ಅಮೆಜಾನ್ ~ ಬಲಮೊಲೆ ಇಲ್ಲದ ಮಹಿಳಾ ಯೋಧರ ಸಾಮ್ರಾಜ್ಯ : ಗ್ರೀಕ್ ಪುರಾಣ ಕಥೆಗಳು ~ 8

ಟನಾಯಿಸನ ಪ್ರಕರಣದಿಂದ ಕೋಪಗೊಂಡಿದ್ದ ಲೈಸಿಪಿ, ತನ್ನ ಅಮೆಜಾನ್ ರಾಜ್ಯದಲ್ಲಿ ಗಂಡಸರಿಗೆ ಪ್ರವೇಶವಿಲ್ಲದಂತೆ ಮಾಡಿದಳು. ತಮ್ಮದು ಸಂಪೂರ್ಣ ಮಹಿಳಾ ಸಾಮ್ರಾಜ್ಯವೆಂದು ಘೋಷಿಸಿದಳು. ಅಪ್ಪಿತಪ್ಪಿ ಬರುವ ಹೊರಗಿನ ಗಂಡಸರಿಗೆ ಮರಣದಂಡನೆಯೇ ಶಿಕ್ಷೆ.

 amazon-warrior-women

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಕಾಕಸಸ್ ಪರ್ವತ ಪ್ರದೇಶದಲ್ಲಿ ಒಂದು ದೊಡ್ಡ ಮಹಿಳಾಯೋಧರ ಪಡೆ ಇತ್ತು. ಅವರು ಇರುವಲ್ಲಿ ಎಂಥವರೂ ಹೋಗಲು ಹೆದರುತ್ತಿದ್ದರು. ಅಷ್ಟು ಖ್ಯಾತವಾಗಿತ್ತು ಅವರ ಶೌರ್ಯ. ಈ ಮಹಿಳಾ ಯೋಧರನ್ನು ಅಮೇಜಾನರು ಎಂದು ಕರೆಯುತ್ತಿದ್ದರು. ಅವರಿಗೆ ಆ ಹೆಸರು ಬರಲು ಕಾರಣವೂ ಇತ್ತು.

ರಣಕಲಿಗಳಾಗಿದ್ದ ಅಮೆಜಾನ್ ಯೋಧೆಯರು ಘರ್ಜಿಸುತ್ತಾ ಯಾರ ಮೇಲಾದರೂ ಎಗರಿದರು ಎಂದರೆ ಅವರ ಕಥೆ ಮುಗಿದಂತೆಯೇ. ಭಲ್ಲೆ ಬೀಸಿ ಪ್ರಾಣಿಗಳ ಬೇಟೆ ಮಾಡುವುದರಲ್ಲೂ ಅವರು ಅಷ್ಟೇ ಚುರುಕು. ಈ ಮಹಿಳೆಯರು ಅದೆಷ್ಟು ಯುದ್ಧಪ್ರಿಯೆಯರು ಅಂದರೆ, ಭಲ್ಲೆ ಬೀಸಲು, ಬಾಣ ಬಿಡಲು ತೊಡರಾಗದಿರಲಿ ಎಂದು ತಮ್ಮ ಬಲ ಮೊಲೆಯನ್ನೇ ಕತ್ತರಿಸಿಕೊಂಡು ಬಿಡುತ್ತಿದ್ದರು. ಹೀಗೆ ಬಲ ಮೊಲೆ ಇಲ್ಲದ ಮಹಿಳೆಯರನ್ನು ಪ್ರಾಚೀನ ಗ್ರೀಕ್ ಭಾಷೆಯಲ್ಲಿ ‘ಅಮೆಜೋಸ್’ ಎನ್ನಲಾಗುತ್ತಿತ್ತು. ಹೀಗೆ ಆ ಯೋಧೆಯರಿಗೆ ‘ಅಮೆಜೋಸ್ ಮಹಿಳೆಯರು’ ಅಥವಾ ‘ಅಮೆಜಾನ್ ವೀರ ಯೋಧೆಯರು’ ಎಂಬ ಹೆಸರು ಅಂಟಿಕೊಂಡಿತು.

ಕಾಲಕ್ರಮೇಣ ಈ ಅಮೆಜಾನ್’ಗಳು ಕಾಕಸಸ್ ಪರ್ವತದಿಂದ ಕೆಳಗಿಳಿದು ಕಪ್ಪು ಸಮುದ್ರದ ದಕ್ಷಿಣ ತೀರದಲ್ಲಿರುವ ಥರ್ಮೊಡನ್ ನದೀಬಯಲಿನಲ್ಲಿ ನೆಲೆಸಿದರು.

ಅವರು ಹಾಗೆ ಪರ್ವತ ಬಿಟ್ಟು ಬಂದಿದ್ದು ಒಂದು ವಿಚಿತ್ರ ಪ್ರಸಂಗದಿಂದ. ಈ ಪ್ರಸಂಗ ಅಮೆಜಾನ್ ಮಹಿಳೆಯರ ಬದುಕನ್ನೇ ತಿರುಗಿಸಿಬಿಟ್ಟಿತು.

ಅಮೆಜಾನರ ರಾಣಿ ಲೈಸಿಪಿಗೆ ಟನಾಯಿಸ್ ಎಂಬ ಮಗನಿದ್ದ. ಅವನಿಗೂ ಯುದ್ಧವೆಂದರೆ ಬಹಳ ಪ್ರೀತಿ. ಅದರಲ್ಲೇ ಮತ್ತನಾಗಿದ್ದ ಆತ ಪ್ರೇಮ, ಪ್ರಣಯಗಳನ್ನು ತಿರಸ್ಕರಿಸಿಬಿಟ್ಟ. ಇದರಿಂದ ಸೌಂದರ್ಯ ಮತ್ತು ಕಾಮದ ಅಧಿದೇವತೆ ಅಫ್ರೋದಿತೆಗೆ ಸಿಟ್ಟು ಬಂತು. ನಿನಗೆ ನಿನ್ನ ತಾಯಿಯ ಮೇಲೆಯೇ ಮೋಹ ಉಂಟಾಗಲಿ ಎಂದು ಟನಾಯಿಸನನ್ನು ಶಪಿಸಿದಳು. ಪರಿಣಾಮವಾಗಿ ಟನಾಯಿಸ್’ಗೆ ತನ್ನ ತಾಯಿಯ ಮೇಲೆ ಪ್ರೇಮ ಉಂಟಾಯಿತು. ಆಕೆಯೊಂದಿಗೆ ಕಾಮಿಸುವ ಬಯಕೆಯೂ ತೀವ್ರವಾಯಿತು. ಇದರಿಂದ ಅವನಲ್ಲಿ ಪಾಪ ಪ್ರಜ್ಞೆ ಹುಟ್ಟಿ, ಭಾವನೆಗಳನ್ನು ಹತ್ತಿಕ್ಕಲಾಗದೆ ಆತ್ಮಹತ್ಯೆ ಮಾಡಿಕೊಂಡ. ಅನಂತರ ಪ್ರೇತವಾಗಿ ಬಂದು ತನ್ನ ತಾಯಿಯನ್ನು ಕಾಡಹತ್ತಿದ ಟನಾಯಿಸ್.

ಈ ಪ್ರಕರಣದಿಂದ ಬೇಸರಗೊಂಡ ಲೈಸಿಪಿ ತನ್ನ ಜನರೊಂದಿಗೆ ಪರ್ವತ ಬಿಟ್ಟು ದಕ್ಷಿಣಕ್ಕೆ ಬಂದು ನೆಲೆಸಿದಳು. ಯೋಧೆಯರನ್ನು ಕಟ್ಟಿಕೊಂಡು ರಾಜ್ಯಗಳ ಮೇಲೆ ಯುದ್ಧ ಸಾರಿ ಒಂದೊಂದೇ ಪ್ರದೇಶವನ್ನು ಗೆದ್ದುಕೊಂಡಳು. ಥೆಮಿಸ್ಕಿರ ಎಂಬ ನಗರವನ್ನು ನಿರ್ಮಿಸಿ, ಅದನ್ನುರಾಜಧಾನಿಯನ್ನಾಗಿ ಮಾಡಿಕೊಂಡಳು.

ಟನಾಯಿಸನ ಪ್ರಕರಣದಿಂದ ಕೋಪಗೊಂಡಿದ್ದ ಲೈಸಿಪಿ, ತನ್ನ ಅಮೆಜಾನ್ ರಾಜ್ಯದಲ್ಲಿ ಗಂಡಸರಿಗೆ ಪ್ರವೇಶವಿಲ್ಲದಂತೆ ಮಾಡಿದಳು. ತಮ್ಮದು ಸಂಪೂರ್ಣ ಮಹಿಳಾ ಸಾಮ್ರಾಜ್ಯವೆಂದು ಘೋಷಿಸಿದಳು. ಅಪ್ಪಿತಪ್ಪಿ ಬರುವ ಹೊರಗಿನ ಗಂಡಸರಿಗೆ ಮರಣದಂಡನೆಯೇ ಶಿಕ್ಷೆ. ಅಮೆಜಾನ್ ಯೋಧೆಯರು ವರ್ಷದಲ್ಲಿ ಒಮ್ಮೆ ನೆರೆ ನಾಡಿಗೆ ಹೋಗಿ, ಇಲ್ಲವೇ ಗಡಿನಾಡಿನಲ್ಲಿ ನಡೆಯುತ್ತಿದ್ದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ಗಂಡಸರೊಡನೆ ಸಂಪರ್ಕ ಬೆಳೆಸಿ, ಮಕ್ಕಳನ್ನು ಪಡೆಯಬಹುದಿತ್ತು. ಹಾಗೆ ಹುಟ್ಟಿದ ಮಗು ಹೆಣ್ಣಾಗಿದ್ದರೆ, ಅದರ ಬಲ ಮೊಲೆ ಕತ್ತರಿಸಿ ಅವಳನ್ನೂ ‘ಅಮೆಜಾನ್’ ಮಾಡಲಾಗುತ್ತಿತ್ತು. ಗಂಡಾಗಿದ್ದರೆ, ಅದರ ಕೈ ಕಾಲುಗಳನ್ನು ತಿರುಚಿ ಮನೆಗೆಲಸಕ್ಕೆ ಹಾಕಿಕೊಳ್ಳಲಾಗುತ್ತಿತ್ತು. ಯುದ್ಧವಿಲ್ಲದ ದಿನಗಳಲ್ಲಿ ಈ ಯೋಧೆಯರು ಬೇಟೆಯಲ್ಲಿ ತೊಡಗುತ್ತಿದ್ದರು.

ಈ ಅಮೆಜಾನ್ ಯೋಧೆಯರು ಟ್ರೋಜನ್ ಯುದ್ಧದಲ್ಲಿ ಟ್ರೋಜನ್ನರ ಪರ – ಗ್ರೀಕರ ವಿರುದ್ಧ ಹೋರಾಡಿದರು. ಟ್ರೋಜನ್ ಯುದ್ಧದ ನಂತರ, ಕಾಲಕ್ರಮದಲ್ಲಿ ಅಮೆಜಾನ್ ಸಾಮ್ರಾಜ್ಯ ನಾಶವಾಯಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ಧೀರೆಯರ ಮಹಿಳಾ ರಾಜ್ಯದ ಕಥನ  ಇಲ್ಲಿದೆ:  https://aralimara.com/2018/04/26/greek8/ ) ಹಿಪೊಲಿಟಾ ಎಷ್ಟು ಧೀರಳೋ ಅಷ್ಟೇ ಸುಂದರಿ. […]

    Like

Leave a Reply

This site uses Akismet to reduce spam. Learn how your comment data is processed.