ಸುಖ ದುಃಖಗಳು ನಮ್ಮೊಳಗೇ ಇವೆ

ಮ್ಮೆ ಒಬ್ಬ ಸೂಫಿ ಸಂತ ರಾಜನಿಗೆ , “ನಾವು ಸುಖ ದುಃಖಗಳನ್ನು ಬೇರೆಯವರಲ್ಲಿ ಹುಡುಕುತ್ತೇವೆ. ವಾಸ್ತವದಲ್ಲಿ ಅವೆಲ್ಲವೂ ನಮ್ಮೊಳಗೇ ಇದೆ” ಎಂದು ಬೋಧಿಸುತ್ತಿದ್ದ.

ರಾಜ ಅದನ್ನು ಒಪ್ಪಲಿಲ್ಲ. ಸಂತ ಅದನ್ನು ಸಾಬೀತುಪಡಿಸಲು ಮುಂದಾದ. “ನಿನ್ನ ರಾಜ್ಯದ ಆರೋಗ್ಯವಂತ ಯುವ ಗೃಹಸ್ಥನನ್ನು ಕರೆಸಿ, ಆರು ತಿಂಗಳು ಅವನನ್ನು ಒಂಟಿಯಾಗಿಡು, ಅನಂತರ ಮಾತಾಡೋಣ” ಅಂದ. ರಾಜ ಹಾಗೆಯೇ ಮಾಡಿದ.

ನಾಲ್ಕು ದಿನ ತಿಂದುಂಡು ಸುಖವಾಗಿದ್ದ ಯುವ ಗೃಹಸ್ಥ, ಐದನೇ ದಿನಕ್ಕೆ ಗೋಳಿಡತೊಡಗಿದ. ಅವನ ಒಳಗಿನದೇ ಚಿಂತೆಗಳು ಅವನನ್ನು ಮುತ್ತಿ ತಿನ್ನತೊಡಗಿದ್ದವು. ನನ್ನ ಹೆಂಡತಿ, ನನ್ನ ಮಗು ಎಂದೆಲ್ಲ ದುಃಖಿಸಿದ. ಅವರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗಿದೆ, ಅವರು ಸುಖವಾಗಿದ್ದಾರೆ ಎಂದರೂ ಅವನಿಗೆ ಸಮಾಧಾನವಿಲ್ಲ. ಕೊನೆಗೂ ಯುವ ಗೃಹಸ್ಥ ಕಾಡಿಬೇಡಿ ರಾಜನ ಕೃಪೆ ಗಿಟ್ಟಿಸಿ ಹೊರಗೆ ಬಂದ.

ರಾಜನಿಗೆ ಸಂತನ ಮಾತು ಅರ್ಧದಷ್ಟು ಒಪ್ಪಿಗೆಯಾಯ್ತು. ಈಗ ಸಂತ, ಒಬ್ಬ ಸಾಧಕನನ್ನು ಕರೆಸಿ ಆರು ತಿಂಗಳು ಒಂಟಿಯಾಗಿ ಇರಿಸುವಂತೆ ಸೂಚಿಸಿದ. ಅದರಂತೆ ರಾಜ ಒಬ್ಬ ಸಾಧಕನನ್ನು ಕರೆಸಿದ. ಆ ಸಾಧಕ ಆರು ತಿಂಗಳಲ್ಲ, ವರ್ಷವಾಗುತ್ತಾ ಬಂದರೂ ಅಲ್ಲಿಂದ ಹೊರಡುವ ಬೇಡಿಕೆಯಲ್ಲೇ ಮುಂದಿಡಲಿಲ್ಲ! ತನ್ನ ಪಾಡಿಗೆ ತನ್ನ ಓದು, ಬರಹ, ಸಾಧನೆಗಳನ್ನು ಮಾಡಿಕೊಂಡು ಹಾಯಾಗಿದ್ದುಬಿಟ್ಟಿದ್ದ! ಏಕೆಂದರೆ ಅವನು ತನ್ನೊಳಗಿನ ಸುಖವನ್ನು, ಭಾವನೆಗಳನ್ನು ಕಂಡುಕೊಂಡಿದ್ದ. ಅವನು ಯಾರ ಮೇಲೂ ಅವಲಂಬಿತನಾಗಿರಲಿಲ್ಲ.

ರಾಜನಿಗೆ ಈಗ ಸಂತನ ಮಾತು ಸಂಪೂರ್ಣ ಒಪ್ಪಿತವಾಯಿತು.

Leave a Reply