಣ ಬದ್ಧತೆ, ಸಾಮರ್ಥ್ಯ, ಕೌಶಲ್ಯಗಳನ್ನು ಧಾರೆ ಎರೆಯುವುದಿಲ್ಲ. ನಮ್ಮ ಆತ್ಮ ವಿಶ್ವಾಸದ ಪ್ರಮಾಣ ಹೆಚ್ಚಿಸಿಕೊಳ್ಳುವುದಿಲ್ಲ. ಯಾವಾಗ ಅದು ಬದುಕಿನ ಪ್ರಶ್ನೆಯಾಗುತ್ತದೋ ಆಗ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಶುರುವಿಡುತ್ತೇವೆ.

ಆದ್ದರಿಂದ ಯಾವುದೇ ವಿಷಯದಲ್ಲಿ ನಾವು ಸೋತಾಗ ಮಾಡಬೇಕಿರುವ ಮೊದಲ ಕೆಲಸ ಆತ್ಮಾವಲೋಕನ. ಇದು ಇತರರೊಡನೆಯ ಸ್ಪರ್ಧೆಯಲ್ಲಿ ಅನುಭವಿಸುವ ಪರಾಜಯವೇ ಆಗಬೇಕಿಲ್ಲ. ಅನೇಕ ಬಾರಿ ನಮ್ಮೆದುರೇ ನಾವು ಸೋಲುವುದಿದೆ. ನಮ್ಮ ನಿರ್ಧಾರದಂತೆ ನಡೆಯಲಾಗದೆ ಸೋತುಹೋಗುತ್ತೇವೆ. ಬದ್ಧತೆ ಉಳಿಸಿಕೊಳ್ಳಲಾಗದೆ ಸೋಲುತ್ತೇವೆ. ಇಂಥಾ ಸನ್ನಿವೇಶಗಳಲ್ಲಿ ನಮ್ಮನ್ನು ನಾವು ಪಟ್ಟು ಹಿಡಿದು ಕೂರಿಸಿಕೊಳ್ಳಬೇಕು. ಅಂತಃಸಾಕ್ಷಿಯೆದುರು ಮುಖಾಮುಖಿಯಾಗಬೇಕು. ಆಗಷ್ಟೆ ನಾವು ಎಡವಿದ್ದೆಲ್ಲಿ ಅನ್ನುವುದನ್ನು ಪ್ರಾಮಾಣಿಕವಾಗಿ ಅರಿಯಲು ಸಾಧ್ಯ. ಇಂತಹ ಪ್ರಾಮಾಣಿಕ ಇಲ್ಲದೆ ನಾವು ಬಹಳ ಬಾರಿ `ನನ್ನೆಲ್ಲ ಪ್ರಯತ್ನ ಹಾಕಿದ್ದೆ, ಆದರೂ ಹೀಗಾಯ್ತು’ ಎಂದೋ  `ಅವರು ನನ್ನ ಗೆಲುವು ಕಸಿದುಕೊಂಡರು’ ಎಂದೋ ಗೊಣಗುತ್ತೇವೆ. ಇಂತಹ ಹೇಳಿಕೆಗಳಿಂದ ನಮ್ಮ ಮುಂದಿನ ಗೆಲುವನ್ನೂ ನಾವು ತಪ್ಪಿಸಿಕೊಳ್ತೇವೆ ಹೊರತು ಮತ್ತೇನಲ್ಲ. ಸೋಲನ್ನು ಯಾರದೋ ತಲೆಗೆ ಕಟ್ಟದೆ, ಸಮಚಿತ್ತದಿಂದ ಸ್ವೀಕರಿಸಿ ತಪ್ಪು ಒಪ್ಪುಗಳ ಅವಲೋಕನ ನಡೆಸಿದರಷ್ಟೆ ಗೆಲುವಿನ ಮೆಟ್ಟಿಲು ಕಟ್ಟಲು ಸಾಧ್ಯ.

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.