ನಾವು ಸಂಕಲ್ಪಿಸಿ ಆಯ್ಕೆಮಾಡಿಕೊಂಡ ನಮ್ಮ ಜೀವನವನ್ನು ಸಫಲಗೊಳಿಸಿಕೊಳ್ಳಬೇಕಾದರೆ ನಮ್ಮಲ್ಲಿ ಮುಖ್ಯವಾಗಿ ‘ಸಂಕಲ್ಪ ಶುದ್ಧಿ’ ಇರಬೇಕಾಗುತ್ತದೆ. ಈ ಸಂಕಲ್ಪಶುದ್ಧಿ ಇದ್ದರೆ ಮಾತ್ರವೇ ಸಂಕಲ್ಪ ಶಕ್ತಿ ಬರುತ್ತದೆ. ಸಂಕಲ್ಪ ಶಕ್ತಿ ಇದ್ದರೆ ಮಾತ್ರವೇ ಸಂಕಲ್ಪ ಸಿದ್ಧಿ ಉಂಟಾಗುತ್ತದೆ ~ ಆನಂದಪೂರ್ಣ
ಬಹಳ ಸಲ ನಾವು ಪೂಜೆ ಮಾಡಿದರೂ ಫಲ ದೊರೆಯುವುದಿಲ್ಲ ಎಂದು ಗೊಣಗುತ್ತೇವೆ ಅಲ್ಲವೆ? ಪೂಜೆಗೆ ಮುನ್ನ ನಾವು ಸಂಕಲ್ಪವನ್ನು ಕೇವಲ ಆಚರಣೆಯ ಒಂದು ಭಾಗವಾಗಿ ಕೈಗೊಂಡಿರುತ್ತೇವೆ ಹೊರತು ತ್ರಿಕರಣಪೂರ್ವಕವಾಗಿ, ಆತ್ಮಸ್ಥವಾಗಿ ಅಲ್ಲ. ಹಾಗೊಮ್ಮೆ ಸಂಪೂರ್ಣ ತಾದಾತ್ಮ್ಯದಿಂದ ಸಂಕಲ್ಪ ಕೈಗೊಂಡು ಪೂಜೆ ಮಾಡಿದ್ದೇ ಆದಲ್ಲಿ, ಪ್ರಾರ್ಥಿಸಿದ್ದೇ ಆದಲ್ಲಿ, ಆಯಾ ಪೂಜೆ – ಪ್ರಾರ್ಥನೆಗಳು ಫಲಿಸದೆ ಇರಲು ಸಾಧ್ಯವೇ ಇಲ್ಲ!
ಯಾವುದಾದರೂ ಒಂದು ಸಂಗತಿಯನ್ನು ಪದೇ ಪದೇ ಆಡುತ್ತಿದ್ದರೆ ಅದು ನಿಜವೇ ಆಗಿಬಿಡುತ್ತದೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗೂ ಬಹಳ ಬಾರಿ ಅನುಭವಿಸಿರುತ್ತೇವೆ. ಬಹಳ ಸಲ ಇದು ನಕಾರಾತ್ಮಕ ಸಂಗತಿಗಳ ಸಂದರ್ಭದಲ್ಲಿಯೇ ನಿಜವಾಗುವುದು ಸೋಜಿಗವಲ್ಲವೆ? ಇದಕ್ಕೆ ಕಾರಣವಿದೆ.
ನಮ್ಮ ಸಂಕಲ್ಪ ಶಕ್ತಿ ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಸಂಗತಿಗಳಲ್ಲೆ ಹೆಚ್ಚು ಪ್ರಬಲವಾಗಿರುತ್ತದೆ. ನಾವು ಒಳಿತಾಗಲಿ ಎಂದು ಹಾರೈಸುವುದಕ್ಕಿಂತ ಹೆಚ್ಚು ತೀವ್ರವಾಗಿ ಕೆಡುಕಾಗಬಹುದೇನೋ ಎಂದು ಭಯ ಪಡುತ್ತೇವೆ. ಒಳಿತಿನ ನಿರೀಕ್ಷೆಗಿಂತ ಕೆಡುಕಿನ ಭಯವೇ ನಮ್ಮನ್ನು ಆಳುತ್ತದೆ. ಇದಕ್ಕೆ ಕಾರಣ ನಮ್ಮ ದೌರ್ಬಲ್ಯ. ಇದು, ಒಳಿತನ್ನು ಅಪ್ಪಿಕೊಳ್ಳಲಾಗದ ದೌರ್ಬಲ್ಯ. ಗೆಲುವಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದೌರ್ಬಲ್ಯ. ಈ ದೌರ್ಬಲ್ಯವೇ ವಿನಾಶಕಾರಿ ಸಂಕಲ್ಪಗಳಿಗೆ ಕಾರಣವಾಗುವುದು. ಆದ್ದರಿಂದ ಒಳಿತಿನ ಧೈರ್ಯ, ಗೆಲ್ಲುವ ಇಚ್ಛಾಶಕ್ತಿಯನ್ನೂ ಅದಕ್ಕೆ ಹಿನ್ನೆಲೆಯಾಗಿ ಸಚ್ಚಿಂತನೆಗಳನ್ನೂ ರೂಢಿಸಿಕೊಳ್ಳಬೇಕು. ಆಗ ಮಾತ್ರವೇ ಸಂಕಲ್ಪ ಶುದ್ಧಿ, ಸಂಕಲ್ಪ ಶಕ್ತಿಗಳನ್ನು ಹಿಂಬಾಲಿಸಿದ ಸಂಕಲ್ಪ ಸಿದ್ಧಿ ಉಂಟಾಗುವುದು. ಆದ್ದರಿಂದ ಎಂಥದ್ದನ್ನು ಇಚ್ಛಿಸಬೇಕು, ಯಾವ ಬಗೆಯ ಸಂಕಲ್ಪವನ್ನು ನಮ್ಮದಾಗಿಸಿಕೊಳ್ಳಬೇಕು ಅನ್ನುವ ಆಯ್ಕೆ ನಮ್ಮ ಕೈಲೇ ಇರುತ್ತದೆ.
ಉದಾಹರಣೆಗೆ, ಯಾರೂ ಜನ್ಮತಃ ಕಳ್ಳರಾಗಿರುವುದಿಲ್ಲ. ಹೊಟ್ಟೆ ಪಾಡಿಗೆ ಕಳ್ಳತನ ಮಾಡಲು ಶುರುವಿಟ್ಟೆ ಎನ್ನಬಹುದು. ಆದರೆ ಅದು ಕಳ್ಳನ ನಕಾರಾತ್ಮಕ ಸಂಕಲ್ಪದ ಫಲಶ್ರುತಿಯೇ ಆಗಿರುತ್ತದೆ. ಹೊಟ್ಟೆಗೆ ಕಷ್ಟ ಇರುವವರೆಲ್ಲ ಕಳ್ಳರೇ ಆಗಿದ್ದರೆ ಇಂದು ಜಗತ್ತಿನಲ್ಲಿ ಈಗ ಇರುವುದಕ್ಕಿಂತ ನೂರು ಪಟ್ಟು ಕಳ್ಳರು ಇರಬೇಕಿತ್ತು.
ಆ ಕಳ್ಳ ಇರುವ ಪರಿಸ್ಥಿತಿಯಲ್ಲೇ ಇರುವ ಮತ್ತೊಬ್ಬ, ಏನಾದರೂ ಮಾಡಿ ಆಹಾರ ಗಳಿಸಬೇಕು, ಕೆಲಸ ಹುಡುಕಿಕೊಳ್ಳಬೇಕು ಎಂದು ಸಂಕಲ್ಪಿಸಿ, ಕೊನೆ ಪಕ್ಷ ಆ ಹೊತ್ತಿನ ಊಟ ದಕ್ಕುವಂತೆ ಕೂಲಿಯನ್ನಾದರೂ ಮಾಡುವನು. ಯಾವಾಗ ಆತ ಎಷ್ಟು ಕಷ್ಟವಾದರೂ ದುಡಿಯುವೆನು ಎಂದು ಸಂಕಲ್ಪಿಸುತ್ತಾನೋ ಆಗ ಅವನಿಗೆ ಕೆಲಸ ದೊರಕಿ, ಊಟವೂ ದೊರೆಯುವುದು. ಅದು ಆತನ ಸಂಕಲ್ಪದ ಫಲ.
ನಾವು ಸಂಕಲ್ಪಿಸಿ ಆಯ್ಕೆಮಾಡಿಕೊಂಡ ನಮ್ಮ ಜೀವನವನ್ನು ಸಫಲಗೊಳಿಸಿಕೊಳ್ಳಬೇಕಾದರೆ ನಮ್ಮಲ್ಲಿ ಮುಖ್ಯವಾಗಿ ‘ಸಂಕಲ್ಪ ಶುದ್ಧಿ’ ಇರಬೇಕಾಗುತ್ತದೆ. ಈ ಸಂಕಲ್ಪಶುದ್ಧಿ ಇದ್ದರೆ ಮಾತ್ರವೇ ಸಂಕಲ್ಪ ಶಕ್ತಿ ಬರುತ್ತದೆ. ಸಂಕಲ್ಪ ಶಕ್ತಿ ಇದ್ದರೆ ಮಾತ್ರವೇ ಸಂಕಲ್ಪ ಸಿದ್ಧಿ ಉಂಟಾಗುತ್ತದೆ.
ಸಂಕಲ್ಪಶುದ್ಧಿಯು ಸಹನೆಯುಳ್ಳವರಿಗೆ ಮಾತ್ರ ಸಾಧ್ಯವಾಗುವಂಥದ್ದು. ತಮ್ಮಲ್ಲಿ ಉದಿಸಿದ ಇಚ್ಛೆಯ ಸರಿ ತಪ್ಪುಗಳನ್ನು, ಸಾಧಕ ಬಾಧಕಗಳನ್ನೂ ಆಲೋಚಿಸುವ ಸಹನೆ ಇರಬೇಕು. ಅನಂತರ ಸೂಕ್ತ ಸಮಯಕ್ಕಾಗಿ ಕಾಯಬೇಕು ಅಥವಾ ಸೂಕ್ತ ಸಮಯ – ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನಾದರೂ ಪಡೆಯಬೇಕು. ಇಂತಹ ತಾಳ್ಮೆಯನ್ನು ಧ್ಯಾನದಿಂದ ರೂಢಿಸಿಕೊಳ್ಳಬಹುದು. ಆದ್ದರಿಂದಲೇ ಅಧ್ಯಾತ್ಮವು ‘ಧ್ಯಾನ’ಕ್ಕೆ ಅಷ್ಟು ಮಹತ್ವ ನೀಡಿರುವುದು.
Appropriate words & explanations. Appreciate ur positive thoughts.