ಝೆನ್ ಶೈಲಿಯಲ್ಲಿ ಬದುಕುವುದೆಂದರೆ…

ಟೆನ್ನೋ ಎನ್ನುವವನೊಬ್ಬ ಝೆನ್ ಕಲಿಯಲು ಗುರು ನ್ಯಾನ್ ಇನ್ ಬಳಿ ಬಂದ. ಝೆನ್ ಕಲಿಯುವವರು ಗುರುವಿನೊಟ್ಟಿಗೆ ಎರಡು ವರ್ಷ ಕಳೆಯಬೇಕಾಗಿತ್ತು.

ಟೆನ್ನೋ ಹಾಗೆ ನ್ಯಾನ್ ಇನ್ ಜೊತೆಗೇ ಇದ್ದು ಝೆನ್ ಕಲಿತ. ತಾನಿನ್ನು ಬೋಧನೆ ಶುರು ಮಾಡಬಹುದು ಅನ್ನಿಸಿತು ಅವನಿಗೆ. ಆಶ್ರಮವನ್ನು ಬಿಟ್ಟು ಹೊರಡಲು ಸಿದ್ಧತೆ ಮಾಡಿಕೊಂಡ.

ನ್ಯಾನ್ ಇನ್ ಆಶ್ರಮದಿಂದ ಸ್ವಲ್ಪ ದೂರವಿದ್ದ ಬೋಧನಾ ಕೊಠಡಿಯಲ್ಲಿ ಕುಳಿತಿದ್ದ. ಅವನನ್ನು ಕಾಣಲು ಟೆನ್ನೋ ಕಾಲಿಗೆ ಮರದ ಚಡಾವುಗಳನ್ನು ಧರಿಸಿ, ಚತ್ರಿಯನ್ನು ಹಿಡಿದು ಹೊರಟ. ಒಳಗೆ ಹೋಗುವ ಮೊದಲು ಚಡಾವುಗಳನ್ನು ಮುಖದ್ವಾರದ ಬಳಿ ಬಿಚ್ಚಿಟ್ಟು, ಚತ್ರಿಯನ್ನು ಅದರ ಪಕ್ಕ ಇಟ್ಟ.

ಶಿಷ್ಯನನ್ನು ವಿಚಾರಿಸಿದ ನ್ಯಾನ್‌-ಇನ್, “ನೀನು ನಿನ್ನ ಮರದ ಚಡಾವುಗಳನ್ನು ಮುಖದ್ವಾರದಲ್ಲಿ ಬಿಟ್ಟಿರುವೆ ಅಂದುಕೊಳ್ತೇನೆ. ಆದರೆ ನಿನ್ನ ಛತ್ರಿಯು ಚಡಾವುಗಳ ಎಡ ಬಾಗದಲ್ಲಿದೆಯೋ ಬಲ ಭಾಗದಲ್ಲಿದೆಯೋ ಎಂಬುದನ್ನು ನಿನ್ನಿಂದ ತಿಳಿಯಲು ಬಯಸುತ್ತೇನೆ” ಅಂದ.

ಈ ಮಾತನ್ನು ಕೇಳಿ ಟೆನ್ನೋಗೆ ಗಲಿಬಿಲಿಯಾಯ್ತು. ಯಾವುದೇ ಉತ್ತರ ಕೊಡಲಾಗದೆ ಚಡಪಡಿಸಿದ. ಪ್ರತಿ ಕ್ಷಣವನ್ನೂ ಝೆನ್ ಶೈಲಿಯಲ್ಲಿ ಬದುಕಲು ತನ್ನಿಂದ ಇನ್ನೂ ಸಾಧ್ಯವಾಗಿಲ್ಲ ಎಂಬ ಅರಿವು ಅವನಿಗೆ ಉಂಟಾಯ್ತು.
ಬೋಧಕನಾಗುವ ಬಯಕೆ ಅಲ್ಲಿಯೇ ಕೈಬಿಟ್ಟು, ನ್ಯಾನ್ ಇನ್ ಬಳಿ ಇನ್ನೂ ಆರು ವರ್ಷಗಳ ಕಾಲ ಅಧ್ಯಯನ ಮುಂದುವರೆಸಿದ.

Leave a Reply