ಕಾಯಕಕ್ಕೆ ನಮ್ಮ ಶರಣ ಪರಂಪರೆ ಕೊಟ್ಟ ಮಹತ್ವ ಅದ್ವಿತೀಯವಾದದ್ದು. ಕಾಯಕವೇ ಕೈಲಾಸ ಎಂಬ ಯುಗಘೋಷಣೆಯನ್ನು ನೀಡಿದ ವಚನದ ಪೂರ್ಣ ಪಾಠ ಹೀಗಿದೆ…
ಕಾಯಕದಲ್ಲಿ ನಿರುತನಾದೊಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು
~ ಇದು ಆಯ್ದಕ್ಕಿಮಾರಯ್ಯನವರ ವಚನ.
ಶರಣ ಪರಂಪರೆಯು ಕಾಯಕಕ್ಕೆ ಕೊಟ್ಟ ಮಹತ್ವ ಅದ್ಭುತವಾದದ್ದು. ಅವರು ಪರಿಚಯಿಸಿದ ‘ಕಾಯಕ – ದಾಸೋಹ’ ತತ್ತ್ವ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು.
ಮಾರಯ್ಯ, ದಾರಿಯಲ್ಲಿ ಬಿದ್ದ ಅಕ್ಕಿಯನ್ನು ಹೆಕ್ಕುವ ಕಾಯಕ ಮಾಡುತ್ತಿದ್ದರು. ಆದ್ದರಿಂದಲೇ ಅವರಿಗೆ ಅವರ ಕಾಯಕದ ಗುರುತೂ ಸೇರಿ ‘ಆಯ್ದಕ್ಕಿ ಮಾರಯ್ಯ’ ಎಂಬ ಹೆಸರಾಗಿತ್ತು.
ಈ ಮೇಲಿನ ವಚನದಲ್ಲಿ ಆಯ್ದಕ್ಕಿ ಮಾರಯ್ಯ ಕಾಯಕದಲ್ಲಿ ನಾವು ಯಾವ ಬಗೆಯ ತಲ್ಲೀನತೆಯನ್ನು ಇರಿಸಿಕೊಂಡಿರಬೇಕು ಅನ್ನುವುದನ್ನು ಸೂಚಿಸಿದ್ದಾರೆ. “ಕಾಯಕದಲ್ಲಿ ಮಗ್ನರಾದಾಗ ಗುರುದರ್ಶನವನ್ನಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು, ಜಂಗಮನು ಬಂದು ಮುಂದೆ ನಿಂತರೂ ಆತನ ಹಂಗಿಗೆ ಒಳಗಾಗದೆ ಕಾಯಕವನ್ನು ಮುಂದುವರೆಸಬೇಕು. ಏಕೆಂದರೆ ಕಾಯಕವೇ ಕೈಲಾಸ. ಆದ ಕಾರಣ ಮೇಲೆ ಹೇಳಿದ ಗುರು ಲಿಂಗ ಜಂಗಮ ಎಲ್ಲರೂ ಆ ಕಾಯಕದ ಪರಿಧಿಯ ಒಳಗೇ ಬರುತ್ತಾರೆ” ಎನ್ನುವುದು ಈ ವಚನದ ಸಾರ.