ಶಾಂತಿಯ ಅರ್ಥವನ್ನು ಬಿಂಬಿಸುವ ಅತ್ಯುತ್ತಮ ಚಿತ್ರವನ್ನು ರಚಿಸುವ ಕಲಾವಿದನಿಗೆ ಸಾವಿರ ಹೊನ್ನಿನ ವರಹಗಳನ್ನು ಬಹುಮಾನ ಕೊಡುವುದಾಗಿ ರಾಜನೊಬ್ಬ ಘೋಷಿಸಿದ. ದೇಶದುದ್ದಗಲ ಇದ್ದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಲಾವಿದರು ಬಿಡಿಸಿದ ಚಿತ್ರಗಳನ್ನು ರಾಜ ವೀಕ್ಷಿಸಿದ. ಅವುಗಳ ಪೈಕಿ ಅವನಿಗೆ ಬಹಳ ಮೆಚ್ಚುಗೆ ಆಗಿದ್ದು ಎರಡು ಚಿತ್ರಗಳು ಮಾತ್ರ. ಅವುಗಳಲ್ಲಿ ಒಂದನ್ನು ಆತ ಆಯ್ಕೆ ಮಾಡಬೇಕಿತ್ತು. ಪ್ರಶಾಂತ ಸರೋವರದ ಚಿತ್ರ ಮೊದಲನೆಯದು. ಸರೋವರದ ಸುತ್ತಲೂ ಇದ್ದ ಪರ್ವತಶ್ರೇಣಿಯ ಪರಿಪೂರ್ಣ ಪ್ರತಿಬಿಂಬ ಅದರಲ್ಲಿ ಗೋಚರಿಸುತ್ತಿತ್ತು. ಮೇಲಿದ್ದ ನೀಲಾಕಾಶ ಹಾಗು ಅದರಲ್ಲಿದ ಹತ್ತಿಯ ರಾಶಿಯನ್ನು ಹೋಲುತ್ತಿದ್ದ ಬಿಳಿಮೋಡಗಳೂ ಅವುಗಳ ಪ್ರತಿಬಿಂಬವೂ ಸೊಗಸಾಗಿ ಮೂಡಿಬಂದಿತ್ತು. ಈ ಚಿತ್ರವೇ ಶಾಂತಿಯನ್ನು ಪ್ರತಿನಿಧಿಸುವ ಚಿತ್ರ ಎಂಬುದಾಗಿ ಪ್ರೇಕ್ಷಕರ ಅಭಿಪ್ರಾಯವಾಗಿತ್ತು
ಎರಡನೆಯ ಚಿತ್ರದಲ್ಲಿ ಓರೆಕೋರೆ ಪರ್ವತಗಳನ್ನು ಬಿಡಿಸಲಾಗಿತ್ತು. ಅವುಗಳ ಮೇಲೆ ಕಾರ್ಮೋಡ ಕವಿದ ಆಕಾಶ. ಅಲ್ಲಲ್ಲಿ ಮಿಂಚು ಗೋಚರಿಸುತ್ತಿದ್ದು, ಮಳೆ ಸುರಿಯುತ್ತಿರುವಂತೆ ಹನಿಗಳನ್ನು ಬಿಡಿಸಲಾಗಿತ್ತು. ಪರ್ವತದ ಅಂಚಿನಲ್ಲಿ ಜಲಪಾತವೊಂದು ಧುಮ್ಮಿಕ್ಕುತ್ತಾ ಬೀಳುತ್ತಿತ್ತು. ಅದರ ಹಿಂಬದಿಯಿದ್ದ ಪುಟ್ಟ ಪೊದೆಯೊಂದರ ಗೂಡಿನಲ್ಲಿ ಹಕ್ಕಿಯೊಂದು ಕುಳಿತಿತ್ತು. ಗೂಡಿನಲ್ಲಿ ಮರಿಗಳಿದ್ದವು. ಇಂಥಾ ರುದ್ರ ರಮಣೀಯ ಚಿತ್ರ ಶಾಂತಿಯ ಪ್ರತೀಕವಾಗಿರಲು ಹೇಗೆ ಸಾಧ್ಯ? ರಾಜನು ಮೊದಲನೇ ಚಿತ್ರವನ್ನೇ ಆಯ್ಕೆ ಮಾಡುವನೆಂದು ಜನ ಭಾವಿಸಿದರು.
ಆದರೆ ರಾಜ ಎರಡನೆಯದನ್ನು ಆರಿಸಿದ. ಶಾಂತಿ ಅನ್ನುವುದು ಒಂದು ಸ್ಥಿತಿ. ಎರಡನೇ ಚಿತ್ರದಲ್ಲಿನ ಹಕ್ಕಿ ಅದರ ಸಶಕ್ತ ಅಭಿವ್ಯಕ್ತಿ ಅನ್ನುವುದು ಅವನ ಅಭಿಮತವಾಗಿತ್ತು.