ಅಧ್ಯಾತ್ಮ ಡೈರಿ ~ ಕಳೆದುಕೊಳ್ಳುವುದರ ಸುಖ ದುಃಖ

ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ  ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು ಕಳೆದುಹೋಗುತ್ತಿರುವಾಗ, ವಸ್ತುಗಳ ಬಗ್ಗೆ ಎಷ್ಟು ಕಾಲ ಶೋಕಿಸಬಲ್ಲೆವು? ~ ಅಲಾವಿಕಾ

ಳಕೊಳ್ಳುವ ನೋವು, ಕಳಕೊಂಡವರಿಗಷ್ಟೆ ಗೊತ್ತು! ನಿಜ… ಆದರೆ ಕಳಕೊಳ್ಳುವುದು ಎಂದರೆ ಹಗುರಾಗುವುದು ಕೂಡಾ!ಏನನ್ನಾದರೂ ಕಳಕೊಂಡಾಗ ನಾವು ಅದನ್ನು ಹುಡುಕಲು ಯತ್ನಿಸುತ್ತೇವೆ. ಅದು ನಮ್ಮ ಜವಾಬ್ದಾರಿಯೂ ಹೌದು. ಆ ವಸ್ತು ಸಿಗುವುದಿಲ್ಲ  ಎಂದರಿವಾದಾಗಲೂ ಹುಡುಕಾಟ  ಮುಂದುವರೆಸುತ್ತೇವೆ. ಉದಾಹರಣೆಗೆ, ನಾವು ಬಹಳ ಇಷ್ಟಪಟ್ಟು ಕೊಂಡುಕೊಂಡ ಐ ಪ್ಯಾಡ್ ಕಳೆದುಹೋದಾಗ ಅದರ ಅಂದವನ್ನು, ಉಪಯುಕ್ತತೆಯನ್ನು ನೆನೆನೆನೆದು ಸಂಕಟಪಡುತ್ತೇವೆ. ಅಥವಾ ಇನ್ಯಾವುದೇ ವಸ್ತುವಿಗೂ ಇದು ಅನ್ವಯ. ನಾವೇ ಹಣ ಕೊಟ್ಟು ಕೊಂಡ ವಸ್ತುವಾಗಿದ್ದರೆ, ಕಳೆದುಹೋದ ವಸ್ತುವಿನೊಂದಿಗೆ ನಷ್ಟವಾದ ನಮ್ಮ ಶ್ರಮ, ಅದೇ ಹಣವನ್ನ ಬೇರೆಲ್ಲಾದರೂ ತೊಡಗಿಸಬಹುದಿತ್ತು ಎನ್ನುವ ಲೆಕ್ಕಾಚಾರಗಳೆಲ್ಲವೂ ತಲೆಯೊಳಗೆ ಗಿರಕಿ ಹೊಡೆದು ಕಂಗಾಲು ಮಾಡುತ್ತವೆ. ಯಾರಾದರೂ ಉಡುಗೊರೆ ಕೊಟ್ಟದ್ದಾಗಿದ್ದರೆ, ಭಾವನಾತ್ಮಕವಾಗಿಯೂ ನೋವಾಗುವುದುಂಟು.

ಇಲ್ಲೊಂದು ವಿಷಯವನ್ನು ನಾವು ಗಮನಿಸಬೇಕು. ಕಳಕೊಂಡ ವಸ್ತುವಿಗಾಗಿ ನಾವು ಪಡುವ ದುಃಖ ಅದರ ಮೌಲ್ಯ, ಉಪಯುಕ್ತತೆ, ಕೊಳ್ಳಲು ಪಟ್ಟ ಪರಿಶ್ರಮ ಹಾಗೂ ಉಡುಗೊರೆ ಕೊಟ್ಟವರು ಎಷ್ಟು ಆಪ್ತರು ಎನ್ನುವ ಅಂಶಗಳನ್ನು ಅವಲಂಬಿಸಿರುತ್ತದೆ. ಮತ್ತು ಈ ಅಳತೆಗೋಲುಗಳು ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತ ಸಾಗುತ್ತವೆ.  ಉದಾಹರಣೆಗೆ, ಕೊಂಡ ಹೊಸತರಲ್ಲಿ ಅಥವಾ ಬಹಳವಾಗಿ ಉಪಯೋಗಿಸುವ ಅವಧಿಯಲ್ಲಿ ನಮ್ಮ ಕ್ಯಾಮೆರಾ ನಮಗೆ ಅತ್ಯಮೂಲ್ಯ ಎನ್ನಿಸುವುದು. ಕಾಲಕ್ರಮೇಣ ಫೋಟೋ ತೆಗೆಯುವ ಆಸಕ್ತಿ ಕುಂದಿ, ಅದೇ ಕ್ಯಾಮೆರಾ ಮೂಲೆಯಲ್ಲಿ ದೂಳು ತಿನ್ನ್ತುತ್ತ ಕೂರಬಹುದು. ಅದನ್ನ ಯಾರಾದರೂ ಕಳವು ಮಾಡಿದರೆ ಗಮನಕ್ಕೂ ಬರದೆ ಹೋಗಬಹುದು! ಬಂಗಾರವೂ ಅಷ್ಟೇ. ಅದರ ಮೌಲ್ಯಾಪಮೌಲ್ಯಗಳನ್ನು ಮಾರುಕಟ್ಟೆಯೇ ನಿರ್ಧರಿಸುವುದು. ಅದಕ್ಕೆ ತಕ್ಕಂತೆ ಕಳಕೊಳ್ಳುವ ದುಃಖದಲ್ಲೂ ಬದಲಾವಣೆಯಾಗುತ್ತ ಸಾಗುವುದು.

“ಕಳೆದು ಹೋಯ್ತಾ? ಹೋಗ್ಲಿ ಬಿಡು. ಅದು ನನ್ನದಲ್ಲ ಅಂದ್ಕೊಂಡರೆ ಆಯ್ತು” – ಇದು ಮನೆಯಲ್ಲಿ ಬಹುತೇಕ ಹಿರಿಯರು ಹೇಳುವ ಸಮಾಧಾನ. ಅವರ ಈ ಚಿಂತನೆ ಸರಿಯಾಗಿಯೇ ಇದೆ. ವಾಸ್ತವದಲ್ಲಿ ಈ ಅಂಶವೇ ನಷ್ಟವನ್ನು ಭರಿಸುವ ಶಕ್ತಿ ತುಂಬುವುದು. ಕಳಕೊಂಡ ವಸ್ತುವಿನ ವ್ಯಾಮೋಹದಿಂದ ಈಚೆ ತರುವುದು. `ಅದು ನನ್ನದಾಗಿರಲಿಲ್ಲ…..’ –  ಈ ಯೋಚನೆ ನಮ್ಮನ್ನು ಸಾಕ್ಷೀಭಾವ ಮಾತ್ರದಿಂದ ನೋಡಲು ಸಹಾಯ ಮಾಡುವುದು. ಯಾವುದೇ ವಸ್ತುವನ್ನು `ನನ್ನದಲ್ಲ’  ಅಂದುಕೊಂಡ ಕ್ಷಣದಲ್ಲಿಯೇ ಅದಕ್ಕೆ ಸಂಬಂಧಿಸಿದ ಯಾವುದೂ ನಮ್ಮನ್ನು ಬಾಧಿಸಲಾರದು. ಆದರೆ ಹಾಗೆ ಅಂದುಕೊಳ್ಳುವುದೇ ಭಾರೀ ಕಷ್ಟದ ಸಂಗತಿ.

ಇನ್ನು ಸಂಬಂಧಗಳ ವಿಷಯದಲ್ಲಿ ಕಳೆದುಕೊಳ್ಳುವಿಕೆ ನೀಡುವ ಯಾತನೆ ಅನುಭವಿಸಿದವರಿಗೇ ಗೊತ್ತು! ಸಂಗಾತಿಯ ಪ್ರೇಮ ಕಳೆದುಹೋದಾಗ, ಗೆಳೆಯರ ಗೆಳೆತನ ಕಳೆದುಕೊಂಡಾಗ, ಸಹಪಾಠಿಗಳ ಪತ್ತೆಯೇ ಕಳೆದುಹೋದಾಗ… ಆಗೆಲ್ಲ ಮನಸ್ಸು ಭಾರವಾಗುತ್ತದೆ. ಎಂಥ ವಿಪರ್ಯಾಸ ನೋಡಿ.  ವಸ್ತುಗಳನ್ನು ಕಳೆದುಕೊಂಡಾಗೆಲ್ಲ ಕೈಚೀಲ ಹಗುರವಾಗುತ್ತದೆ. ಆದರೆ ಕಳೆದುಕೊಂಡಷ್ಟೂ ಮನಸ್ಸು ಭಾರವಾಗುವುದು ಸಂಬಂಧಗಳ ವಿಷಯದಲ್ಲಿ ಮಾತ್ರ, 

ಹಾಗಂತ ದುಃಖಿಸುತ್ತ ಕುಳಿತರೆ ನಾವು ಅಲ್ಲಿಯೇ ಉಳಿಯಬೇಕಾಗುತ್ತದೆ. ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ದೇಹವನ್ನು ರಕ್ಷಿಸುವ ಚರ್ಮವೂ ಕಾಲಕಾಲಕ್ಕೆ ಸತ್ತ ಜೀವಕೋಶಗಳನ್ನು ಉದುರಿಸಿ ಹೊಸತಾಗುತ್ತದೆ. ನಮ್ಮ ದೇಹದ ಭಾಗಗಳೇ ಆಗಿರುವ ಕೂದಲು, ಉಗುರುಗಳು ಕಳಚಿ ಬೀಳುತ್ತವೆ. ನಾವು ನಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತೇವೆ. ಯೌವನ ನಮ್ಮ ಕಣ್ಣೆದುರೇ ಟಾಟಾ ಮಾಡಿ ಓಡಿ ಹೋಗುತ್ತದೆ. ನಡು ವಯಸ್ಸನ್ನು ಸಂಸಾರ ಕದ್ದರೆ, ಇಳಿ ವಯಸ್ಸು ಚಿಂತೆಯಲ್ಲಿ ಕಳೆಯುತ್ತದೆ. ಹೀಗೆ ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು ಕಳೆದುಹೋಗುತ್ತಿರುವಾಗ, ವಸ್ತುಗಳ ಬಗ್ಗೆ ಎಷ್ಟು ಕಾಲ ಶೋಕಿಸಬಲ್ಲೆವು?

ಆದ್ದರಿಂದಲೇ, ಏನಾದರೂ ಕಳೆದುಹೋದಾಗ ಆ ಕ್ಷಣದ ಸಹಜ ದುಃಖವನ್ನು ಅನುಭವಿಸಿ ಸುಮ್ಮನಾಗಬೇಕು. ಅದನ್ನು ಮುಂದಿನ ಕ್ಷಣಕ್ಕೆ ಹೊತ್ತು ನಡೆಯಬಾರದು. ಕಳೆದದ್ದೆಲ್ಲವೂ ನಮ್ಮನ್ನು ಲೌಕಿಕದ ದಟ್ಟಣೆಯಿಂದ ಮುಕ್ತಗೊಳಿಸುತ್ತಾ ಹಗುರಗೊಳಿಸುತ್ತವೆ ಎಂದು ಯೋಚಿಸಲು ಸಾಧ್ಯವಾಗುತ್ತದಾ ನೋಡಿ. ಆಗಿಯೇಬಿಟ್ಟರೆ, ನಿಮಗಿಂತ ಸುಖಿಗಳು ಇರಬಲ್ಲರೇ ಈ ಜಗತ್ತಿನಲ್ಲಿ!?

 

Leave a Reply