ಅಲೆಕ್ಸಾಂಡರ್ ಬಳಿ ಡಯೊಜಿನಿಸ್ ಕೇಳಿದ್ದೇನು?

alex

ಲೆಕ್ಸಾಂಡರ್‌ನನ್ನು ಗ್ರೀಸ್‌ನ ಎಲ್ಲ ಜನರೂ ಹೊಗಳುತ್ತಿದ್ದರು. ಅವನಿಗೆ ವಿಶೇಷ ಗೌರವ ಸಲ್ಲಿಸುತ್ತಿದ್ದರು ಹಾಗು ಅವನ ಸಾಧನೆಗಳನ್ನು ಶ್ಲಾಘಿಸುತ್ತಿದ್ದರು. ಆದರೆ ದಾರ್ಶನಿಕ ಡಯೊಜಿನಿಸ್‌ ಮಾತ್ರ ಅಲೆಕ್ಸಾಂಡರನ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಜನ ಆತನನ್ನು ಅಲೆಕ್ಸಾಂಡರ್’ಗಿಂತಲೂ ತುಸು ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು. 

ಡಯೊಜಿನಿಸ್ ನದು ವಿಲಕ್ಷಣ ವ್ಯಕ್ತಿತ್ವ. ತನ್ನೆಲ್ಲ ಆಸ್ತಿಯನ್ನೂ ದಾನವಾಗಿ ಕೊಟ್ಟಿದ್ದ ಆತ, ಬೆತ್ತಲೆಯಾಗಿ ಮಾರುಕಟ್ಟೆಯಲ್ಲೊಂದು ಪೀಪಾಯಿಯ ಒಳಗೆ ಕುಳಿತು ಕಾಲ ಕಳೆಯುತ್ತಿದ್ದ.

ಈತನ ಬಗ್ಗೆ ಕೇಳಿದ ಅಲೆಕ್ಸಾಂಡರ್, ತಾನೊಮ್ಮೆ ಈ ವಿಚಿತ್ರ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದು ಹೊರಟ. ಡಯೊಜಿನಿಸ್‌ ಕುಳಿತಿದ್ದ ಪೀಪಾಯಿಯ ಹತ್ತಿರ ಹೋಗಿ  ಹೇಳಿದ, “ನೀನು ವಿಶಿಷ್ಟ ವ್ಯಕ್ತಿಯಂತೆ ತೋರುತ್ತೀಯ. ಮೊದಲ ನೋಟದಲ್ಲೇ ನಿನ್ನ ಕುರಿತು ಗೌರವ ಉಂಟಾಗಿದೆ. ನಿನ್ನದೇನಾದರೂ ಬೇಡಿಕೆ ಇದ್ದರೆ ಕೇಳು. ಅದನ್ನು ಈಗಲೇ ಪೂರೈಸುತ್ತೇನೆ.”

“ನಿಜವಾಗಿಯೂ ನನ್ನ ಕೋರಿಕೆ ಈಡೇರಿಸುವೆಯಾ?” ಕೇಳಿದ ಡಯೊಜಿನಿಸ್‌.

“ಏನದು?” ವಿಚಾರಿಸಿದ ಅಲೆಕ್ಸಾಂಡರ್‌

“ನಿಮ್ಮ ನೆರಳು ನನ್ನ ಮೇಲೆ ಬೀಳುತ್ತಿದೆ. ನೀವು ನನಗೂ ಸೂರ್ಯನಿಗೂ ನಡುವೆ ನಿಲ್ಲದೆ ತುಸು ಪಕ್ಕಕ್ಕೆ ಸರಿದರೆ ಅದೇ ದೊಡ್ಡ ಉಪಕಾರವಾಗುವುದು” ಅಂದ ಡಯೋಜಿನಿಸ್.

ಯಾಕೆ ಜನ ತನಗಿಂತ ಹೆಚ್ಚು ಈತನನ್ನು ಇಷ್ಟಪಡುತ್ತಾರೆಂದು ಅಲೆಕ್ಸಾಂಡರ್’ನಿಗೆ ಅರ್ಥವಾಯಿತು. “ನಾನು ಅಲೆಕ್ಸಾಂಡರ್‌ ಆಗಿಲ್ಲದೇ ಇದ್ದಿದ್ದರೆ ಈ ಡಯೊಜಿನಿಸ್‌ ಆಗಿರಲು ಬಯಸುತ್ತಿದ್ದೆ!”ಎಂದು ಉದ್ಗರಿಸುತ್ತಾ ಅಲ್ಲಿಂದ ಮರಳಿ ಹೊರಟ. 

Leave a Reply