ಸೂಫಿ ಕಾವ್ಯ : ರೂಮಿ ಪದ್ಯ ಗೊಂಚಲು

ಮೂಲ: ಜಲಾಲುದ್ದೀನ್ ರೂಮಿ | ಅನುವಾದ : ಚಿದಂಬರ ನರೇಂದ್ರ

1.

sufi 3

ಯಾರು ಅವರು
ನನ್ನ ಆಟ ಕೆಡಿಸುತ್ತಿರುವವರು?

ನಾನು ಬಲಕ್ಕೆ ಬಿಟ್ಟ ಬಾಣ
ಎಡಕ್ಕೆ ಹೇಗೆ ಬಂತು?

ಜಿಂಕೆಯ ಬೆನ್ನುಹತ್ತಿದವನ
ಹಂದಿ ಯಾಕೆ ಅಟ್ಟಿಸಿಕೊಂಡು ಬಂತು?

ಅಂಗಡಿಗೆ ಹೊರಟವನ ಕಾಲುಗಳನ್ನ
ಜೈಲಿನತ್ತ ಹೊರಳಿಸಿದವರು ಯಾರು?

ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ
ನಾನೇ ಜಾರಿ ಬಿದ್ದದ್ದು ಹೇಗೆ?

ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ.

ಅದಕ್ಕೇ, ನಮ್ಮ ಬೇಕುಗಳ ಬಗ್ಗೆ
ನಮಗೆ ಪುಟ್ಟ ಸಂಶಯ ಇರಲೇಬೇಕು.

 

2.

ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನೊಬ್ಬ ನೌಕರನಂತೆ.

ಅಲೌಕಿದ ತುಡಿತ
ನಿನ್ನ ಜಗ್ಗುತ್ತಿದೆಯೆಂದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.

ಎರಡೂ ಮೂರ್ಖ ಆಸೆಗಳೇ.

ಪ್ರೀತಿ ತಂದಿಡುವ
ಗೊಂದಲಕರ ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.

ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.

 

3.

‘ಕಾರಣ’
ಭಾಷಣ ಮಾಡುತ್ತಿತ್ತು
” ಈ ಜಗತ್ತಿನಲ್ಲಿರೋದೆ
ಆರು ದಿಕ್ಕುಗಳು
ಒಂದು ಹೆಚ್ಚಲ್ಲ, ಒಂದು ಕಡಿಮೆಯಲ್ಲ”

ಪ್ರೇಮ,
ಸುಮ್ಮನಿರಲಾಗದೇ ಬಾಯಿಬಿಟ್ಟಿತು,
” ಈ ಎಲ್ಲವನ್ನೂ ಮೀರಿದ
ದಾರಿಯೊಂದಿದೆ,
ನಾನು ಬೇಕಾದಷ್ಟು ಬಾರಿ
ಆ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದೇನೆ”

‘ಕಾರಣ’ ಕ್ಕೆ
ವ್ಯಾಪಾರಕ್ಕೊಂದು ದಾರಿ ಸಿಕ್ಕಿತು
ಆ ದಿಕ್ಕಿನಲ್ಲೊಂದು ಅಂಗಡಿ ಶುರುವಾಯಿತು.
ಆದರೆ
ಪ್ರೇಮದ ವ್ಯಾಪಾರದಲ್ಲಿ
ಬಳಕೆಯಾಗುವ ಕರೆನ್ಸಿಯೇ ಬೇರೆ.

‘ಕಾರಣ’
ಅಂಗಡಿ ಮುಚ್ಚಲೇಬೇಕಾಯಿತು.

 

4.

sufi 4

ಧರ್ಮ ಮತ್ತು ದ್ರೋಹದ
ಆಚೆಗೆ ಒಂದು ಬಯಲು ಇದೆ.
ಪ್ರೇಮ, ಮನೆ ಕಟ್ಟಿಕೊಂಡಿರುವುದು
ಈ ಬಯಲಿನ ನಟ್ಟ ನಡುವೆ.
ಸಂತರು ತಲೆ ಬಗ್ಗಿಸುವುದು
ಇಲ್ಲಿ ಮಾತ್ರ.
ನಂಬಿಗಸ್ತರಿಗೆ ಮತ್ತು
ದ್ರೋಹಿಗಳಿಗೆ
ಇಲ್ಲಿ ಜಾಗ ಇಲ್ಲ.

 

5.

ನಿಮ್ಮ ಒಂದೇ ಒಂದು ತುಣುಕು
ನಿಮ್ಮೊಳಗೆ ಉಳಿದು ಹೋದರೂ
ವಿಗ್ರಹಗಳನ್ನು ಪೂಜಿಸುವ ಕರ್ಮದಿಂದ 
ನೀವು ಪಾರಾಗಲಾರಿರಿ.
ಹಾಗಂತ
ಕಾರಣದ ಕೊಡಲಿಯಿಂದ
ಸಂಶಯ, ಅನುಮಾನಗಳನ್ನೆಲ್ಲ
ಕೊಚ್ಚುತ್ತ ಹೋದರೆ
ಅಲ್ಲೊಂದು ಸುಳ್ಳು ಮೂರ್ತಿ
ಹುಟ್ಟಿಕೊಳ್ಳುತ್ತದೆ.
ಅದರ ಹೆಸರೇ 

‘ ಆತ್ಮವಿಶ್ವಾಸ ‘

 

6.

ಮಿಂಚುವ, ಪರಿಪಕ್ವವಾಗುವ ಆಸೆ
ಯಾವ ಗಂಡಿಗೆ ಅಥವಾ ಹೆಣ್ಣಿಗೆ
ಇರುವುದಿಲ್ಲ ಹೇಳಿ?
ಮತ್ತ್ಯಾಕೆ ಈ ತಗಾದೆ
ಕಠಿಣವಾಗಿ ನಡೆಸಿಕೊಂಡಿದ್ದರ ಬಗ್ಗೆ?

ಪ್ರೇಮ, ಕೋರ್ಟಿನಲ್ಲಿ ನಮೂದಾದ ದಾವೆ
ಎಲ್ಲದಕ್ಕೂ ಸಾಕ್ಷಿ ಬೇಕು
ವ್ಯಾಜ್ಯ ನಿರ್ಣಯ ಮಾಡಬೇಕಾದರೆ
ಜಡ್ಜ್ ಗೆ ಎಲ್ಲ ವಿವರ ಗೊತ್ತಾಗಲೇಬೇಕು.

ಗುಪ್ತ ನಿಧಿಯ ಸುತ್ತ
ಹಾವು ಓಡಾಡಿಕೊಂಡಿರುವ ಬಗ್ಗೆ
ನಿಮಗೂ ಗೊತ್ತಿರಬೇಕು.

ಸಂಪತ್ತು ಪಡೆಯಲು
ನೀವು ಹಾವಿಗೆ ಮುತ್ತಿಡಲೇಬೇಕು.

Leave a Reply