ನಾವೇಕೆ ಗ್ರೀಕ್ ಪುರಾಣ ಕಥೆಗಳ ಸರಣಿ ಪ್ರಕಟಿಸುತ್ತಿದ್ದೇವೆ?

greek
ರಳಿಮರ ಕಳೆದ ಕೆಲವು ದಿನಗಳಿಂದ ಗ್ರೀಕ್ ಪುರಾಣ ಕಥೆಗಳಸರಣಿಯನ್ನು ಪ್ರಕಟಿಸುತ್ತಿದೆ. ಇದಕ್ಕೆ ಅಂತಹಾ ಗಹನ ಕಾರಣಗಳೇನೂ ಇಲ್ಲ. ನೇರವಾಗಿ ಮತ್ತು ಸರಳವಾಗಿ ಹೇಳುವುದಾದರೆ ಜಗತ್ತಿನ ಬೇರೆಬೇರೆ ಭಾಗಗಳ ಕತೆಗಳನ್ನು ಓದಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ.
ಇತ್ತೀಚಿನ ವರ್ಷಗಳಲ್ಲಿ ನಾವು ಕಥೆಗಳನ್ನು ಕಥೆಗಳನ್ನಾಗಿಯೇ ಓದುವ ಅಭ್ಯಾಸವನ್ನೇ ಬಿಟ್ಟುಬಿಟ್ಟಿದ್ದೇವೆ. ಪ್ರತಿಯೊಂದರಲ್ಲೂ ಏನಾದರೊಂದನ್ನು ಹುಡುಕುವುದು ನಮಗೆ ರೂಢಿಯಾಗಿಬಿಟ್ಟಿದೆ. ನೀತಿಯನ್ನೋ, ಮೌಲ್ಯವನ್ನೋ, ಸಂದೇಶವನ್ನೋ, ಒಳಿತನ್ನೋ, ಕೆಡುಕನ್ನೋ ನಾವು ಅಲ್ಲಿ ಹುಡುಕಲೇ ಬೇಕು. ಇದೊಂದು ಬೌದ್ಧಿಕ ಕಸರತ್ತು ಅಷ್ಟೇ. ಏಕೆಂದರೆ, ಹಾಗೆ ಕಥೆಗಳಿಗೆ ಏನಾದರೊಂದು ಅರ್ಥ ಹುಡುಕಿ ಹಚ್ಚುವ ನಾವು ಅದನ್ನು ನಮ್ಮಲ್ಲಿ ಒಳಗೊಳಿಸಿಕೊಳ್ಳುತ್ತೇವೆಯೇ? ಖಂಡಿತವಾಗಿಯೂ ಇಲ್ಲ! ಹರಿಶ್ಚಂದ್ರ ನಾಟಕ ನೋಡಿರುವ ಕೋಟ್ಯಂತರ ಜನರಲ್ಲಿ ಒಬ್ಬ ಮೋಹನದಾಸನಿಗೆ ಮಾತ್ರ ಸತ್ಯವ್ರತ ಕೈಗೊಳ್ಳುವುದು ಸಾಧ್ಯವಾಯಿತು. ಹೀಗಿರುವಾಗ ಸುಮ್ಮನೆ ಕಥೆಗಳಿಗೆ ಅರ್ಥ ಹಚ್ಚಿ ಚರ್ಚೆಗಳನ್ನು ವಾಗ್ವಾದಕ್ಕೆ ಕೊಂಡೊಯ್ದು ವೃಥಾ ಕಾಲಹರಣ ಮಾಡುತ್ತೇವೆ. ಕೆಲವೊಮ್ಮೆ ಅಪಾರ್ಥ – ವಿಪರೀತಾರ್ಥಗಳನ್ನು ಹಚ್ಚಿ ಟೀಕಿಸಿ ಜಗಳ ತೆಗೆಯುತ್ತೇವೆ. ಮತ್ತೆ ಕೆಲವೊಮ್ಮೆ ಕಥೆಗಳನ್ನು ಸತ್ಯವೆಂದೇ ನಂಬಿ ಅಂಧಶ್ರದ್ಧೆ ಬೆಳೆಸಿಕೊಳ್ತೇವೆ. ಹೀಗೆಲ್ಲ ಆಗಬಾರದು ಅಂದರೆ, ಕಥೆಗಳನ್ನು ಕಥೆಗಳಾಗಿ ಓದುವುದು ನಮಗೆ ಸಾಧ್ಯವಾಗಬೇಕು.
ಉದಾಹರಣೆಗೆ, ಬಾಲ್ಯದಲ್ಲಿ ನಾವು ಪಂಚತಂತ್ರದ ಕಥೆಗಳು, ಈಸೋಪನ ಕಥೆಗಳಲನ್ನೆಲ್ಲ ಓದುತ್ತಿದ್ದೆವಲ್ಲವೆ? ಅದರಲ್ಲಿ ಪ್ರಾಣಿ, ಪಕ್ಷಿಗಳು, ಚೆಂಡು, ಟೇಬಲ್ಲು, ಕುರ್ಚಿಗಳೂ ಮಾತಾಡುತ್ತಿದ್ದವು. ನಾವು ಅವೆಲ್ಲಕ್ಕೆ ಬಾಯಿ ಬರುತ್ತದೆಯೇ ಎಂಬ ಯೋಚನೆಯನ್ನೇ ಮಾಡದೆ ಕಥೆಗಳ ಓದನ್ನು ಸುಖಿಸುತ್ತಿದ್ದೆವು. ಹೀಗೆ ಓದುವುದು ನಮ್ಮಲ್ಲಿ ಜೀವನದ ಸ್ವಾರಸ್ಯವನ್ನು ಉಳಿಸಿಕೊಳ್ಳಲು ಬೇಕಾದ ಕುತೂಹಲವನ್ನು ಮತ್ತು ಆಸಕ್ತಿಯನ್ನು ಕಾಯ್ದಿಡುತ್ತದೆ. ಪುರಾಣಗಳು ನಮಗೆ ಇಂಥ ಕಥೆಯ ಓದಿನ ಖುಷಿಯನ್ನು ಕೊಡುವುದರ ಜೊತೆಗೆ ಪ್ರಾಚೀನರ ಮುಗ್ಧತೆ, ಸೃಜನಶೀಲತೆ, ಕಲ್ಪನಾಲೋಕಗಳ ಪರಿಚಯ ಮಾಡಿಸುತ್ತದೆ. ಮತ್ತು, ಇಂದಿನ ನಾವು ಕೂಡ ನಮ್ಮ ಖಾಸಗಿ ಅವಕಾಶದಲ್ಲಿ, ಮಕ್ಕಳೊಡನೆ ಇರುವಾಗ ಕಥೆ ಕಟ್ಟುತ್ತೇವಲ್ಲ, ನಮ್ಮ ಪ್ರಾಚೀನರೂ ಅದನ್ನು ಮಾಡುತ್ತಿದ್ದರು ಅನ್ನುವುದನ್ನು ನಮಗೆ ಖಾತ್ರಿಪಡಿಸುತ್ತವೆ.
ಓದಿನ ಖುಷಿಗೆ ಮಾತ್ರವಲ್ಲದೆ, ಸ್ವಲ್ಪ ಪ್ರಯೋಜನಕಾರಿ ಆಯಾಮವನ್ನು ಇದಕ್ಕೆ ಹಚ್ಚುವುದಾದರೆ – ಸಂಸ್ಕೃತಿಯ ಮೂಲ ಬೇರುಗಳ ಹುಡುಕಾಟಕ್ಕಾಗಿ ಪುರಾಣ ಕಥೆಗಳನ್ನು ಓದಬೇಕು. ಮತ್ತೊಂದು ಜನಸಮುದಾಯದ ಮೂಲಸಂಸ್ಕೃತಿಯನ್ನು ಅದು ಹೆಣೆದ ಕಥನಗಳ ಮೂಲಕ ನೋಡುವ ಪ್ರಯತ್ನ ಮಾಡಬೇಕು. ಮತ್ತು, ನಮ್ಮ ಪುರಾಣ ಕಥೆಗಳಿಗೂ ಅವರ ಪುರಾಣ ಕಥೆಗಳಿಗೂ ಇರುವ ಸಾಮ್ಯತೆಯನ್ನು ಗುರುತಿಸಬೇಕು.
ಹೀಗೆ ಮಾಡುವುದರ ಮುಖ್ಯ ಪ್ರಯೋಜನ, ದೇಶ/ನಾಗರಿಕತೆ/ಸಂಸ್ಕೃತಿಗಳ ಮೂಲಬೀಜವೊಂದೇ, ನಾವೆಲ್ಲರೂ ಸಮಾನರು ಅನ್ನುವ ಅರಿವು ಉಂಟಾಗುವುದು. ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ ಅನ್ನುವ ಅರಿವು ಮೂಡಿ ನಮ್ಮನಮ್ಮ ಮೇಲರಿಮೆ/ಕೀಳರಿಮೆಗಳನ್ನು ಕಳೆದುಕೊಳ್ಳುವುದು… ಆಯಾ ನಾಗರಿಕತೆಗಳ ‘ತಿಳಿವಿನ ಗ್ರಂಥ’ಗಳು, ಶಾಸ್ತ್ರಗಳು, ಧರ್ಮ ಗ್ರಂಥಗಳನ್ನು ಓದುವುದು ಬೇರೆ; ಆಯಾ ದೇಶಗಳ ಜನಪದ ಮತ್ತು ಪುರಾಣಕಥೆಗಳನ್ನು ಓದುವುದು ಬೇರೆಯೇ. ಏಕೆಂದರೆ ಪುರಾಣ ಮತ್ತು ಜನಪದ ಕಥನಗಳು ಜನಸಾಮಾನ್ಯರನ್ನು ಒಳಗೊಳಿಸಿಕೊಳ್ಳುವಂಥವು. ಮೂಲ ಯಾರು ಏನನ್ನೇ ಬರೆದಿಟ್ಟಿದ್ದರೂ ಜನರ ನಡುವೆ ಹಬ್ಬುತ್ತಾ ರೂಪಾಂತರಗೊಳ್ಳುತ್ತಾ ಸ್ಥಾಪಿತವಾದಂಥವು. ಆದ್ದರಿಂದ ಇವು ಜನರ ನಂಬಿಕೆಯ ಕಥನಗಳು.
ಇಂಥಾ ಪುರಾಣಗಳ ಓದಿನ ರುಚಿ ತೋರಿಸುವ ಉದ್ದೇಶದಿಂದ ಅರಳಿಮರ ‘ಗ್ರೀಕ್ ಪುರಾಣಕಥೆಗಳು’ ಸರಣಿಯನ್ನು ಆರಂಭಿಸಿದೆ. ಸಾಧ್ಯವಾದರೆ ಮುಂದೆ ಇತರ ಸಂಸ್ಕೃತಿ/ ಸಮುದಾಯಗಳ ಪುರಾಣಕಥೆಗಳನ್ನು ಸಂಗ್ರಹಿಸಿ, ಅನುವಾದಿಸಿ ಪ್ರಕಟಿಸುವ ಯೋಚನೆ ಇದೆ. ಹಾಗೆಯೇ, ನಮ್ಮದೇ ಭಾರತೀಯ ಪುರಾಣ ಕಥೆಗಳನ್ನೂ ಇವುಗಳ ಜೊತೆಗೇ ಪ್ರಕಟಿಸುವ ಇರಾದೆಯೂ ಇದೆ.
ಈ ಗ್ರೀಕ್ ಪುರಣಾ ಕಥೆಗಳಿಗೆ ‘ಗೂಗಲ್’ ಆಕರವಾಗಿದ್ದು, ಹಲವು ಪಾಠಾಂತರಗಳನ್ನು ಓದಿಕೊಂಡು, ಎಲ್ಲವನ್ನೂ ಹದವಾಗಿ ಬೆರೆಸಿದ ಒಂದು ಚೌಕಟ್ಟಿನೊಳಗಿಟ್ಟು ಕೊಡುವ ಪ್ರಯತ್ನ ಮಾಡಿದ್ದೇವೆ. ನಿಮಗಿದು ಇಷ್ಟವಾಗಿದೆ ಅನ್ನೋದನ್ನು ಓದುಗರ ಸಂಖ್ಯೆಯೇ ತಿಳಿಸುತ್ತಿದೆ.
ಧನ್ಯವಾದ,
ಅರಳಿ ಬಳಗ
ಈವರೆಗಿನ 15 ಗ್ರೀಕ್ ಪುರಾಣಕಥೆಗಳನ್ನು ಇಲ್ಲಿ ಓದಿ : https://aralimara.com/category/ಕಥಾಲೋಕ/ಪುರಾಣ-ಕಥೆಗಳು/

Leave a Reply