ಅಡ್ಡಿಗಳು ವರದಾನವೂ ಆಗಿರಬಹುದು! : ಅರಳಿಮರ POSTER

3

ನನ್ನಾದರೂ ಮಾಡಲೇಬೇಕು ಅನ್ನುವ ಛಲ ಉಳ್ಳವರು, ನಿರ್ದಿಷ್ಟ ಗುರಿ ಇಟ್ಟುಕೊಂಡು ನಡೆಯುವವರು ಯಾವತ್ತೂ ಅಡ್ಡಿ ಆತಂಕಗಳನ್ನು ದೂರುತ್ತ ಕೂರುವುದಿಲ್ಲ. ತಮಗೆ ಎದುರಾಗುವ ಪ್ರತಿಯೊಂದನ್ನೂ ತಮ್ಮ ಸಾಧನೆಗೆ ಪೂರಕವಾಗಿಯೇ ಬಳಸಿಕೊಳ್ಳುತ್ತಾ ಮುಂದೆ ಸಾಗುವ ಧೈರ್ಯ ತೋರುತ್ತಾರೆ. 

ನಿಮ್ಮ ಹಾದಿಯಲ್ಲಿ ಕಲ್ಲುಗಳು ಎದುರಾದರೆ ತಲೆ ಮೇಲೆ ಕೈಹೊತ್ತು ಕೂರಬೇಕಿಲ್ಲ. ಅವನ್ನೇ ಚಪ್ಪಡಿಯಾಗಿ ಪೇರಿಸುತ್ತಾ ಸಾಗಿ. ಮುಂದೆ ಅವುಗಳೇ ನಿಮ್ಮನ್ನು ಎತ್ತರಕ್ಕೇರಿಸುವ ಮೆಟ್ಟಿಲುಗಳಾಗುತ್ತವೆ. 

ವಾಸ್ತವದಲ್ಲಿ ಈ ಅಡ್ಡಿಗಳು ನಮ್ಮ ಬದ್ಧತೆಯನ್ನು ಪರೀಕ್ಷಿಸಲೆಂದೇ ಬರುತ್ತವೆ. ಅವು ನಮ್ಮ ದೃಢ ನಿಶ್ಚಯವನ್ನು ಅಳೆಯುವ ಮಾಪನವಿದ್ದಂತೆ. ಅಡ್ಡಿಗಳು ಬಾರದೆಹೋದರೆ ನಮಗೆ ನಮ್ಮ ಸಾಮರ್ಥ್ಯದ ಅರಿವಾಗುವುದೇ ಇಲ್ಲ. ಆದ್ದರಿಂದ ಅಡೆತಡೆಗಳನ್ನು ದೂರದೆ, ಅವನ್ನು ನಿಮ್ಮ ಪಾಲಿನ ವರದಾನವೆಂದು ತಿಳಿಯಿರಿ. ಉತ್ಸಾಹ ಮೈಗೂಡಿಸಿಕೊಂಡು ಮುನ್ನುಗ್ಗಿ!

ಅಡ್ಡಿ ಆತಂಕಗಳೆಲ್ಲ ನಮ್ಮ ಸೋಮಾರಿತನಕ್ಕೊಂದು ನೆವವಷ್ಟೆ. ನಾವು ಇರುವ ಸನ್ನಿವೇಶಕ್ಕಿಂತಲೂ ಅದೆಷ್ಟೋ ಕೆಳ ಹಂತದಲ್ಲಿ ಇರುವವರು ಎಂಥಾ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ ಅನ್ನುವುದನ್ನು ಗಮನಿಸಿ. ಮನೆಮನೆಗೆ ಪೇಪರ್ ಹಾಕುತ್ತಿದ್ದ ಬಾಲಕ ಮುಂದೆ ದೊಡ್ಡ ವಿಜ್ಞಾನಿಯಾಗಿ ಖ್ಯಾತಿ ಪಡೆಯಬಲ್ಲನಾದರೆ, ದೇಶದ ರಾಷ್ಟ್ರಪತಿಯೂ ಆಗಬಲ್ಲನಾದರೆ, ನಮ್ಮಿಂದ ಕೊನೆ ಪಕ್ಷ ನಮ್ಮ ಸಂಕಷ್ಟಗಳನ್ನು ನೀಗಿಕೊಂಡು ಸುಖವಾದ ಬದುಕನ್ನು ಕಟ್ಟಿಕೊಳ್ಳಲು ಯಾಕೆ ಸಾಧ್ಯವಾಗುವುದಿಲ್ಲ? 

ಇದು ಕೇವಲ ಒಂದು ಉದಾಹರಣೆಯಷ್ಟೆ. ಬಾಲ್ಯದಲ್ಲೇ ಮನೆಯನ್ನು ಬಿಟ್ಟು ಓಡಿಹೋಗಿ ಸಂಗೀತ ಕಲಿತು ಸ್ವರ ಸಾಮ್ರಾಟರಾದವರು, ಕಲಾಲೋಕದ ದಿಗ್ಗಜರಾದವರು, ನಟನಟಿಯರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಮಹಿಳೆಯರ ಸಾಲುಸಾಲೇ ನಮ್ಮ ಮುಂದೆ ಇವೆ. ನೀವು ಅವರಂತೆಯೇನೂ ಆಗಬೇಕಿಲ್ಲ. ಅಂಥವರಿಂದ ಸ್ಪೂರ್ತಿ ಪಡೆದು ನಿಮ್ಮ ಬದುಕಿನಲ್ಲಿ ಎದುರಾಗಿರುವ ಅಡ್ಡಿಯನ್ನು ಹೇಗೆ  ಮೆಟ್ಟಿಲಾಗಿಸಿಕೊಳ್ಳುವುದು ಎಂದು ಯೋಚಿಸಿದರೆ ಸಾಕು. ಸಕಾರಾತ್ಮಕ ಚಿಂತನೆ ಮತ್ತು ಮನೋಬಲ ನಿಮ್ಮಲ್ಲಿದ್ದರೆ, ಎಂತೆಂಥಾ ಅಡ್ಡಿಗಳ ಹೆಬ್ಬಂಡೆಗಳನ್ನೂ ದೂಡಿ ಅಥವಾ ಏರಿ ನೀವು ಮುನ್ನುಗ್ಗಬಲ್ಲಿರಿ. ಪ್ರಯತ್ನಿಸಿ ನೋಡಿ. 

 

Leave a Reply