ಮೂವರು ಮಾದರಿ ಮಾತೆಯರು : ಪುರಾಣದ ಪುಟಗಳಿಂದ…

 

ಒಬ್ಬ ತಾಯಿ ಗರ್ಭದಲ್ಲೇ ಮಗುವಿಗೆ ಸಂಸ್ಕಾರ ನೀಡಲು ಬಯಸಿದರೆ, ಮತ್ತೊಬ್ಬ ತಾಯಿ, ತನ್ನ ಎಳೆಯ ಕಂದನಿಗೆ ಸತ್ಯಸಂಧತೆಯ ಮಹಾಪಾಠವನ್ನು ಸರಳವಾಗಿ ಬೋಧಿಸುತ್ತಾಳೆ. ಇನ್ನೂ ಒಬ್ಬ ತಾಯಿ ಸ್ವತಃ ತನ್ನ ಜೀವನದಿಂದಲೇ ಮಗುವಿಗೆ ಆದರ್ಶವಾಗುತ್ತಾಳೆ!

maa

ತಾಯಿ ತನ್ನ ಮಗುವಿನ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೂ ಸಹಕರಿಸುತ್ತಾಳೆ. ಈ ನಿಟ್ಟಿನಲ್ಲಿ ಸ್ವತಃ ಅವಳ ಚಿಂತನೆಗಳು, ನಡೆನುಡಿಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಗರ್ಭ ಧರಿಸಿದಾಗಿನಿಂದ ಮೊದಲ ನಾಲ್ಕು ವರ್ಷಗಳ ತನಕ ತಾಯಿಯಾದವಳು ಯಾವ ಬಗೆಯ ಸಂಸ್ಕಾರ ನೀಡುತ್ತಾಳೋ ಅದು ಮಗುವಿನ ಜೀವಮಾನದ ಉದ್ದಕ್ಕೂ ಜೊತೆ ಸಾಗುತ್ತದೆ. ಈ ಕಾರಣದಿಂದಲೇ ತಾಯಿಯ ಸ್ಥಾನಕ್ಕೆ ಅಷ್ಟೊಂದು ಗಂಭೀರವಾದ ಜವಾಬ್ದಾರಿಯನ್ನು ವಹಿಸಲಾಗಿರುವುದು.

ಶಿಕ್ಷಕ ಎಂದರೆ ಶಿಕ್ಷಣವನ್ನು ನೀಡುವವನು. ಲಭ್ಯವಿರುವ ಜ್ಞಾನವನ್ನು ಶಿಷ್ಯರಿಗೆ ತಲುಪಿಸುವವನು. ಶಿಕ್ಷಕ ಒಂದು ಬಗೆಯಿಂದ ಜ್ಞಾನ ಸಂವಹನದ ಮಾಧ್ಯಮದಂತೆ. ಮಾಧ್ಯಮ ಸಬಲವಾಗಿದ್ದಷ್ಟೂ ಸಂವಹನ ಕ್ರಿಯೆ ಸರಾಗವಾಗಿ ಸಾಗುತ್ತದೆ. ತಾಯಿಯಾದವಳು ಲೋಕ ಜ್ಞಾನವನ್ನು ಮಗುವಿಗೆ ದಾಟಿಸುವವರಲ್ಲಿ ಮೊದಲಿಗಳು. ಆದ್ದರಿಂದ ಆಕೆಯೇ ಮೊದಲ ಶಿಕ್ಷಕಿ, ಮಗುವಿನ ಮೊದಲ ಗುರು.
ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಜಗತ್ತಿಗೆ ಮಾದರಿ ಮಕ್ಕಳನ್ನು ನೀಡಿದ ಮಹಾ ತಾಯಂದಿರು ಪುರಾಣ – ಇತಿಹಾಸಗಳಲ್ಲಿ ಆಗಿಹೋಗಿದ್ದಾರೆ. ಒಬ್ಬ ತಾಯಿ ಗರ್ಭದಲ್ಲೇ ಮಗುವಿಗೆ ಸಂಸ್ಕಾರ ನೀಡಲು ಬಯಸಿದರೆ, ಮತ್ತೊಬ್ಬ ತಾಯಿ, ತನ್ನ ಎಳೆಯ ಕಂದನಿಗೆ ಸತ್ಯಸಂಧತೆಯ ಮಹಾಪಾಠವನ್ನು ಸರಳವಾಗಿ ಬೋಧಿಸುತ್ತಾಳೆ. ಇನ್ನೂ ಒಬ್ಬ ತಾಯಿ ಸ್ವತಃ ತನ್ನ ಜೀವನದಿಂದಲೇ ಮಗುವಿಗೆ ಆದರ್ಶವಾಗುತ್ತಾಳೆ! 

ಅಂತಹಾ ಮೂವರು ಮಾದರಿ ಮಾತೆಯರ ಬದುಕಿನ ಚಿತ್ರಣ ನೀಡುವ ಚಿಕ್ಕ ತುಣುಕುಗಳು ಇಲ್ಲಿವೆ:

ಅಭಿಮನ್ಯುವಿನ ತಾಯಿ
ಅಭಿಮನ್ಯುವಿನ ತಾಯೆ ಸುಭದ್ರೆ. ಈಕೆ ಕೃಷ್ಣನ ತಂಗಿ, ಅರ್ಜುನನ ಹೆಂಡತಿ. ಅವಳು ಗರ್ಭಿಣಿಯಾಗಿದ್ದಾಗ ತನಗೆ ಹುಟ್ಟುವ ಮಗು ಸದ್ಗುಣ ಸಂಪನ್ನನಾಗಿರಬೇಕೆಂದು ಪೂರಕ ಸಂಸ್ಕಾರಗಳನ್ನು ನಡೆಸುತ್ತ ಇರುತ್ತಾಳೆ. ಅವುಗಳಲ್ಲಿ ಅಧ್ಯಯನ, ಶ್ರವಣಗಳೂ ಸೇರಿರುತ್ತವೆ. ಒಮ್ಮೆ ಆಕೆಯ ಅಣ್ಣ ಕೃಷ್ಣ ಭೇಟಿಗೆ ಬಂದಾಗ ತನೆಗೆ ಯುದ್ಧ ವಿದ್ಯೆಯನ್ನು ಬೋಧಿಸಬೇಕೆಂದು ಕೇಳಿಕೊಳ್ಳುತ್ತಾಳೆ. ತಾನು ಅದನ್ನು ತಿಳಿದಿದ್ದರೆ ಮಗುವಿನ ಎಳವೆಯಲ್ಲಿಯೇ ಅದನ್ನು ತಿಳಿಸಿಕೊಡಬಹುದು ಎನ್ನುವ ಮುಂದಾಲೋಚನೆ ಸುಭದ್ರೆಯದು. ಅದರಂತೆ ಶ್ರೀ ಕೃಷ್ಣ ಚಕ್ರವ್ಯೂಹವನ್ನು ಭೇದಿಸುವ ಕ್ರಮವನ್ನು ಅವಳಿಗೆ ವಿವರಿಸುತ್ತ ಹೋಗುತ್ತಾನೆ. ಈ ನಡುವೆ ತುಂಬು ಗರ್ಭಿಣಿಯಾಗಿದ್ದ ಸುಭದ್ರೆಗೆ ಆಯಾಸದಿಂದ ಮಂಪರು ಹತ್ತುತ್ತದೆದಿದನ್ನು ಗಮನಿಸದ ಕೃಷ್ಣ ಯುದ್ಧ ಕ್ರಮವನ್ನು ವಿವರಿಸುತ್ತ ಸಾಗುತ್ತಾನೆ. ಒಂದು ಹಂತದಲ್ಲಿ ಎಳೆ ದನಿಯೊಂದು ಹೂಂಗುಟ್ಟುತ್ತಿರುವಂತೆ ಕೇಳುತ್ತದೆ. ಹೊಟ್ಟೆಯೊಳಗಿನ ಮಗು ತಾಯಿಯ ಇಂದ್ರಿಯಗಳ ಮೂಲಕ ತಾನು ಅದನ್ನು ಕೇಳಿಸಿಕೊಳ್ಳುತ್ತಿರುತ್ತದೆ! ಹೀಗೆ ತನ್ನ ಮಗ ಸಂಸ್ಕಾರವಂತನಾಗಬೇಕೆಂದು ಬಯಸಿದ ಸುಭದ್ರೆ ಪರೋಕ್ಷವಾಗಿ ಅಭಿಮನ್ಯುವಿಗೆ ಶಿಕ್ಷಕಿಯಾಗುತ್ತಾಳೆ.

ಸತ್ಯವಂತೆ ಜಾಬಾಲಾ
ಆಶ್ರಮವೊಂದರಲ್ಲಿ ಜಾಬಾಲಾ ಎಂಬ ಋಷಿಕುಮಾರಿಯೊಬ್ಬಳು ಇರುತ್ತಾಳೆ. ಅನಾಥೆಯಾದ ಈಕೆ ಬ್ರಾಹ್ಮಣರ ಮನೆಗಳಲ್ಲಿ ಕೆಲಸ ಮಾಡಿಕೊಂಡು ಜೀವಯಾಪನೆ ಮಾಡುತ್ತಿರುತ್ತಾಳೆ. ಮದುವೆಯಾಗದೆ ಇದ್ದ ಆಕೆಗೊಬ್ಬ ಮಗನೂ ಜನಿಸುತ್ತಾನೆ. ಅವನೂ ಆಶ್ರಮಗಳ ವಾತಾವರಣದಲ್ಲೇ ಆಡಿಕೊಂಡು ಬೆಳೆಯುತ್ತಾನೆ. ಒಮ್ಮೆ ತನ್ನ ವಾರಗೆಯವರು ಗುರುಕುಲಕ್ಕೆ ವಿದ್ಯಾರ್ಜನೆಗೆಂದು ಹೊರಟುನಿಂತಾಗ ತನಗೂ ಅಲ್ಲಿಗೆ ಹೋಗಬೇಕು ಎನ್ನಿಸುತ್ತದೆ. ಉಳಿದ ಹುಡುಗರೊಟ್ಟಿಗೆ ತಾನೂ ಗೌತಮನ ಆಶ್ರಮಕ್ಕೆ ಹೋಗುತ್ತಾನೆ. ಎಲ್ಲರನ್ನು ವಿಚಾರಿಸುವಂತೆ ಗೌತಮ ಮುನಿ ಅವನ ಗೋತ್ರವನ್ನೂ ಕೇಳುತ್ತಾನೆ. ತನ್ನ ಹುಟ್ಟಿನ ಬಗೆಗಾಗಲೀ ಗೋತ್ರವಾಗಲೀ ಗೊತ್ತಿಲ್ಲದ ಆತ ತಾಯಿಯ ಬಳಿ ಬಂದು `ನನ್ನ ಗೋತ್ರ ಯಾವುದು?’ ಎಂದು ವಿಚಾರಿಸುತ್ತಾನೆ.
ಅದಕ್ಕೆ ಜಾಬಾಲೆಯು, `ನಾನು ಹಲವಾರು ಮನೆಗಳಲ್ಲಿ ಕೆಲಸ ಮಾಡುತ್ತಾ ಇದ್ದ ಅವಧಿಯಲ್ಲಿ ಬಸುರಾದೆ. ನನಗೆ ಹಲವು ಒಡೆಯರಿದ್ದರು. ಹೀಗಾಗಿ ನಿನ್ನ ತಂದೆ ಯಾರೆಂದು ನನಗೆ ಗೊತ್ತಿಲ್ಲ. ನೀನು ಗುರುಗಳ ಬಳಿ ಅದನ್ನೇ ಹೇಳು.’ ಎನ್ನುತ್ತಾಳೆ.
ಹುಡುಗ ನೇರವಾಗಿ ಗುರುಗಳ ಬಳಿ ಬಂದು ಅಮ್ಮ ಹೇಳಿದ್ದನ್ನು ಹೇಳುತ್ತಾನೆ. ಗೌತಮ ಅವನ ಸತ್ಯಸಂಧತೆಯನ್ನು ಮೆಚ್ಚುವುದು ಮಾತ್ರವಲ್ಲದೆ, ಅದನ್ನು ಹೇಳಿಕೊಟ್ಟ ತಾಯಿಯ ಬಗೆಗೂ ಗೌರವದ ಮಾತುಗಳನ್ನಾಡುತ್ತಾರೆ. ಅವನಿಗೆ ಸತ್ಯಕಾಮ ಎಂದು ಹೆಸರಿಟ್ಟು, ಜಾಬಾಲಾಳ ಮಗನಾದ್ದರಿಂದ ಜಾಬಾಲಿ ಎಂಬ ಉಪನಾಮವನ್ನೂ ಕೊಡುತ್ತಾರೆ. ಹೀಗೆ ಅಮ್ಮನ ಹೆಸರಿನಿಂದ ಒಬ್ಬ ಋಷಿ ರೂಪುಗೊಳ್ಳುತ್ತಾನೆ. ಆತನ ಹೆಸರು ಸತ್ಯಕಾಮ ಜಾಬಾಲಿ ಎಂದಾಗುತ್ತದೆ.

ಅಸುರ ಪತ್ನಿ ಕಯಾದು
ಕಯಾದು ಹಿರಣ್ಯಕಷಿಪುವಿನ ಹೆಂಡತಿ. ಹಿರಣ್ಯಕಷಿಪು ಒಬ್ಬ ಅಸುರ ದೈತ್ಯ. ಅವನು ದೇವೇಂದ್ರನನ್ನೂ ಮೂರು ಲೋಕಗಳನ್ನೂ ಗೆದ್ದುಕೊಳ್ಳಬೇಕೆಂಬ ಬಯಕೆಯಿಂದ ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಲು ತೆರಳುತ್ತಾನೆ. ಈ ಸಮಯದಲ್ಲಿ ದೇವತೆಗಳು ತುಂಬು ಗರ್ಭಿಣಿಯಾಗಿದ್ದ ಕಯಾದುವನ್ನು ಅಪಹರಿಸುತ್ತಾರೆ. ನಾರದರು ಆಕೆಯನ್ನು ರಕ್ಷಿಸಿ ತಮ್ಮ ಆಶ್ರಮದಲ್ಲಿರಿಸಿಕೊಳ್ಳುತ್ತಾರೆ. ಆಶ್ರಮದ ವಾತಾವರಣದಿಂದ ಪ್ರಭಾವಿತಳಾಗುವ ಕಯಾದು ತಾನೂ ನಾರಾಯಣ ಸ್ಮರಣೆಯಲ್ಲಿ ತೊಡಗಿಕೊಳ್ಳುತ್ತಾಳೆ. ತನ್ನ ಮಗನೂ ಹೀಗೆಯೇ ಸಂಸ್ಕಾರವಂತನಾಗಲಿ ಎಂದು ಆಶಿಸುತ್ತಾ ಹಿರಣ್ಯಕಷಿಪು ಮರಳುವವರೆಗೂ ನಾರಾಯಣ ಮಂತ್ರ ಜಪ ನಡೆಸುತ್ತ ಇರುತ್ತಾಳೆ. ಪರಿಣಾಮವಾಗಿ ಅದ್ವಿತೀಯ ಭಕ್ತ, ಮಹಾಭಾಗವತ ಪ್ರಹ್ಲಾದನ ಜನನವಾಗುತ್ತದೆ. ಮುಂದೆ ಈತ ಭಕ್ತ ಪ್ರಹ್ಲಾದನೆಂದೇ ಖ್ಯಾತನಾಗುತ್ತಾನೆ.
ಹೀಗೆ ಕಯಾದು ಅಸುರ ಪತ್ನಿಯಾಗಿದ್ದರೂ ತನ್ನ ಮಗನಲ್ಲಿ ದಿವ್ಯ ಗುಣಗಳನ್ನು ಬಿತ್ತಿ ಮಾದರಿಯಾಗಿ ಉಳಿಯುತ್ತಾಳೆ.

 

Leave a Reply