ನಮಗೆ ನಾವು ಎಲ್ಲಿ ತಲುಪುತ್ತೀವಿ ಅಂತ ಗೊತ್ತಿರೋದಿಲ್ಲ. ಯಾವ ದಾರಿಯಲ್ಲಿ ಹೋಗಬೇಕಂತಲೂ ಗೊತ್ತಿರೋದಿಲ್ಲ. ಹಾಗಂತ ನಿಂತಲ್ಲೇ ಇದ್ದುಬಿಟ್ಟರೆ ಅಲ್ಲೇ ಮುಗಿದುಹೋಗಬೇಕಾಗುತ್ತೆ. ಆದ್ದರಿಂದ ಯಾವುದಾದರೊಂದು ಗುರಿ ತಲುಪಲಿಕ್ಕೆ, ಏನಾದರೊಂದು ಸಾಧನೆ ಮಾಡಲಿಕ್ಕೆ ನಡಿಗೆ ನಿಲ್ಲಿಸದಿರುವುದೊಂದೇ ಉಪಾಯ ~ ಅಲಾವಿಕಾ
“ನೀನು ಯಾರು?” ಕಂಬಳಿ ಹುಳು ಆಲೀಸ್’ಳನ್ನು ಕೇಳಿತು.
ಸಂಭಾಷಣೆ ಇಂಥದೊಂದು ಪ್ರಶ್ನೆಯಿಂದ ಶುರುವಾದರೆ ಮುಂದುವರಿಯೋದು ಹೇಗೆ?
ಆಲಿಸ್ ಗಲಿಬಿಲಿಯಾದಳು. ಸಾವರಿಸಿಕೊಂಡು, “ನಾನು ಯಾರು ಅಂದ್ರೆ…. ಇವತ್ತು ಬೆಳಗ್ಗೆ ಏಳುವಾಗ ನಾನು ಏನಾಗಿದ್ದೆ ಅನ್ನೋದು ನನಗೆ ಗೊತ್ತಿದೆ ಸರ್. ಆದ್ರೆ, ಆಗಿಂದ ಇಲ್ಲೀತನಕ ನಾನು ಸಾಕಷ್ಟು ಸಲ ಬದಲಾಗಿದ್ದೇನೆ ಅಂತ ಬಲವಾಗಿ ಅನ್ನಿಸ್ತಿದೆ. ಸೋ, ಈಗ ನಾನು ಏನಾಗಿದ್ದೀನಿ ಅಂತ ಗೊತ್ತಿಲ್ಲ ಸರ್!” ಅಂದಳು ಆಲಿಸ್.
ನಾವು ಕೂಡಾ ಹೀಗೇನೇ. ಸಡನ್ನಾಗಿ ಯಾರಾದ್ರೂ “ನೀವು ಯಾರು?” ಅಂತ ಕೇಳಿಬಿಟ್ಟರೆ ಗೊಂದಲಕ್ಕೆ ಒಳಗಾಗಿಬಿಡ್ತೀವಿ. ನಮ್ಮ ಅಷ್ಟೊಂದು ಗುರುತು – ಚಹರೆಗಳಲ್ಲಿ ನಾನು ಅಂತ ಕರೆಯಬಹುದಾದ ಗುರುತು ಯಾ ಚಹರೆ ಯಾವುದು? ನಮಗೆ ತೋಚುವುದೇ ಇಲ್ಲ. ಇನ್ನು ಕೆಲವು ಸಲ ನಾವು ದಿಕ್ಕು ದೆಸೆ ಗೊತ್ತಾಗದ ಹಾಗೆ ಕಳೆದುಹೋಗಿರ್ತೀವಿ. ನಮ್ಮನ್ನು ನಮ್ಮ ದಾರಿಗೆ ಮರಳಿ ತರಲು ಏನಾದರೊಂದು ದಿಕ್ಸೂಚಿ ಬೇಕಾಗುತ್ತದೆ.
ಹಾಗೆಂದೇ ಸುರಂಗದೊಳಗೆ ದಾರಿ ತಪ್ಪಿ ಅಲೆಯುತ್ತದ್ದ ಆಲಿಸ್ “ನಾನು ಇಲ್ಲಿಂದ ಯಾವ ದಾರೀಲಿ ಹೋಗಬಹುದು ಅಂತ ದಯವಿಟ್ಟು ಹೇಳ್ತೀರ?” ಎಂದು ಬೆಕ್ಕನ್ನು ಕೇಳ್ತಾಳೆ.
“ನೀನು ಎಲ್ಲಿಗೆ ಹೋಗಲು ಬಯಸ್ತೀಯ ಅನ್ನೋದರ ಮೇಲೆ ಅದು ನಿರ್ಧಾರವಾಗುತ್ತೆ”ಎಂದು ಉತ್ತರಿಸುತ್ತೆ ಬೆಕ್ಕು.
“ಎಲ್ಲಿಗೆ ಹೋಗ್ಬೇಕು ಅನ್ನೋದು ಅಷ್ಟೇನೂ ಮುಖ್ಯವಲ್ಲ ನಂಗೆ. ಒಟ್ಟಾರೆ ಇಲ್ಲಿಂದ ಮುಂದಕ್ಕೆ ನಡೀಬೇಕು.” ಅಂತಾಳೆ ಆಲಿಸ್.
“ಹಾಗಾದ್ರೆ ನೀನು ಯಾವ ದಾರಿ ಮೂಲಕ ಹೋಗ್ಬೇಕು ಅನ್ನೋದು ಕೂಡ ಮುಖ್ಯವಾಗೋದಿಲ್ಲ” ಬೆಕ್ಕು ಕೂಡಾ ಪಟ್ಟುಬಿಡೋದಿಲ್ಲ.
“ನಾನು ಎಲ್ಲಿಗಾದ್ರೂ ಹೋಗೋಕೆ ಸಾಧ್ಯವಾಗೋ ಹಾಗೆ ಒಂದು ದಾರಿಯನ್ನು ಸೂಚಿಸಿ” ಅನ್ನುತ್ತಾಳೆ ಆಲಿಸ್.
“ನೀನು ಖಂಡಿತವಾಗಿಯೂ ಎಲ್ಲಿಗಾದರೂ ಹೋಗಿ ತಲುಪಿಕೊಳ್ಳಬಹುದು, ನಡಿಗೆ ನಿಲ್ಲಿಸೋದಿಲ್ಲ ಅಂತಾದರೆ ಮಾತ್ರ!” ಅನ್ನುತ್ತೆ ಬೆಕ್ಕು.
ಹೌದಲ್ಲ? ನಮಗೆ ನಾವು ಎಲ್ಲಿ ತಲುಪುತ್ತೀವಿ ಅಂತ ಗೊತ್ತಿರೋದಿಲ್ಲ. ಯಾವ ದಾರಿಯಲ್ಲಿ ಹೋಗಬೇಕಂತಲೂ ಗೊತ್ತಿರೋದಿಲ್ಲ. ಹಾಗಂತ ನಿಂತಲ್ಲೇ ಇದ್ದುಬಿಟ್ಟರೆ ಅಲ್ಲೇ ಮುಗಿದುಹೋಗಬೇಕಾಗುತ್ತೆ. ಆದ್ದರಿಂದ ಯಾವುದಾದರೊಂದು ಗುರಿ ತಲುಪಲಿಕ್ಕೆ, ಏನಾದರೊಂದು ಸಾಧನೆ ಮಾಡಲಿಕ್ಕೆ ನಡಿಗೆ ನಿಲ್ಲಿಸದಿರುವುದೊಂದೇ ಉಪಾಯ.
ಬಹುತೇಕವಾಗಿ ನಮ್ಮ ಜೀವನಯಾನ ಸರಳರೇಖೆಯಂತೆ ಇರುವುದಿಲ್ಲ. ಇಲ್ಲಿ ಹೆಜ್ಜೆ ಎತ್ತಿಟ್ಟರೆ ಅಲ್ಲಿ ಹೋಗಿ ನಿಲ್ಲುತ್ತೇವೆ ಎಂದಾಗಲೀ, ಈ ತಿರುವಿನಲ್ಲಿ ತಿರುಗಿದರೆ ಆ ಗುರಿ ತಲುಪುತ್ತೇವೆ – ಎಂದೆಲ್ಲ ಖಚಿತವಾಗಿ ಹೇಳಲಾಗುವುದಿಲ್ಲ. ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ಯಾವ ದಾರಿಯಲ್ಲಿ ಯಾವ ಅಡ್ಡಿಯಾದರೂ ಬರಬಹುದು. ಪ್ರಪಾತ ಎದುರಾಗಬಹುದು, ಇಲ್ಲವೇ ಮೆಟ್ಟಿಲುಗಳು ಸಿಗಬಹುದು. ಆದ್ದರಿಂದ ಆಲಿಸ್’ಗೆ ಬೆಕ್ಕು ಹೇಳಿದಂತೆ ನಡಿಗೆಯನ್ನು ಜಾರಿಯಲ್ಲಿಡುವುದೊಂದೇ ನಮಗಿರುವ ಉಪಾಯ.
ಈ ನಡಿಗೆಯಲ್ಲಿ ನಾವು ಹಾಯುವ ದಾರಿಗಳು, ಎದುರಿಸುವ ಅಡ್ಡಿಗಳು, ಏರುವ ಎತ್ತರಗಳು – ಇವೆಲ್ಲವೂ ನಮ್ಮ ಆಯಾ ಹೊತ್ತಿನ ಗುರುತುಗಳನ್ನು ನಿರ್ಧರಿಸುತ್ತ ಇರುತ್ತವೆ. ನಾವು ಎಲ್ಲಿಯಾದರೂ ಒಂದೆಡೆ ತಲುಪಿಕೊಂಡ ಮೇಲೆ ಈ ಎಲ್ಲ ಗುರುತುಗಳ ಮೊತ್ತ ನಾವಾಗಿರುತ್ತೇವೆ. ಹೊಸತಾದ ನಾವು. ಆಗ ನಮ್ಮ ಬಗೆಗೆ ನಮಗೂ ಒಂದು ಖಚಿತ ಅರಿವು ಮೂಡಿರುತ್ತದೆ. ನಮ್ಮ ಗುರುತನ್ನು ನಾವು ಯಾವುದೇ ಗೊಂದಲವಿಲ್ಲದೆ ಹೇಳಿಕೊಳ್ಳಬಲ್ಲೆವಾಗುತ್ತೇವೆ.