ಹೀರಾದೇವಿಯ ಎದೆಯಿಂದ ಚಿಮ್ಮಿ ಹರಿದ ಹಾಲೇ ‘ಕ್ಷೀರಪಥ’ : ಗ್ರೀಕ್ ಪುರಾಣ ಕಥೆಗಳು ~ 15

ಆಂಫಿಟ್ರಿಯೋನ್, ಆಲ್ಕ್ ಮೀನಿ, ಟಾಫಿಯನ್ನರ ಮೇಲಿನ ಯುದ್ಧ, ಸ್ಯೂಸ್ ದೇವನ ಪ್ರಣಯ, ಹೆರಾಕ್ಲೀಸ್ (ಹರ್ಕ್ಯುಲಸ್) ಹುಟ್ಟು ಮತ್ತು ಹೀರಾ ದೇವಿಯ ಸಿಟ್ಟು….

ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ

milkyway
ಆಂಫಿಟ್ರಿಯೋನ್ ಟ್ರೋಜನ್ ನಗರದಲ್ಲಿ ಆಳ್ವಿಕೆ ಮಾಡಿಕೊಂಡಿದ್ದ ರಾಜ. ಅವನ ಹೆಂಡತಿ ಅಲ್ಕ್ ಮೀನಿ ಭೂಮಿಯಲ್ಲೇ ಅತ್ಯಂತ ಚೆಲುವೆ. ಅವಳ ಎಂಟು ಮಂದಿ ಸಹೋದರರನ್ನು ಟಾಫಿಯನ್ನರು ಕೊಂದು ಹಾಕಿದ್ದರು. ಅವರ ಮೇಲೆ ಸೇಡು ತೀರಿಸಿಕೊಳ್ಳದ ಹೊರತು ನಾನು ನಿನ್ನೊಂದಿಗೆ ಸಂಸಾರ ಮಾಡುವುದಿಲ್ಲ ಎಂದು ಅಲ್ಕ್ ಮೀನಿ ಹಠ ತೊಟ್ಟಿದ್ದಳು.
ಹೆಂಡತಿಯ ಮೇಲೆ ವಿಪರೀತ ಪ್ರೇಮ ಇಟ್ಟುಕೊಂಡಿದ್ದ ಆಂಫಿಟ್ರಿಯೋನ್ ಕ್ರೆಯೋನನ ಸಹಾಯ ಪಡೆದು ಒಂದು ದೊಡ್ಡ ಸೈನ್ಯ ತೆಗೆದುಕೊಂಡು ಟಾಫಿಯನ್ನರ ಮೇಲೆ ದಂಡೆತ್ತಿ ಹೊರಟ.

ಇತ್ತ ಯುರೇನಸನ ಅಂಶದಿಂದ ಹುಟ್ಟಿದ ರಾಕ್ಷಸರು ಸ್ವರ್ಗವನ್ನು ಕೈವಶ ಮಾಡಿಕೊಳ್ಳುವ ಸಂಚು ನಡೆಸಿದ್ದರು. ಸ್ಯೂಸ್ ದೇವನ ಅಂಶದಿಂದ ಭೂಮಿಯ ಹೆಣ್ಣಿನಲ್ಲಿ ಹುಟ್ಟಿದ ಮಗನ ಸಹಾಯದಿಂದಷ್ಟೆ ಈ ರಾಕ್ಷಸರನ್ನು ಗೆಲ್ಲುವುದು ಸಾಧ್ಯವೆಂದು ದೈವವಾಣಿಯಿತ್ತು. ಅಂತಹ ಮಗನನ್ನು ಹೊಂದಲು ಯಾವ ಹೆಣ್ಣು ಸೂಕ್ತ ಎಂದು ಸ್ಯೂಸ್ ಹುಡುಕುತ್ತಿದ್ದಾಗ ಅಲ್ಕ್ ಮೀನಿ ಕಣ್ಣಿಗೆ ಬಿದ್ದಳು. ಸ್ವರ್ಗದಲ್ಲಿಯೂ ಇಂಥ ಹೆಣ್ಣನ್ನು ನಾನು ಕಂಡಿಲ್ಲ ಎಂದು ಯೋಚಿಸಿದ ಸ್ಯೂಸ್, ಏನಾದರೂ ಮಾಡಿ ಅವಳೊಂದಿಗೆ ಪ್ರಣಯ ನಡೆಸಲು ತೀರ್ಮಾನಿಸಿದ.

ಆದರೆ ಆಲ್ಕ್ ಮೀನಿ ಸಾಧ್ವಿಯಾದ ಹೆಣ್ಣು. ಪತಿವ್ರತೆ. ಅವಳನ್ನು ವಶಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆದ್ದರಿಂದ ಇನ್ನೇನು ಆಂಫಿಟ್ರಿಯೋನ್ ಟಾಫಿಯನ್ನರ ಮೇಲೆ ಯುದ್ಧ ಗೆದ್ದು ಮರಳಬೇಕು, ಅಷ್ಟರಲ್ಲಿ ಅಲ್ಕ್ ಮೀನಿಯ ಅಂತಃಪುರದ ಬಳಿ ಬಂದ. ಒಳಹೊಕ್ಕುವ ಮೊದಲು ತಾನು ಆಂಫಿಟ್ರಿಯೋನನಂತೆ ರೂಪ ಬದಲಿಸಿಕೊಂಡ. ಗಂಡ ತನ್ನ ಸಹೋದರರ ಸಾವಿನ ಸೇಡು ತೀರಿಸಿಕೊಂಡು ಯುದ್ಧ ಗೆದ್ದು ಬಂದನೆಂದು ಅಲ್ಕ್ ಮೀನಿ ಅವನನ್ನು ಖುಷಿಯಿಂದ ಬರಮಾಡಿಕೊಂಡಳು. ಅವಳಿಗೆ ಆತ ಸ್ಯೂಸ್ ದೇವೆನಂಬ ಸುಳಿವೂ ಸಿಗಲಿಲ್ಲ.

ಆಂಫಿಟ್ರಿಯೋನ್ ರೂಪದಲ್ಲಿದ್ದ ಸ್ಯೂಸ್ ದೇವ ಯುದ್ಧದಲ್ಲಿ ನಡೆದುದೆಲ್ಲವನ್ನೂ ಯಥಾವತ್ತಾಗಿ ಆಲ್ಕ್ ಮೀನಿಗೆ ಬಣ್ಣಿಸಿದ. ನಿನ್ನ ಕರಾರು ಪೂರೈಸಿದ್ದೇನೆ, ಈಗಲಾದರೂ ನನ್ನ ಪ್ರೇಮವನ್ನು ಸ್ವೀಕರಿಸು ಎಂದು ಕೇಳಿಕೊಂಡ. ಅಲ್ಕ್ ಮೀನಿ ಸಂಭ್ರಮದಿಂದಲೇ ಅವನನ್ನು ಕೂಡಿದಳು. ಸ್ಯೂಸ್ ದೇವ ಮಾರನೆ ಬೆಳಗ್ಗೆ ಅಲ್ಕ್ ಮೀನಿ ಏಳುವ ಮೊದಲೇ ಎದ್ದು ಅಲ್ಲಿಂದ ಹೊರಟುಹೋದ. ಯುದ್ಧದ ದೆಸೆಯಿಂದ ವಾರಗಳ ಕಾಲ ಹೊರಗಿದ್ದ ಗಂಡನಿಗೆ ಏನಾದರೊಂದು ತುರ್ತು ಕೆಲಸವಿದ್ದೀತು ಎಂದು ಅಲ್ಕ್ ಮೀನಿ ಭಾವಿಸಿದಳು.
ಅದೇ ಸಂಜೆ ಆಂಫಿಟ್ರಿಯೋನ್ ಯುದ್ಧ ಗೆದ್ದ ಹರ್ಷೋತ್ಸಾಹದಲ್ಲಿ ಮರಳಿದ. ತನ್ನ ಮುದ್ದು ಮಡದಿಯನ್ನು ಕಾಣುವ ಆತುರದಲ್ಲಿ ಅಂತಃಪುರಕ್ಕೆ ಬಂದ. ಅಲ್ಕ್ ಮೀನಿ ಸಿಂಗರಿಸಿಕೊಳ್ಳುತ್ತ ಕುಳಿತಿದ್ದಳು. ತನ್ನ ಸ್ವಾಗತಕ್ಕೇ ಅವಳು ಸಿದ್ಧವಾಗುತ್ತಿದ್ದಾಳೆ ಅಂದುಕೊಂಡ. ಯುದ್ಧದ ವಿವರಗಳನ್ನು ಬಣ್ಣಿಸಿದ. ನಿನ್ನ ಕರಾರು ಪೂರೈಸಿದ್ದೇನೆ, ಈಗಲಾದರೂ ನನ್ನ ಕೋರಿಕೆ ಈಡೇರಿಸು ಎನ್ನುತ್ತಾ ಅವಳ ಪಾದಕ್ಕೆ ಮುತ್ತಿಟ್ಟ. ಅಲ್ಕ್ ಮೀನಿಗೆ ಅಚ್ಚರಿಯಾಯಿತು. ನೆನ್ನೆ ತಾನೆ ಇದೆಲ್ಲವನ್ನೂ ಹೇಳಿದ್ದೆಯಲ್ಲ!? ಎಂದು ಗಂಡನನ್ನು ಪ್ರಶ್ನಿಸಿದಳು. ಶೃಂಗಾರ ಕ್ರೀಡೆಯಲ್ಲಿ ತೊಡಗಿದ್ದ ಆಂಫಿಟ್ರಿಯೋನ್ ಅದನ್ನು ಅಷ್ಟಾಗಿ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ನಂತರದಲ್ಲಿ  ಹೆಂಡತಿಗೆ ತನಗಿಂತ ಮೊದಲೇ ಯುದ್ಧದ ಕಥೆಗಳನ್ನು ತಿಳಿಸಿದ್ದು ಯಾರು ಎಂಬ ಸಂದೇಹ ಕಾಡತೊಡಗಿತು. ಮಾರನೆ ದಿನ ಕಣಿದೇವತೆ ಟೈರೀಸಿಯಸ್’ನನ್ನು ಕರೆಸಿ ಕೇಳಿದ. ಟೈರೀಸಿಯಸ್, ಸ್ಯೂಸ್ ಮಹಾದೇವನ ಬಗ್ಗೆ ಅವರಿಗೆ ತಿಳಿಸಿದ.

ದೇವರ ದೇವ ಸ್ಯೂಸ್ ದೇವನ ಎದುರು ನಿಲ್ಲುವವರು ಯಾರು? ಇಷ್ಟಕ್ಕೂ ಆಂಫಿಟ್ರಿಯೋನ್’ಗೆ ತನ್ನ ಹೆಂಡತಿಯ ಮೇಲಿನ ಪ್ರೀತಿಯೇ ಎಲ್ಲಕ್ಕಿಂತ ಅಧಿಕವಾಗಿತ್ತು. ಅವನು ಹೆಚ್ಚಿಗೆ ಯೋಚನೆ ಮಾಡದೆ ಅವಳೊಂದಿಗೆ ಸಹಜವಾಗಿ ಇರತೊಡಗಿದ.
ಒಂಬತ್ತು ತಿಂಗಳು ತುಂಬಿದವು. ಹೆರಿಗೆ ದಿನವೂ ಬಂದಿತು. ಅಲ್ಕ್ ಮೀನಿ ಮೊದಲು ಹೆರಾಕ್ಲೀಸ್ (ಹರ್ಕ್ಯುಲಸ್) ನನ್ನೂ ನಂತರ ಇಫಿಕ್ಲೀಸನನ್ನೂ ಹಡೆದಳು. ಹೆರಾಕ್ಲೀಸ್ ಸ್ಯೂಸ್ ದೇವನಿಂದ ಹುಟ್ಟಿದ ಮಗ. ಇಫಿಕ್ಲೀಸ್ ಆಂಫಿಟ್ರಿಯೋನ್ ನಿಂದ ಹುಟ್ಟಿದ ಮಗ.
ತನ್ನ ಗಂಡ ಸ್ಯೂಸ್, ಭೂಮಿಯ ಹೆಣ್ಣಿನಿಂದ ಮಗುವನ್ನು ಪಡೆಯಲಿದ್ದಾನೆ ಎಂದು ತಿಳಿದ ಹೀರಾ ದೇವಿ ಕುಪಿತಗೊಂಡಿದ್ದಳು. ಈ ವಿಷಯ ಅಲ್ಕ್ ಮೀನಿಯನ್ನು ತಲುಪಿ ಆತಂಕಗೊಂಡಳು. ಸ್ಯೂಸನ ಮಗುವಿನ ಜೊತೆಗೆ ಆಂಫಿಟ್ರಿಯೋನನ ಮಗುವನ್ನೂ ಹೀರಾ ದೇವಿ ಕೊಂದುಬಿಟ್ಟಾಳು ಎಂದು ಭಯಪಟ್ಟು ಮಗುವನ್ನು ಹೊರಗೆಸೆದುಬಿಟ್ಟಳು.

ಇದು ಸ್ಯೂಸ್ ದೇವನಿಗೆ ಗೊತ್ತಾಗಿ, ತನ್ನ ಪ್ರೀತಿಯ ಮಗಳು ಅಥೆನಾ ದೇವಿಯನ್ನು ಕರೆದು, ಹೆರಾಕ್ಲೀಸನನ್ನು ರಕ್ಷಿಸಿ ಆತನ ತಾಯಿಯ ಬಳಿ ಮರಳಿಸುವಂತೆ ಹೇಳಿದ. ಇದನ್ನು ನಡೆಸಲು ಅಥೆನಾ ತನ್ನ ತಾಯಿ ಹೀರಾಳೊಂದಿಗೇ ರಥವೇರಿ ಹೊರಟಳು. ದಾರಿಯಲ್ಲಿ ಮಗುವನ್ನು ಕಂಡು ಅಚ್ಚರಿ ನಟಿಸುತ್ತಾ, “ಅಮ್ಮಾ! ಈ ಮಗು ಎಷ್ಟು ಮುದ್ದಾಗಿದೆ… ಹಸಿವೆಯಿಂದ ಅಳುತ್ತಿದೆ” ಅಂದಳು. ಹೀರಾ ಮಗುವನ್ನೆತ್ತಿಕೊಂಡಳು. ಮುದ್ದುಮುದ್ದಾಗಿದ್ದ ಮಗುವನ್ನು ಕಂಡು ಅವಳಿಗೆ ಹಾಲುಣಿಸುವ ಬಯಕೆಯಾಯಿತು. ಅವಳು ಹಾಲೂಡಲು ಶುರು ಮಾಡುತ್ತಿದ್ದಂತೆಯೇ ಮಗು ಮೊಲೆಯನ್ನು ಬಲವಾಗಿ ಹೀರತೊಡಗಿತು.

ಹೆರಾಕ್ಲೀಸ್ ಹಾಲು ಹೀರುವ ಭರಕ್ಕೆ ಹೀರಾಳ ಎದೆ ನೋಯಲಾರಂಭಿಸಿತು. ಅವಳು ಗಾಬರಿಯಿಂದ ಮಗುವನ್ನು ದೂಡಿದಳು. ಅದಕ್ಕೆ ಸರಿಯಾಗಿ ಮಗು ಎದೆಯಿಂದ ಹೀರುತ್ತಿದ್ದ ಹಾಲು ಆಗಸಕ್ಕೆ ಚಿಮ್ಮಿ ಹರಿಯತೊಡಗಿತು. ಹೀಗೆ ಹೀರಾಳ ಎದೆಯಿಂದ ಚಿಮ್ಮಿ ಆಕಾಶದಲ್ಲಿ ಹರಿದ ಹಾಲಿನ ದಾರಿಯು ‘ಕ್ಷೀರಪಥ’ವಾಗಿ (milky way) ರೂಪುಗೊಂಡಿತು.

 

Leave a Reply