ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ.
ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿಯಾಗಿರುವುದು.
ಸಮಾಜ ಸುಧಾರಣೆಯ ಗೋಜಿಗೆ ಹೋಗಬೇಡ. ಮೊದಲು ಆಧ್ಯಾತ್ಮಿಕ ಸುಧಾರಣೆಯಾಗಬೇಕು. ಅದಿಲ್ಲದೆ ಬೇರೆ ಯಾವ ಸುಧಾರಣೆಯೂ ಆಗಲಾರದು. ಇದನ್ನೇ ಆಮೂಲಾಗ್ರ ಸುಧಾರಣೆ ಎನ್ನುವುದು. ಮೊದಲು ಅಲ್ಲಿ ಬೆಂಕಿ ಇಡಿ, ಹತ್ತಿಕೊಂಡು ಉರಿಯಲಿ. ಆಗ ಭಾರತ ರಾಷ್ಟ್ರ ನಿರ್ಮಾಣವಾಗುವುದು. ಸಮಸ್ಯೆ ಬಹಳ ಜಟಿಲವಾದುದರಿಂದ, ವಿಶಾಲವಾದುದರಿಂದ, ಸುಧಾರಣೆ ಅಷ್ಟು ಸುಲಭವಲ್ಲ. ಅವಸರಪಡಬೇಕಾಗಿಲ್ಲ. ನೂರಾರು ವರ್ಷಗಳಿಂದ ಈ ಸಮಸ್ಯೆ ಎಲ್ಲರಿಗೂ ಗೊತ್ತಿದೆ.
ನಾನು ದೇವರ ಸ್ಥಾನದಲ್ಲಿ ನಿಂತು ಸಮಾಜಕ್ಕೆ ‘ಹೀಗೆ ಚಲಿಸಬೇಕು’ ಎಂದು ಅಪ್ಪಣೆ ಮಾಡಲಾರೆ. ರಾಮನು ಸೇತುವೆಯನ್ನು ಕಟ್ಟುವಾಗ ಇದ್ದ ಅಳಿಲಿನಂತೆ ನಾನು ಇರಬೇಕೆಂದು ಬಯಸುವೆನು. ಅದು ತನ್ನ ಪಾಲಿಗೆ ಬಂದ ಮರಳನ್ನು ಸೇತುವೆಗೆ ಕೊಡಹಿ ಧನ್ಯನಾಗುತ್ತಿತ್ತು. ನನ್ನ ಸ್ಥಿತಿಯೂ ಅಂಥದ್ದೇ.
ಗೀತೆಯು ಹೇಳುವಂತೆ ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು. ಜನಜೀವನಕ್ಕೆ ಬೇಕಾದ ಸಾಂಗ್ರಿ ಒದಗಿದರೆ, ಬೆಳವಣಿಗೆಗೆ ಅದರ ನಿಯಮಾನುಸಾರ ಆಗುವುದು. ಹೇಗೆ ಬೆಳೆಯಬೇಕೆಂದು ಯಾರೂ ಅದನ್ನು ಬಲಾತ್ಕರಿಸಲಾರರು.
ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ. ಆ ಜನರು ಎಲ್ಲಿದ್ದಾರೆ? ಯಾಕೆ ಜನಜಾಗೃತಿ ಸಾಧ್ಯವಾಗುತ್ತಿಲ್ಲ? ಮೊದಲು ಜನರಿಗೆ ಶಿಕ್ಷಣ ನೀಡಿ. ಮೊದಲು ನಿಮ್ಮ ಶಾಸನ ಸಭೆಯನ್ನು ರಚಿಸಿ. ಅನಂತರ ಸುಶಾಸನ ಬರುವುದು. ಮೊದಲು ಅಧಿಕಾರವನ್ನು ಸ್ಥಾಪಿಸಿ. ಅನಂತರ ಅದರ ಆಧಾರದ ಮೇಲೆ ಶಾಸನ ಜನಿಸುವುದು.
ಸಮಾಜ ಸುಧಾರಣೆಯ ಮಾತನಾಡುವವರು ಮೊದಲು ಶಿಕ್ಷಣವನ್ನು ಹರಡಬೇಕು. ಆಗ ಮಾತ್ರವೇ ಉಳಿದ ಕಾರ್ಯಗಳು ಸಿದ್ಧಿಸುವವು. ನೀವೇನು ಹೇಳುತ್ತಿದ್ದೀರಿ ಎಂಬುದನ್ನೇ ತಿಳಿಯಲು ಸಾಧ್ಯವಾಗದೆಹೋದರೆ ಜನರು ಸುಧಾರಿಸುವುದಾದರೂ ಹೇಗೆ?