ಗ್ಲಾಕಸನನ್ನು ಕೊಂದು ತಿಂದ ನರಭಕ್ಷಕ ಕುದುರೆಗಳು : ಗ್ರೀಕ್ ಪುರಾಣ ಕಥೆಗಳು  ~ 9

horse

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಗ್ಲಾಕಸ್, ಕಾರಿಂಥದ ದೊರೆ ಸಿಸಿಫಸ್ ನ ಮಗ. ತಂದೆಯ ನಂತರ ಪಟ್ಟಕ್ಕೇರಿದ ಗ್ಲಾಕಸ್ ಒಬ್ಬ ಕ್ರೀಡಾ ವ್ಯಸನಿ ಕುದುರೆಗಳನ್ನು ರಥಕ್ಕೆ ಹೂಡಿ ಕಣಕ್ಕೆ ಇಳಿದನೆಂದರೆ ಸ್ಪರ್ಧೆಯಲ್ಲಿ ಅವನನ್ನು ಮೀರಿಸಲು ಯಾರಿಂದಲೂ ಆಗುತ್ತಿರಲಿಲ್ಲ.

ಗ್ಲಾಕಸ್ ಗೆ ತನ್ನ ಕುದುರೆಗಳೆಂದರೆ ವಿಪರೀತ ಮೋಹ. ಅವನ ಲಾಯದಲ್ಲಿ ನೂರಾರು ಉನ್ನತ ತಳಿಯ ಕುದುರೆಗಳಿದ್ದವು. ಅವನು ಅವುಗಳಲ್ಲಿ ಕೆಲವನ್ನು ಆಯ್ದು ನರ ಮಾಂಸ ತಿನ್ನಿಸಿ ಬೆಳೆಸಿದ್ದ. ಆ ನರಭಕ್ಷಕ ಕುದುರೆಗಳು ಉನ್ಮತ್ತವೂ ಕ್ರೂರಿಯೂ ಆಗಿದ್ದವು. ಗ್ಲಾಕಸ್ ಆ ಕುದುರೆಗಳನ್ನು ರಥಕ್ಕೆ ಹೂಡಿಯೇ ಸ್ಪರ್ಧೆಗೆ ಇಳಿಯುತ್ತಿದ್ದುದು. ಅವನು ತನ್ನ ಕುದುರೆಗಳಿಗೆ ತಿನ್ನಿಸಲಿಕ್ಕಾಗಿಯೇ ಪ್ರತಿದಿನ ಹತ್ತಾರು ಮನುಷ್ಯರನ್ನು ಕೊಲ್ಲಿಸುತ್ತಿದ್ದ. ಅಥವಾ ಅಪರಾಧಿಗಳನ್ನು ಲಾಯದಲ್ಲಿ ಕೂಡಿ ಹಾಕಿ, ಕುದುರೆಗಳೇ ಅವರನ್ನು ಕೊಂದು ತಿನ್ನುವಂತೆ ಶಿಕ್ಷೆ ವಿಧಿಸುತ್ತಿದ್ದ.
ಅವನ ಈ ವರ್ತನೆ ದೇವತೆಗಳನ್ನು ಕೆರಳಿಸಿತ್ತು. ಗ್ಲಾಕಸನಿಗೆ ಸರಿಯಾದ ಶಿಕ್ಷೆ ವಿಧಿಸಬೇಕೆಂದು ದೇವತೆಗಳು ಕಾಯುತ್ತಿರುವಾಗಲೇ ಅವನು ಕಾಮದೇವತೆ ಅಫ್ರೋದಿತೆಯ ಕೋಪಕ್ಕೆ ತುತ್ತಾದ. ಗ್ಲಾಕಸ್ ತನ್ನ ಕುದುರೆಗಳಿಗೆ ಸಂಭೋಗ ನಡೆಸಲು ಅವಕಾಶ ಕೊಡುತ್ತಿರಲಿಲ್ಲ. ಗಂಡು – ಹೆಣ್ಣು ಕುದುರೆಗಳನ್ನು ಅಕ್ಕಪಕ್ಕದಲ್ಲಿಯೂ ನಿಲ್ಲಲು ಕೊಡುತ್ತಿರಲಿಲ್ಲ. ಸಂಭೋಗದಿಂದ ಕುದುರೆಗಳ ಓಟದ ವೇಗ ತಗ್ಗುತ್ತದೆ ಎಂದು ಅವನು ಹೀಗೆ ಮಾಡುತ್ತಿದ್ದ. ಇದು ಸಹಜವಾಗಿಯೇ ಅಫ್ರೋದಿತೆಗೆ ಕೋಪ ತರಿಸಿತ್ತು. ಅವಳು ಅವನಿಗೆ ಬಲವಾದ ಶಾಪ ಕೊಟ್ಟಳು.

ಒಮ್ಮೆ ಗ್ಲಾಕಸ್ ಕುದುರೆ ರಥ ಕ್ರೀಡೆಯಲ್ಲಿ ಭಾಗವಹಿಸಲು ಉದ್ವೇಗದಿಂದ ಹೊರಟ. ಸ್ಪರ್ಧೆಯ ಸ್ಥಳ ಅವನ ರಾಜಧಾನಿಯಿಂದ ದೂರದಲ್ಲಿತ್ತು. ದಾರಿಯಲ್ಲಿ ಸಿಕ್ಕ ಯಾರನ್ನಾದರೂ ಕೊಂದು ಕುದುರುಗಳಿಗೆ ತಿನ್ನಿಸಿದರಾಯ್ತು ಅಂದುಕೊಂಡು ಬೆಳಗಿನ ಉಣಿಸು ನೀಡದೆ ರಥ ಹೂಡಿದ. ಕುದುರೆಗಳ ದೌಡು ಹೊರಟಿತು. ಕ್ರೀಡೆಯ ಉನ್ಮಾದದಲ್ಲಿದ್ದ ಗ್ಲಾಕಸನಿಗೆ ಕುದುರೆಗಳಿಗೆ ಏನಾದರೂ ತಿನ್ನಿಸಬೇಕೆಂದು ನೆನಪೇ ಆಗಲಿಲ್ಲ.

ಸಂಜೆಯ ವೇಳೆಗೆ ಕ್ರೀಡಾಂಗಣ ತಲುಪಿದ ಗ್ಲಾಕಸ್. ಆ ಹೊತ್ತಿಗೆ ಸ್ಪರ್ಧೆ ಶುರುವಾಗಿತ್ತು. ಕುದುರೆಗಳಿಗೆ ಹಸಿವಾಗಿತ್ತು. ಅವು ಗ್ಲಾಕಸನ ಅಂಕೆಯನ್ನೂ ಮೀರಿ ಓಡತೊಡಗಿದವು. ಗ್ಲಾಕಸ್ ಸಂಭಾಳಿಸಿಕೊಳ್ಳಲಾಗದೆ ಆಯತಪ್ಪಿ ಲಗಾಮಿನ ಮೇಲೆ ಬಿದ್ದ. ಕುದುರೆಗಳು ಅವನನ್ನು ಎಳೆದುಕೊಂಡೇ ಕ್ರೀಡಾಂಗಣವನ್ನು ಸುತ್ತಿದವು. ಕೊನೆಗೆ ಅವನನ್ನೇ ಗೊರಸಿನ ಅಡಿ ಹಾಕಿಕೊಂಡು ತುಳಿದು, ಕೊಂದು ತಿಂದವು.

ಅಫ್ರೋದಿತೆ ಗ್ಲಾಕಸನನ್ನು ಅವನ ಕುದುರೆಗಳೇ ಕೊಂದು ತಿನ್ನಲಿ ಎಂದು ಶಪಿಸಿದ್ದಳು. ಅದರಂತೆಯೇ ಗ್ಲಾಕಸನ ಅಂತ್ಯವಾಯಿತು.

Leave a Reply