ಹೆರಾಕ್ಲೀಸ್ ಅಯೊಲಾಸನೊಡನೆ ಸೇರಿ ಹೈಡ್ರಾ ಸರ್ಪದ ತಲೆಗಳನ್ನು ಕಡಿದು, ಕೊಂದುಹಾಕಿದ. ಈ ಮೂಲಕ ಯೂರಿಸ್ತ್ಯೂಸ್ ನೀಡಿದ ಎರಡನೇ ಪರೀಕ್ಷೆಯನ್ನೂ ಗೆದ್ದುಕೊಂಡ .
(ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ)
ಹೆರಾಕ್ಲೀಸನ ಮೇಲೆ ಮತ್ಸರ ತಾಳಿದ್ದ ಹೀರಾದೇವಿಯು ಯೂರಿಸ್ತ್ಯೂಸನ ಜೊತೆ ಸೇರಿ ಪಿತೂರಿ ಹೂಡಿದ್ದಳು. ಯೂರಿಸ್ತ್ಯೂಸನ ಗುಲಾಮನಾಗಿದ್ದ ಹೆರಾಕ್ಲೀಸನಿಗೆ 12 ಕಠಿಣತರ ಕೆಲಸಗಳನ್ನು ಕೊಡುವಂತೆ ಸೂಚಿಸಿದ್ದಳು. ಅದರಂತೆ ಮೊದಲನೆಯದಾಗಿ ನೆಮಿಯಾದ ಸಿಂಹವನ್ನು ಕೊಲ್ಲಬೇಕು ಎನ್ನುವುದಾಗಿತ್ತು. ಅದನ್ನು ಹೆರಾಕ್ಲೀಸ್ ನಿರಾಯಾಸವಾಗಿ ನೆರವೇರಿಸಿದ. ಈಗ, ಎರಡನೆಯದಾಗಿ ಯೂರಿಸ್ತ್ಯೂಸ್ ಹೈಡ್ರಾ ಸರ್ಪವನ್ನು ಕೊಲ್ಲುವಂತೆ ಆದೇಶ ನೀಡಿದ.
ಹೈಡ್ರಾ ಸರ್ಪವು ನೆಮಿಯಾದ ಸಿಂಹದ ಸೋದರ ಸಂಬಂಧಿ. ಟೈಫಾನ್ ಮತ್ತು ಎಕಿಡ್ನಾ ಪಿಶಾಚಿಯ ಸಂತಾನ. ಈ ಸರ್ಪವು ಮೈಕಿನೀ ನಗರದ ನೈರುತ್ಯ ದಿಕ್ಕಿನಲ್ಲಿದ್ದ ಲೆರ್ನಾ ಎಂಬಲ್ಲಿ ಜೌಗು ಪ್ರದೇಶದ ಕೆಳಗಿನ ಗುಹೆಯಲ್ಲಿ ವಾಸಿಸುತ್ತಿತ್ತು. ನಾಯಿಯ ದೇಹ ಹೊಂದಿದ್ದ ಹೈಡ್ರಾ ಸರ್ಪಕ್ಕೆ ಹಾವಿನಂತೆ ಉದ್ದನೆಯ ಕೊರಳುಗಳೂ ಒಂಭತ್ತು ಹೆಡೆಗಳೂ ಇದ್ದವು. ಅವುಗಳಲ್ಲೊಂದು ಸಾವೇ ಇಲ್ಲದ ಅಮರ್ತ್ಯ ಹೆಡೆ. ಅದು ಚಿನ್ನದ್ದು.
ಈ ಹೈಡ್ರಾ ಸರ್ಪ ಆಗಾಗ ತನ್ನ ಗುಹೆಯಿಂದ ಹೊರಗೆ ಬರುತ್ತಿತ್ತು. ಜೌಗು ಪ್ರದೇಶದಲ್ಲಿ ಗುಹೆ ಇದ್ದುದರಿಂದ ಕಾಲು ಹೂತುಹೋಗುತ್ತದೆ ಎಂದು ಯಾರೂ ಅಲ್ಲಿಗೆ ಬರುವ ಸಾಹಸ ಮಾಡುತ್ತಿರಲಿಲ್ಲ. ಆ ಸರ್ಪ ಉಸಿರಾಡುವ ವಿಷ ಗಾಳಿ ಸೋಕಿದರೆ ಎಂಥಾ ಜೀವಿಯೂ ಕ್ಷಣಾರ್ಧದಲ್ಲಿ ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತಿತ್ತು. ಕೊರಳನ್ನು ಜೌಗಿನಿಂದಾಚೆ ಚಾಚಿ ಪ್ರಾಣಿ ಪಕ್ಷಿಗಳನ್ನು ಕಬಳಿಸುತ್ತಿತ್ತು. ತನ್ನ ಸಂಬಂಧಿ ನೆಮಿಯಾದ ಸಿಂಹವನ್ನು ಹೆರಾಕ್ಲೀಸ್ ಕೊಂದಿದ್ದಾನೆ ಎಂಬ ಸುದ್ದಿ ಕೇಳಿದ ಹೈಡ್ರಾ ಸರ್ಪವು ಕೋಪದಿಂದ ಫೂತ್ಕರಿಸಿದಾಗ ಸುತ್ತಲಿನ ಎಂಟು ಹಳ್ಳಿಗಳು ವಿಷಜ್ವಾಲೆಗೆ ಸಿಕ್ಕು ಸುಟ್ಟುಹೋಗಿದ್ದವು.
ಇಂಥಾ ಸರ್ಪದೊಡನೆ ಹೆರಾಕ್ಲೀಸ್ ಹೋರಾಡಿ ಕೊಲ್ಲಬೇಕಿತ್ತು. ಅವನೊಂದು ಉಪಾಯ ಹೂಡಿದ. ನೆಮಿಯಾ ಸಿಂಹದ ಚರ್ಮದಿಂದ ಮಾಡಿದ ಕವಚವನ್ನು ಉಟ್ಟು, ಅದರ ತಲೆ ಬುರುಡೆಯ ತಲೆಗವಸನ್ನು ತೊಟ್ಟುಕೊಂಡು, ತನ್ನ ತಮ್ಮ ಇಫಿಕ್ಲೀಸನ ಮಗ ಅಯೊಲಾಸನೊಡನೆ ಸರ್ಪ ಇರುವಲ್ಲಿಗೆ ಬಂದ. ಮೊದಲು ಜೌಗು ಪ್ರದೇಶದ ಹೊರಗೆ ನಿಂತು ಬೆಂಕಿಯ ಬಾಣಗಳನ್ನು ಒಂದೇ ಸಮನೆ ಗುಹೆಯತ್ತ ಬಿಡಲಾರಂಭಿಸಿದ. ತನ್ನ ಜಾಗಕ್ಕೇ ಬಂದು ಪಂಥಾಹ್ವಾನ ನೀಡುತ್ತಿರುವವನು ಯಾರೆಂದು ನೋಡಲು ಸರ್ಪವು ಹೊರಗೆ ಬಂದಿತು. ಹೆರಾಕ್ಲೀಸನನ್ನು ಕಂಡು ಅದರ ಕೋಪ ಮತ್ತಷ್ಟು ಕೆರಳಿತು. ಅವನತ್ತ ತನ್ನ ವಿಷಪೂರಿತ ಉಸಿರನ್ನು ಒಗೆಯಿತು. ಆದರೆ ಹೆರಾಕ್ಲೀಸ್ ಉಸಿರನ್ನು ನಿಯಂತ್ರಿಸಿಕೊಳ್ಳುವ ವಿದ್ಯೆಯನ್ನು ಬಲ್ಲವನಾಗಿದ್ದ. ಅವನು ಕೆಲ ನಿಮಿಷ ಉಸಿರು ಬಿಗಿಹಿಡಿದು ಅದರಿಂದ ತಪ್ಪಿಸಿಕೊಂಡ ಮತ್ತು ಬೆಂಕಿ ಬಾಣಗಳ ದಾಳಿ ಮುಂದುವರೆಸಿದ.
ಈಗ ಹೈಡ್ರಾ ಸರ್ಪಕ್ಕೆ ಜೌಗಿನಿಂದ ಹೊರಗೆ ಬರದೆ ಬೇರೆ ಆಯ್ಕೆಯೇ ಉಳಿಯಲಿಲ್ಲ. ಅದು ಜೌಗನ್ನು ಬಿಟ್ಟು ಹೊರಬಂದ ಕೂಡಲೇ ಹೆರಾಕ್ಲೀಸ್ ಮತ್ಷತ್ಟು ಚುರುಕಾದ. ಸರ್ಪ ಉಸಿರು ಹೊರಬಿಟ್ಟಾಗೆಲ್ಲ ತಾನು ಉಸಿರು ಕಟ್ಟುತ್ತಾ ಅದರ ತಲೆಗಳ ಮೇಲೆ ಹೋಗಿ ನಿಂತು ಅದರ ಐದು ತಲೆಗಳನ್ನು ಕತ್ತರಿಸಿದ. ಆದರೆ ಅವನು ಕತ್ತರಿಸಿದಲ್ಲೆಲ್ಲ ಎರಡೆರಡು ತಲೆಗಳು ಹುಟ್ಟಿಕೊಂಡವು. ಇದನ್ನು ಕಂಡು ಉಪಾಯ ಹೂಡಿದ ಹೆರಾಕ್ಲೀಸ್, ಅಯೊಲಾಸನಿಗೆ ಕೊಳ್ಳಿಗಳ ವ್ಯವಸ್ಥೆ ಮಾಡುವಂತೆ ಹೇಳಿದ. ಅಯೊಲಾಸ್ ಪಕ್ಕದ ಕಾಡಿಗೇ ಬೆಂಕಿ ಇಟ್ಟು ಇಡಿಯ ಮರವನ್ನೇ ಉರಿಯುವ ಕೊಳ್ಳಿಯಾಗಿ ಮಾಡಿ ಹೆರಾಕ್ಲೀಸನಿಗೆ ಕೊಟ್ಟ. ಹೆರಾಕ್ಲೀಸ್ ಹೈಡ್ರಾದ ತಲೆಯನ್ನು ಕತ್ತರಿಸಿದ ಕೂಡಲೇ ಅದರ ಮುಂಡವನ್ನು ಸುಟ್ಟುಬಿಟ್ಟ. ಅಲ್ಲಿ ಹೊಸ ತಲೆ ಹುಟ್ಟಿಕೊಳ್ಳಲಿಲ್ಲ.
ಹೀಗೆ ಎಂಟು ತಲೆಗಳನ್ನು ಕತ್ತರಿಸಿ ಸುಟ್ಟ ಹೆರಾಕ್ಲೀಸನಿಗೆ ಒಂಭತ್ತನೆಯ – ಚಿನ್ನದ ತಲೆಯನ್ನು ಕಡಿಯಲಾಗಲಿಲ್ಲ. ಏಕೆಂದರೆ ಅದು ಅಮರ್ತ್ಯವಾಗಿತ್ತು.
ಒಂಭತ್ತನೆ ತಲೆಯ ಕೊರಳನ್ನು ಬಳಸಿದ ಹೆರಾಕ್ಲೀಸ್, ಅದಕ್ಕೆ ಸುತ್ತಿಕೊಂಡು, ಜೌಗಿನೊಳಗೆ ಬಾಗಿಸಿದ. ಅನಂತರ ಹೈಡ್ರಾ ಸರ್ಪದ ತಲೆಯನ್ನು ಕೊರಳಿನ ಸಮೇತ ಜೈಗಿನಲ್ಲಿ ಹುಗಿದುಹಾಕಿದ. ಸರ್ಪವು ಅಲ್ಲಿಯೇ ಉಸಿರುಗಟ್ಟಿ ತನ್ನಿಂದ ತಾನೇ ಸತ್ತುಹೋಯಿತು.
ಹೀಗೆ ಹೆರಾಕ್ಲೀಟಸ್, ಯೂರಿಸ್ತ್ಯೂಸನು ನೀಡಿದ ಎರಡನೇ ಪರೀಕ್ಷೆಯನ್ನೂ ಗೆದ್ದುಕೊಂಡ. ಹೀರಾ ದೇವಿಯ ಮಾತು ಕೇಳಿಕೊಂಡು ಯೂರಿಸ್ತ್ಯೂಸ್, ಹೆರಾಕ್ಲೀಸನು ಅಯೊಲಾಸನ ಸಹಾಯ ಪಡೆದನೆಂದು ಈ ಸಾಹಸದ ಗೆಲುವಿಗೆ ಮನ್ನಣೆ ನೀಡಲಿಲ್ಲ. ಆದರೆ ಅವನಿಗೆ ಹೈಡ್ರಾದಂಥ ವಿಷಸರ್ಪವನ್ನೂ ಕೊಂದುಹಾಕಿದ ಹೆರಾಕ್ಲೀಸನ ಬಗ್ಗೆ ಭಯ ಮತ್ತಷ್ಟು ಹೆಚ್ಚಾಗಿದ್ದಂತೂ ಹೌದು.
1 Comment