ಕೃಷ್ಣನು ರಾಮನ ಸೇತುವೆಯನ್ನು ಕಟ್ಟಿದ್ದು : ಕೃಷ್ಣನ ಬಾಲ ಲೀಲೆಗಳು #3

krsna

ದೊಂದು ಬಿರು ಬೇಸಗೆಯ ಮಧ್ಯಾಹ್ನ. ರಾಧೆ ಮತ್ತವಳ ಗೆಳತಿಯರಾದ ಲಲಿತಾ ಹಾಗೂ ವಿಶಾಖಾ ವೃಂದಾವನದ ಕಡೆ ಹೊರಟಿದ್ದರು. ಅವರು ತಮ್ಮ ಅಮ್ಮಂದಿರು ಗಡಿಗೆಗಳಲ್ಲಿ ತುಂಬಿಕೊಟ್ಟಿದ್ದ ಹಾಲನ್ನು ಗೋವರ್ಧನದಲ್ಲಿ ಮಾರಾಟ ಮಾಡಿ ಮರಳುತ್ತಿದ್ದರು.

ಅವರು ಮೂವರೂ ಸರೋವರದ ಬಳಿ ತಲುಪುವ ವೇಳೆಗಾಗಲೇ ಬಿಸಿಲಿನ ಝಳಕ್ಕೆ ಸುಸ್ತಾಗಿ ಹೋಗಿದ್ದರು. ರಾಧೆಯು ಬೆವರು ಒರೆಸಿಕೊಳ್ಳುತ್ತಾ “ಈ ಸರೋವರಕ್ಕೊಂದು ಸೇತುವೆ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು! ಇದನ್ನು ಸುತ್ತುವರೆದುಕೊಂಡು ಅಷ್ಟು ದೂರ ನಡೆಯೋದು ತಪ್ಪುತ್ತಿತ್ತು” ಅಂದಳು. ಅವಳ ಗೆಳತಿಯರು ಉತ್ತರಿಸುವ ಮೊದಲೇ ಅಲ್ಲೊಂದು ದೂಳಿನ ಮೋಡ ಕವಿದುಕೊಂಡಿತು. ಅವರು ಕಣ್ಣುಜ್ಜಿ ತೆರೆಯುವ ವೇಳೆಗೆ ತುಂಟ ಬೆಣ್ಣೆಕಳ್ಳನಾದ ಕೃಷ್ಣ ನಿಂತಿದ್ದು ಕಂಡಿತು.

“ನಾನು ಈಗಿಂದೀಗಲೇ ಒಂದು ಸೇತುವೆಯನ್ನು ಕಟ್ಟುತ್ತೇನೆ, ಮತ್ತು ಈ ಹುಡುಗಿಯರು ಆದಷ್ಟು ಬೇಗನೆ ತಮ್ಮ ಮನೆಗಳನ್ನು ಸೇರುತ್ತಾರೆ” ಎಂದು ಪುಟ್ಟ ಕೃಷ್ಣ ಹೇಳಿದಾಗ ಆ ಮೂವರೂ ಜೋರಾಗಿ ನಕ್ಕುಬಿಟ್ಟರು. “ಇಷ್ಟು ಚಿಕ್ಕವ ನೀನು, ನೀನು ಹೇಗೆ ತಾನೆ ಈ ದೊಡ್ಡ ಸರೋವರಕ್ಕೆ ಸೇತುವೆ ಕಟ್ಟಬಲ್ಲೆ!?” ಎಂದು ಕೇಳಿದಳು ರಾಧೆ.
“ಮೊದಲೇ ನಾವು ಸುಸ್ತಾಗಿದ್ದೇವೆ. ನಮ್ಮನ್ನ ರೇಗಿಸಬೇಡ ಕೃಷ್ಣ!” ಲಲಿತೆಯು ಸೊಂಟದ ಮೇಲೆ ಕೈಯಿಟ್ಟು ಗದರಿದಳು.
ಕೃಷ್ಣ ನಕ್ಕು ಏನನ್ನೋ ನೆನೆದವರಂತೆ ಹೇಳತೊಡಗಿದ; “ನನ್ನ ಹಿಂದಿನ ಜನ್ಮದಲ್ಲಿ ನಾನು ರಾಮಚಂದ್ರನಾಗಿದ್ದೆ. ದುಷ್ಟ ರಾವಣ ನನ್ನ ಸುಂದರಿಯಾದ ಹೆಂಡತಿ ಸೀತೆಯನ್ನು ಅಪಹರಿಸಿದ್ದ. ನಾನು ವಾನರ ರಾಜ ಸುಗ್ರೀವ ಮತ್ತವನ ಸೇನೆಯ ಸಹಾಯದೊಂದಿಗೆ ಸಮುದ್ರದುದ್ದಕ್ಕೂ ಸೇತುವೆ ನಿರ್ಮಿಸಿ, ಲಂಕೆಗೆ ತೆರಳಿ ರಾವಣನೊಂದಿಗೆ ಯುದ್ಧ ಮಾಡಿದೆ. ಅವನನ್ನು ಕೊಂದು ನನ್ನ ಹೆಂಡತಿಯನ್ನು ಮರಳಿ ಕರೆತಂದೆ”.

“ರಾಮಾಯಣದ ಕಥೆ ನಮಗೆಲ್ಲ ಗೊತ್ತಿದೆ. ಅಂಥಾ ಮರ್ಯಾದಾ ಪುರುಷೋತ್ತಮ ರಾಮ ನೀನಾಗಿದ್ದೆ ಎಂದು ನಮ್ಮನ್ನು ನಂಬಿಸೋಕೆ ಬರಬೇಡ. ಅವನೆಲ್ಲಿ, ಮಹಾ ತಂಟೆಕೋರ ನೀನೆಲ್ಲಿ!? ನೀನೊಬ್ಬ ಬೆಣ್ಣೆಕಳ್ಳನಷ್ಟೆ!” ಎಂದರು ಗೋಪಿಕೆಯರು.
“ಸರಿ ಹಾಗಾದರೆ. ನೀವು ಹಾಗೇ ತಿಳಿದುಕೊಂಡಿರಿ. ನಾನೇನು ಮಾಡಬಲ್ಲೆ ಎಂದು ನಿನಗೆ ತೋರಿಸ್ತೀನಿ!” ಎನ್ನುತ್ತ ಕೃಷ್ಣ ತನ್ನ ಕೊಳಲನ್ನು ತೆಗೆದು ಊದತೊಡಗಿದ.

ಇದ್ದಕ್ಕಿದ್ದಂತೆ ಸುತ್ತ ಮುತ್ತಲಿನ ಮರಗಳಲ್ಲೆಲ್ಲ ಮಂಗಗಳು ತುಂಬಿಕೊಂಡವು. ಅವು ಕೆಳಗಿಳಿದು ಬಂದು ಕೃಷ್ಣನ ಸುತ್ತ ಕುಳಿತುಕೊಂಡವು. ಕೃಷ್ಣ ಅವಕ್ಕೆ ತ್ರೇತಾಯುಗದಲ್ಲಿ ಮಾಡಿದಂತೆಯೇ ಈಗಲೂ ಕಲ್ಲುಗಳನ್ನು ತಂದು ಸೇತುವೆ ಕಟ್ಟಲು ಆದೇಶ ನೀಡಿದ. ಆಗ ಆ ವಾನರರು ಬಂಡೆಗಲ್ಲುಗಳ ಮೇಲೆ ‘ರಾಮ’ ಎಂದು ಬರೆದು ಸಮುದ್ರಕ್ಕೆ ಹಾಕಿದಾಗ ಅವು ಮುಳುಗದೆ ತೇಲಿದ್ದವು. ಹಾಗೆಯೇ ಮಂಗಗಳೀಗ ಕಲ್ಲುಗಳ ಮೇಲೆ ‘ಕೃಷ್ಣ’ ಎಂದು ಬರೆದು ಸರೋವರದಲ್ಲಿ ಹಾಕಿದವು. ಈ ಕಲ್ಲುಗಳೂ ಅಷ್ಟೇ… ಮುಳುಗದೆ ತೇಲತೊಡಗಿದವು.

ರಾಧೆ ಮತ್ತವಳ ಗೆಳತಿಯರು ಆಶ್ಚರ್ಯದಲ್ಲಿ ಮುಳುಗಿಹೋದರು. ಅವರಂತೂ ಒಂದು ಚಿಕ್ಕ ಕಲ್ಲು ಕೂಡ ತೇಲುವುದನ್ನು ಆವರೆಗೆ ನೋಡಿರಲಿಲ್ಲ. ಇನ್ನು ಈ ಮಹಾ ಬಂಡೆಗಳ ಮಾತೇನು?
ಸೂರ್ಯ ಮುಳುಗುವ ಹೊತ್ತಿನೊಳಗೆ ಸೇತುವೆ ಸಿದ್ಧವಾಯ್ತು. ಹುಡುಗಿಯರು ಈ ಹೊಸ ಸೇತುವೆಯ ಮೇಲೆಯೇ ನಡೆದು ಊರು ಸೇರಿದರು. ಅವರ ಕಣ್ಣೆದುರಿಗೇ ಕೃಷ್ಣ ಸೇತುವೆ ನಿರ್ಮಿಸಿದ್ದರೂ ಅವರಿಂದ ಅದನ್ನು ನಂಬಲಾಗಲಿಲ್ಲ. ಪುಟ್ಟ ಪೋರ, ಬೆಣ್ಣೆಕಳ್ಳ ಕೃಷ್ಣ, ಮಹಾ ಉಪದ್ರವಕಾರಿ ಮಂಗಗಳ ಜೊತೆ ಸೇರಿಕೊಂಡು ಇದನ್ನು ಹೇಗೆ ಸಾಧಿಸಿದ ಎಂದು ಅಚ್ಚರಿಪಡುತ್ತಲೇ ಅವರು ಮನೆ ತಲುಪಿದರು.

 

Leave a Reply