ಹೆರಾಕ್ಲೀಸನ ಮೇಲಿನ ಅಸೂಯೆಯಿಂದ ಹೀರಾದೇವಿಯು ಯೂರಿಸ್ತ್ಯೂಸನನ್ನು ಮುಂದಿಟ್ಟುಕೊಂಡು ಸಂಚು ಹೂಡಿದ್ದನ್ನು ಈ ಹಿಂದೆ ಓದಿದ್ದೀರಿ (ಕೊಂಡಿ ಇಲ್ಲಿದೆ: https://aralimara.com/2018/05/14/greek16/ ) ಈ ಸಂಚಿನ ಭಾಗವಾಗಿ ತನೆಗ ಹಾಕಲಾದ 8 ಸವಾಲುಗಳನ್ನು ಗೆದ್ದ ಹೆರಾಕ್ಲೀಸ್ ಎದುರಿಸಿದ 9ನೇ ಸವಾಲು ಇಲ್ಲಿದೆ.
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಅಮೇಜಾನರ ರಾಣಿ (ಅಮೆಜಾನ್ ಧೀರೆಯರ ಮಹಿಳಾ ರಾಜ್ಯದ ಕಥನ ಇಲ್ಲಿದೆ: https://aralimara.com/2018/04/26/greek8/ ) ಹಿಪೊಲಿಟಾ ಎಷ್ಟು ಧೀರಳೋ ಅಷ್ಟೇ ಸುಂದರಿ. ಅವಳ ಕೆಚ್ಚನ್ನು ಮೆಚ್ಚಿ ಯುದ್ಧದೇವತೆ ಏರಿಸ್ ಅವಳಿಗೊಂದು ರತ್ನಖಚಿತ ಚಿನ್ನದ ನಡುಪಟ್ಟಿಯನ್ನು ಉಡುಗೊರೆ ನೀಡಿದ್ದ. ಈ ನಡುಪಟ್ಟಿಯನ್ನು ತೊಡುವುದು ಅಂದಿನ ಪ್ರತಿಯೊಬ್ಬ ಹೆಣ್ಣುಮಗಳ ಕನಸಾಗಿತ್ತು. ಯೂರಿಸ್ತ್ಯೂಸನ ಮಗಳು ಅಡ್ಮೀಟಿ ತನಗೆ ಅದು ಬೇಕೇಬೇಕೆಂದು ತಂದೆಯಲ್ಲಿ ಹಠ ಹಿಡಿದಳು. ಹೆರಾಕ್ಲೀಸನಿಗೆ ಒಂಭತ್ತನೆಯ ಸವಾಲು ವಿಧಿಸಲು ಹುಡುಕಾಡುತ್ತಿದ್ದ ಯೂರಿಸ್ತ್ಯೂಸ್, ಹಿಪೊಲಿಟಾಳ ನಡುಪಟ್ಟಿ ತರುವ ಕೆಲಸವನ್ನು ಆತನಿಗೆ ವಹಿಸಿದ.
ಅಮೆಜಾನರ ಮಹಿಳಾ ರಾಜ್ಯ ಮೈಕೀನಿಯಿಂದ ನೂರಾರು ಮೈಲುಗಳಷ್ಟು ದೂರದಲ್ಲಿತ್ತು. ನಡುವೆ ಒಂದೆರಡು ದೊಡ್ಡ ನದಿಗಳನ್ನೂ ದಾಟಬೇಕಿತ್ತು. ಹೆರಾಕ್ಲೀಸ್ ಭೂಮಾರ್ಗವಾಗಿ ಕೊಂಚ ದೂರ, ಜಲಮಾರ್ಗವಾಗಿ ಕೊಂಚ ದೂರ – ಹೀಗೆ ಪ್ರಯಾಣ ಮಾಡುತ್ತಾ, ನಡುವೆ ಬಂದ ಅಡ್ಡಿ ಆತಂಕಗಳನ್ನು ನಿವಾರಿಸುತ್ತಾ ಮುಂದುವರಿದು ಅಮೇಜಾನರ ರಾಜ್ಯ ತಲುಪಿದ.
ಹೆರಾಕ್ಲೀಸನ ಶೌರ್ಯ ಸಾಹಸಗಳ ಬಗ್ಗೆ ಕೇಳಿದ್ದ ರಾಣಿ ಹಿಪೊಲಿಟಾ ಖುದ್ದು ತಾನೇ ಬಂದು ಅವನನ್ನು ಎದುರುಗೊಂಡಳು. ಅವಳಿಗಾಗಲೀ ಉಳಿದ ಅಮೆಜಾನ್ ಧಿರೆಯರಿಗಾಗಲೀ ಅವನು ಬಂದಿರುವ ಕಾರಣ ತಿಳಿದಿರಲಿಲ್ಲ. ಹಿಪೊಲಿಟಾ ಮೊದಲ ನೋಟದಲ್ಲೇ ಹೆರಾಕ್ಲೀಸನ ಮೇಲೆ ಮೋಹಗೊಂಡಳು. ಅವನಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವ ಸಿದ್ಧತೆ ನಡೆಸಿದಳು. ಅದರ ಸುಳಿವು ಸಿಕ್ಕ ಹೆರಾಕ್ಲೀಸ್, ತಾನೂ ಅವಳೊಂದಿಗೆ ಪ್ರೇಮದಿಂದಲೇ ವ್ಯವಹರಿಸಿದ. ತಮ್ಮಿಬ್ಬರ ಪ್ರೇಮದ ನೆನಪಿಗೆ ಅವಳ ನಡುಪಟ್ಟಿಯನ್ನು ಕೇಳಬಹುದು ಅನ್ನೋದು ಅವನ ಯೋಚನೆ. ಹಿಪೊಲಿಟಾ ಕೂಡಾ ಅದಕ್ಕೆ ತಯಾರಾಗಿಯೇ ಇದ್ದಳು.
ಇನ್ನೇನು ಹಿಪೊಲಿಟಾಳ ನಡುಪಟ್ಟಿ ಪಡೆದು ಹೆರಾಕ್ಲೀಸ್ ಸವಾಲು ಗೆಲ್ಲುವುದರಲ್ಲಿದ್ದ; ಹೀರಾ ದೇವಿ ಕೆರಳಿದಳು. ಇವನು ಈ ಪಣವನ್ನೂ ಗೆದ್ದುಬಿಡುತ್ತಾನಲ್ಲ ಎಂದು ಕೋಪಗೊಂಡಳು. ವೇಷ ಮರೆಸಿಕೊಂಡು ಅಮೆಜಾನರ ನಡುವೆ ಸೇರಿಕೊಂಡು, ಹೆರಾಕ್ಲೀಸ್ ತಮ್ಮ ರಾಣಿಯನ್ನು ಅಪಹರಿಸಲು ಬಂದಿದ್ದಾನೆಂದು ಪುಕಾರು ಹಬ್ಬಿಸಿದಳು.
ಅಮೆಜಾನ್ ಧೀರೆಯರ ನಡುವೆ ಸಂಚಲನ ಸೃಷ್ಟಿಯಾಯಿತು. ತಮ್ಮ ರಾಣಿಯನ್ನು ಅಪಹರಿಸಲು ಬಿಡುವುದೇ ಇಲ್ಲ ಎಂದು ಪ್ರತಿಜ್ಞೆ ಮಾಡಿದರು. ಇದ್ದಕ್ಕಿದ್ದ ಹಾಗೆ ಹೆರಾಕ್ಲೀಸನಿಗೆ ಮತ್ತಿಗೆ ಹಾಕಿ ಕಾದಾಡಲು ನಿಂತರು. ಹೆರಾಕ್ಲೀಸನಿಗೆ ಹೋರಾಡುವುದು ಅನಿವಾರ್ಯವಾಯಿತು. ಅವನು ಶಕ್ತಿವಂತನಷ್ಟೇ ಅಲ್ಲ, ಯುಕ್ತಿವಂತನೂ ಆಗಿದ್ದ. ಅವನ ಶೌರ್ಯ ಸಾಹಸಗಳನ್ನು ಎದುರಿಸಲಾಗದೆ ಒಂದೊಂದಾಗಿಯೇ ಅಮೆಜಾನರ ಹೆಣ ಬೀಳತೊಡಗಿದವು. ಈಗ ರಾಣಿ ಹಿಪೊಲಿಟಾಳಿಗೆ ತನ್ನ ಪಡೆಯ ರಕ್ಷಣೆಗಾಗಿ ಕತ್ತಿ ಹಿಡಿಯುವುದು ಅನಿವಾರ್ಯವಾಯಿತು.
ಹೆರಾಕ್ಲೀಸ್, ಅವಳು ಬೇಕಂತಲೇ ಪ್ರೇಮ ನಟಿಸಿ ತನ್ನನ್ನು ಸಿಲುಕಿಸಿದಳು ಎಂದು ಭಾವಿಸಿದ. ಬೇರೆ ದಾರಿಯಿಲ್ಲದೆ ಅವಳೊಂದಿಗೂ ಯುದ್ಧ ಮಾಡಿದ. ಪ್ರೇಮಿಗಳಿಬ್ಬರೂ ಎದುರುಬದುರು ಕತ್ತಿ ಹಿಡಿದು ಹೋರಾಡಿದರು. ಅವರು ಬೀಸಿದ ಪ್ರತಿಯೊಂದು ಹೊಡೆತವೂ ಪರಸ್ಪರರ ಹೃದಯವನ್ನು ಸೀಳುತ್ತಿದ್ದಂತೆ ಭಾಸವಾಗುತ್ತಿತ್ತು. ಕೊನೆಗೂ ಹಿಪೊಲಿಟಾ ಸೋತಳು. ಹೆರಾಕ್ಲೀಸನ ಕತ್ತಿಯ ಹೊಡೆತಕ್ಕೆ ಎದೆಕೊಟ್ಟು ಉರುಳಿಬಿದ್ದಳು. ಕೊನೆಯುಸಿರು ಬಿಡುವ ಮೊದಲು ಹೆರಾಕ್ಲೀಸನಲ್ಲಿ ತನ್ನ ಪ್ರೇಮವನ್ನು ತೋರಿಕೊಂಡಳು. ಹೆರಾಕ್ಲೀಸನಿಗೆ ಈ ಎಲ್ಲಕ್ಕೂ ಸುಳ್ಳುಸುದ್ದಿಯಿಂದ ಹೊಮ್ಮಿದ ಅಪಾರ್ಥವೇ ಕಾರಣ ಎಂದು ಮನದಟ್ಟಾಯಿತು. ತನ್ನ ಕೈಯಾರೆ ಪ್ರೇಮಿಯನ್ನು ಕೊಂದಿದ್ದು ನೋವಾದರೂ ದುಃಖಿಸುತ್ತ ಕೂರಲು ಸಮಯವಿರಲಿಲ್ಲ. ಹಿಪೊಲಿಟಾಳ ಕಳೇವರವನ್ನು ಚುಂಬಿಸಿ, ಅವಳ ನಡುಪಟ್ಟಿ ತೆಗೆದುಕೊಂಡು ಹೊರಟ.
ಹೀರಾ ದೇವಿಯ ಸಂಚು ಸಂಬಂಧವೇ ಇಲ್ಲದ ಜೀವಗಳ ಬಲಿ ಪಡೆದು ಮತ್ತೊಮ್ಮೆ ವಿಫಲವಾಯಿತು. ಹೆರಾಕ್ಲೀಸ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದ.