ನೊಬುಶಿ ಒಬ್ಬ ಸಮುರಾಯ್. ಅವನು ಒಮ್ಮೆ ಝೆನ್ ಗುರು ಹಕುಇನ್ ಬಳಿ ಬಂದ. ಅವನಿಗೆ ಸ್ವರ್ಗ, ನರಕಗಳ ಬಗ್ಗೆ ಕೇಳುವುದಿತ್ತು.
“ಮಾಸ್ಟರ್, ಸ್ವರ್ಗ ಎಂದರೇನು? ನರಕ ಎಂದರೇನು?” ಅವನು ಕೇಳಿದ.
“ನೀನು ಯಾರು ಅನ್ನೋದನ್ನು ಮೊದಲು ಹೇಳು” ವಿಚಾರಿಸಿದ ಹಕುಇನ್.
“ನಾನೊಬ್ಬ ಸಮುರಾಯ್” ನೊಬುಶಿ ಉತ್ತರಿಸಿದ.
“ಓಹೋ! ನೀನೊಬ್ಬ ಸಮುರಾಯ್!! ಅಂದರೆ ನೀನು ಯೋಧನೋ?” ಎಂದು ಕೇಳಿದ ಹಕುಇನ್, “ಯಾವ ಮೂರ್ಖ ದೊರೆ ನಿನ್ನನ್ನು ತನ್ನ ರಕ್ಷಣೆಗೆ ಇಟ್ಟುಕೊಳ್ಳುವನು? ನಿನ್ನನ್ನು ನೋಡಿದರೆ ಕೆಲಸಕ್ಕೆ ಬಾರದ ತಿರುಕನಂತೆ ಅನ್ನಿಸುತ್ತದೆ” ಅಂದ.
ನೊಬುಶಿಗೆ ಸಿಟ್ಟೇ ಬಂದಿತು. ತನ್ನ ಖಡ್ಗವನ್ನು ಒರೆಯಿಂದ ಹೊರಗೆಳೆಯಲು ಮುಂದಾದ.
ಹಕುಇನ್ ಅವನನ್ನೇ ನೋಡುತ್ತಾ,“ ಅರೆ! ನಿನ್ನ ಬಳಿ ಖಡ್ಗವೂ ಇದೆ!! ಆದರೆ ಅದೆಷ್ಟು ಮೊಂಡಾಗಿದೆ ಎಂದರೆ, ಅದರಿಂದ ನನ್ನ ತಲೆಯನ್ನು ಕತ್ತರಿಸಲಾಗದು” ಎಂದು ನಕ್ಕ.
ಈಗಂತೂ ನೊಬುಶಿಯ ಸಿಟ್ಟು ಮಿತಿಮೀರಿ ಖಡ್ಗವನ್ನು ಹೊರಗೆ ಎಳೆದೇಬಿಟ್ಟ.
ಹಕುಇನ್ ಚಪ್ಪಾಳೆ ತಟ್ಟಿ, “ಯಾರಲ್ಲಿ! ನರಕದ ಬಾಗಿಲನ್ನು ತೆರೆಯಿರಿ” ಎಂದು ಉದ್ಗರಿಸಿದ.
ಇದನ್ನು ಕೇಳಿದ ಸಮುರಾಯ್ ನೊಬುಶಿ ಈ ಗುರುವಿನಲ್ಲಿ ಏನೋ ವಿಶೇಷವಿದೆ ಎಂದುಕೊಂಡು ಖಡ್ಗವನ್ನು ಒರೆಯೊಳಕ್ಕೆ ತಳ್ಳಿದ.
ಹಕುಇನ್ ಮತ್ತೆ ಚಪ್ಪಾಳೆ ತಟ್ಟಿ, “ಯಾರಲ್ಲಿ, ಸ್ವರ್ಗದ ಬಾಗಿಲನ್ನು ತೆರೆಯಿರಿ” ಎಂದು ಉದ್ಗರಿಸಿದ.
ಈಗ ಸಮುರಾಯ್ ನೊಬುಶಿಗೆ ಈಗ ಸ್ವರ್ಗ ಎಂದರೇನು ಮತ್ತು ನರಕ ಎಂದರೇನು ಎಂದು ಸ್ಪಷ್ಟವಾಗಿ ಅರ್ಥವಾಯಿತು. ಹಕುಇನ್’ಗೆ ನಮಸ್ಕರಿಸಿ ಹೊರಟುಹೋದ.