ದೇಹ ಸೌಂದರ್ಯ ಸಾಧನೆಗೆ ಅಡ್ಡಿ ಅನ್ನುವುದು ಬಹುತೇಕ ಸಾಧಕರ ಅಭಿಮತ. ಹಾಗೆಂದು ಅವರು ಲೋಕದ ಚೆಲುವಿಗೆ ಮುಖ ತಿರುವಿದವರಲ್ಲ, ಸಾಧನೆಗಾಗಿ ಸ್ವತಃ ತಮ್ಮ ಚೆಲುವನ್ನೆ ಕುಂದಿಸಿಕೊಂಡವರು. ಮೀರಾ, ಅಕ್ಕ, ಶಾರದಾ ಮಾತೆ, ಝೆನ್ ಬಿಕ್ಖುಣಿ ರ್ಯೊನೆನ್, ಸಂತ ಅವ್ವೈಯಾರ್… ಈ ಸಾಲು ದೊಡ್ಡದಿದೆ.
ಸೌಂದರ್ಯಕ್ಕೆ ಮನಸೋಲದವರಿಲ್ಲ. ಆದರೆ ಈ ಭರಾಟೆಯಲ್ಲಿ ಚೆಂದವಿಲ್ಲದ್ದನ್ನು ತಿರಸ್ಕರಿಸೋದು ಪ್ರಮಾದವೇ ಸರಿ. ವಾಸ್ತವವಾಗಿ `ಚೆಂದವಿಲ್ಲದ್ದು’ ಎನ್ನುವ ಯಾವ ವಸ್ತುವೂ, ಜೀವಿಯೂ ಸೃಷ್ಟಿಯಲ್ಲಿ ಇಲ್ಲ.
`ಆಹ್! ಚೆಂದವಿದೆ ಎಂದುಕೊಳ್ಳುವ ಕ್ಷಣದಲ್ಲೇ ಕುರೂಪವೂ ಹುಟ್ಟಿಕೊಳ್ಳುತ್ತೆ’ ಎನ್ನುತ್ತದೆ ದಾವ್. ಆದ್ದರಿಂದ ಕಣ್ಣಿಗೆ ಹಿತ ಕಾಣುವ, ಸುಂದರವೆನ್ನಿಸುವ ವಸ್ತುವನ್ನು ಯಾವ ಭೇದವೂ ಇಲ್ಲದಂತೆ, ಖಾಲಿ ಮನಸ್ಸಿನಿಂದ ಆಸ್ವಾದಿಸಬೇಕು. ಅದರ ಬಗ್ಗೆ ವಿಶೇಷ ಮಮಕಾರವನ್ನಾಗಲೀ, ಪೊಸೆಸ್ಸಿವ್‍ನೆಸ್ ಆಗಲೀ ಬೆಳೆಸಿಕೊಳ್ಳಬಾರದು. ಆಗ ಹೋಲಿಸುವ ಬುದ್ಧಿ ನಮ್ಮಿಂದ ತೊಲಗುತ್ತದೆ. ನಾವು ಶುದ್ಧ ಮನಸ್ಕರಾದಾಗ ಕುರೂಪವನ್ನು ಕಾಣುವ ಭೇದ ಬುದ್ಧಿಯೂ ನಮ್ಮಿಂದ ದೂರವಾಗುತ್ತದೆ.
ಭಂಗುರತೆಯನ್ನು ಮನದಟ್ಟು ಮಾಡಿಕೊಡುವಂಥದೊಂದು ಕತೆಯಿದೆ. ಒಂದೂರಿನಲ್ಲಿ ಒಬ್ಬ ಚೆಲುವೆ. ಅವಳ ಚೆಲುವಿಗೆ ಮನಸೋತ ಶ್ರೀಮಂತ ತರುಣ,ಮದುವೆಯಾಗೆಂದು ಪೀಡಿಸುತ್ತಾನೆ. ಚೆಲುವೆ ಆತನಿಗೆ ಒಂದು ತಿಂಗಳು ಬಿಟ್ಟು ತನ್ನ ಮನೆಗೆ ಬಂದು, ಪೋಷಕರಲ್ಲಿ ಪ್ರಸ್ತಾಪವಿಡುವಂತೆ ಹೇಳುತ್ತಾಳೆ. ಅದರಂತೆ ತಿಂಗಳು ಕಳೆದು ತರುಣ ಆಕೆಯ ಮನೆಗೆ ಬರುತ್ತಾನೆ. ಮುಂಬಾಗಿಲ ಹೊಸ್ತಿಲ ಬಳಿಯೊಬ್ಬಳು ಮೂಳೆ ಚಕ್ಕಳ ಕಾಣುವಂತೆ ಬಡಕು ಮೈಯಿನ ಹೆಣ್ಣು ನಿಂತಿರುತ್ತಾಳೆ. ತರುಣನನ್ನು ನೋಡುತ್ತಲೇ, `ಬಂದೆಯಾ… ನಿನಗಾಗಿಯೇ ಕಾಯುತ್ತಿದ್ದೆ’ ಎಂದು ಸ್ವಾಗತಕ್ಕೆ ಮುಂದಾಗುತ್ತಾಳೆ. ಬತ್ತಿದ ಕೆನ್ನೆ, ಎಲುಬಿನ ಹಂದರದ ದೇಹ ಹೊಂದಿದ್ದ ಆಕೆಯನ್ನು ಕಂಡು ಅಸಹ್ಯದಿಂದ ದೂರ ತಳ್ಳುತ್ತಾನೆ ಆತ. ಆಗ ತರುಣಿ, ತಿಂಗಳ ಹಿಂದೆ ಅವನು ಮದುವೆಯಾಗಬಯಸಿದ್ದು ತನ್ನನ್ನೇ ಎಂದು ಹೇಳುತ್ತಾಳೆ. ತರುಣನಿಗೆ ಗಾಬರಿ. `ನೀನಷ್ಟು ಸುಂದರಿಯಾಗಿದ್ದೆ. ನಿನ್ನ ಚೆಲುವೆಲ್ಲ ಎಲ್ಲಿ ಹೋಯ್ತು!?’ ತರುಣಿ ಆತನನ್ನು ಹಿತ್ತಿಲಿಗೆ ಕರೆದುಕೊಂಡು ಹೋಗಿ ಮೂರು ಬಾನಿಗಳನ್ನು ತೋರಿಸಿ, ಮುಚ್ಚಳ ತೆಗೆಯಲು ಹೇಳುತ್ತಾಳೆ. ಅವುಗಳಲ್ಲಿ ಮಲ,ಮೂತ್ರ, ವಮನಗಳಿರುತ್ತವೆ. ಹೇಸಿಗೆಯಿಂದ ಮೂರ್ಛೆ ಹೋಗುವ ತರುಣ ಸಾವರಿಸಿಕೊಂಡಾಗ, ತರುಣಿ ಹೇಳುತ್ತಾಳೆ; `ಸೌಂದರ್ಯ ಶಾಶ್ವತವಲ್ಲ ಎಂದು ಈಗಲಾದರೂ ತಿಳಿಯಿತೆ? ನಾನು ವಾರಗಟ್ಟಲೆ ಉಪವಾಸವಿದ್ದು, ದೇಹದೊಳಗಿನ ಕಲ್ಮಷವೆಲ್ಲ ಹೊರಹಾಕಿ, ಹೀಗಿದ್ದೇನೆ ನೋಡು.’
ನಮ್ಮ ದೇಹ ಸೌಂದರ್ಯದ ಹಣೆಬರಹ ಇಂತಹದ್ದು! ಆದ್ದರಿಂದ ಚೆಲುವಿನ ಆರಾಧನೆಯನ್ನು ಗೀಳಾಗಿಸಿಕೊಳ್ಳಬಾರದು. ಅದೂ ಸೃಷ್ಟಿಯದೊಂದು ವಿಸ್ಮಯವೆಂದು ತಿಳಿದು ಸವಿಯಬೇಕಷ್ಟೆ.
ಚೆಲುವಿನ ಆಸ್ವಾದನೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಅಂಶ. ಸ್ವತಃ ನಾವೇ ಚೆಂದವಿದ್ದರೆ, ಭಗವಂತನಿತ್ತ ಈ ದೇಣಿಗೆಗೆ ಕೃತಜ್ಞರಾಗಿರುತ್ತಾ, ನಮ್ಮ ನಡೆನುಡಿಯಿಂದ ಈ ಚೆಲುವಿಗೆ ದೈವೀಕಳೆ ತುಂಬುವತ್ತ ಹೆಜ್ಜೆಗಳನ್ನಿಡಬೇಕು. ಅದು ಬಿಟ್ಟು ಗರ್ವ ತಳೆದರೆ ಎಂತಹಾ ಸೌಂದರ್ಯವೂ ಕುರೂಪವಾಗಿ ಕಾಣುವುದು. ಜನರನ್ನು ನಮ್ಮಿಂದ ದೂರವಿಡುವುದು.
ಇತರರ ಚೆಲುವಿನ ವಿಷಯದಲ್ಲೂ ಅಷ್ಟೇ. ಅಂದವನ್ನು ಆರಾಧಿಸಿ. ಮೆಚ್ಚಿಕೊಳ್ಳಿ. ಆದರೆ ಆ ಕಾರಣದಿಂದಲೇ ಅಂದಗಾರರ ದಾಸರಾಗಬೇಡಿ. ಎಂತಹ ಚೆಲುವ ಚೆಲುವೆಯಿದ್ದರೂ ಮತ್ತೊಂದೆಡೆ ಅವರಿಗಿಂತ ಸುಂದರವಾದ ವ್ಯಕ್ತಿ ಇದ್ದೇ ಇರುತ್ತಾರೆ. ಯಾರ ಸೌಂದರ್ಯವೂ ಪರಿಪೂರ್ಣವಲ್ಲ, ಶಾಶ್ವತವೂ ಅಲ್ಲ ಅನ್ನುವ ಅರಿವಿದ್ದರೆ ಸಾಕು.
ಸೌಂದರ್ಯ ತ್ಯಾಗಿಗಳು ...
ದೇಹ ಸೌಂದರ್ಯ ಸಾಧನೆಗೆ ಅಡ್ಡಿ. ಇದು ಬಹುತೇಕ ಸಾಧಕರ ಅಭಿಮತ. ಹಾಗೆಂದು ಅವರು ಲೋಕದ ಚೆಲುವಿಗೆ ಮುಖ ತಿರುವಿದವರಲ್ಲ, ಸಾಧನೆಗಾಗಿ ಸ್ವತಃ ತಮ್ಮ ಚೆಲುವನ್ನೆ ಕುಂದಿಸಿಕೊಂಡವರು.
ರಾಣಿಯಾಗಿದ್ದ ಮೀರಾ ಚಿಂದಿ ಸೀರೆಯಲ್ಲಿ ಅಲೆಮಾರಿಯಾಗಿ ಅಲೆದರೆ, ಅಕ್ಕ ಮಹಾದೇವಿ ದೇಹವನ್ನು ಮಾಂಸದ ಮಡಿಕೆ, ಮೂತ್ರದ ಕುಡಿಕೆ ಎಂದು ಸಾರುತ್ತಾ ನಿರ್ವಾಣದಲ್ಲೆ ಓಡಾಡಿದಳು. ಶ್ರೀಮಾತೆ ಶಾರದಾ ದೇವಿ ತಮ್ಮ ಸೌಂದರ್ಯ ಕುಂದಿಸಿಕೊಳ್ಳಲು ಪಂಚತಪವನ್ನು ಆಚರಿಸಿ ಬತ್ತಿಹೋದರು.
ಝೆನ್ ಬಿಕ್ಖುಣಿ ರ್ಯೊನೆನ್‍ಳಿಗೆ ಅವಳ ಸೌಂದರ್ಯವನ್ನೆ ಮುಂದಿಟ್ಟುಕೊಂಡು ಶಿಷ್ಯತ್ವ ನಿರಾಕರಿಸಲಾಗಿತ್ತು. ನೊಂದ ರ್ಯೊನೆನ್, ಕಾದ ಕಬ್ಬಿಣದ ಸಲಾಕೆಯಿಂದ ಮೈಕೈ ತುಂಬ ಬರೆಗಳನ್ನೆಳೆದುಕೊಂಡಳು. ರೂಪ ಕಳೆದುಕೊಂಡಳು. ಮುಂದೆ ಶ್ರೇಷ್ಠ ಭಿಕ್ಖುಣಿಯಾದಳು.
ನಮ್ಮ ಅವೈಯಾರ್ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ಈಕೆ ಪರಮ ಸುಂದರಿ. ದೀನ ದುರ್ಬಲರ ಸೇವೆ ಮಾಡುವುದೆಂದರೆ ಈಕೆಗೆ ಎಲ್ಲಿಲ್ಲದ ಉತ್ಸಾಹ. ದುರದೃಷ್ಟವಶಾತ್, ತಮಗೆ ಸಮಸ್ಯೆಯಿಲ್ಲದಿದ್ದರೂ ಆಕೆಯನ್ನು ಹತ್ತಿರದಿಂದ ನೋಡುವ, ಮುಟ್ಟುವ ಅವಕಾಶಕ್ಕೆಂದೇ ಜನರು ಅವಳ ಬಳಿ ನೆವ ತೆಗೆದು ಬರತೊಡಗಿದರು. ಬೇಸತ್ತ ಅವೈಯಾರ್ ಸತತ ತಪಸ್ಸಿನಿಂದ ದೇವನನ್ನು ಒಲಿಸಿಕೊಂಡು ಕುರೂಪ ತಾಳಿದಳು. ಉಳಿದ ಜೀವನವನ್ನು ಜೀವಶಿವ ಸೇವೆಗೆ, ಭಗವಂತನ ಧ್ಯಾನಕ್ಕೆ ಮೀಸಲಿಟ್ಟಳು.
ಮಹಿಳಾ ಸಾಧಕಿಯರು ಮಾತ್ರವಲ್ಲ, ಪುರುಷರೂ ಇಂತಹ ಸೌದರ್ಯ ತ್ಯಾಗದಲ್ಲಿ ಹಿಂದೆ ಬಿದ್ದಿಲ್ಲ. ಝೆನ್ ಇತಿಹಾಸದಲ್ಲಿ ಅಂತಹ ಒಬ್ಬ ಬಿಕ್ಖುವಿನ ಉಲ್ಲೇಖವಿದೆ. ಈತ ಭಿಕ್ಷೆಗೆ ಹೋಗುವ ಹಳ್ಳಿಯಲ್ಲಿ ಗೃಹಿಣಿಯೊಬ್ಬಳು ಅವನ ರೂಪಕ್ಕೆ ಸೋಲುತ್ತಾಳೆ. ಭಿಕ್ಷೆ ನೀಡುವಾಗೆಲ್ಲ `ನಿನ್ನ ಕಣ್ಣುಗಳು ಮೋಹಕವಾಗಿವೆ’ ಎನ್ನುತ್ತಿರುತ್ತಾಳೆ. ಒಂದು ದಿನ ಈ ಬಿಕ್ಖು ತನ್ನ ಕಣ್ಣುಗಳನ್ನು ಕಿತ್ತುಕೊಂಡು ಅವನ್ನು ಪಾತ್ರೆಯಲ್ಲಿ ಅವಳ ಬಳಿಗೊಯ್ಯುತ್ತಾನೆ. `ಅಮ್ಮಾ, ಈ ಕಣ್ಣುಗಳು ನಿನಗಿಷ್ಟ ತಾನೆ? ಇವನ್ನು ನೀನೇ ಇಟ್ಟುಕೋ. ನನ್ನ ಸಾಧನೆಗೆ ಅಡ್ಡಿ ಮಾಡಬೇಡ’ ಎಂದು ಆಕೆಗೆ ನಮಸ್ಕರಿಸುತ್ತಾನೆ.
ಭಕ್ತ ವೈಷ್ಣವ ಬಿಲ್ವಮಂಗಳ ಕೂಡ ಹೀಗೆ ಕಣ್ಣುಗಳನ್ನು ಕುರುಡಾಗಿಸಿಕೊಂಡ ಕಥೆ ಇದೆ. ಆದರೆ ಈತನ ಸಂದರ್ಭದಲ್ಲಿ, ತಾನು ಹೆಣ್ಣಿನ ಸೌಂದರ್ಯದ ಮೋಹಕ್ಕೆ ಒಳಗಾಗಬಾರದು ಎನ್ನುವ ಕಾರಣದಿಂದ ಈತ ಕಣ್ಣುಗಳಿಗೆ ಸೂಜಿ ಚುಚ್ಚಿಕೊಳ್ಳುವುದು.