ದೇವರ ಮಹಿಮೆಯನ್ನು ನಿರಾಕರಿಸುವಷ್ಟು ದೊಡ್ಡ ತರ್ಕವಿದೆಯೇ?

Yadira stories

~ ಯಾದಿರಾ

ವಾ-ಐನ್-ಸಾಇಲ್‌ ಮತ್ತು ರಾ-ಉಮ್ ಯಾವತ್ತೂ ಏನನ್ನೂ ಚರ್ಚಿಸುತ್ತಿರಲಿಲ್ಲ. ಹಾಗೆ ನೋಡಿದರೆ ಮರುಭೂಮಿಯ ಮಹಾಯೋಗಿನಿಯ ಶಿಷ್ಯತ್ವ ಪಡೆದ ಆರಂಭದ ದಿನಗಳನ್ನು ಬಿಟ್ಟರೆ ವಾ-ಐನ್ ಸಾಇಲ್ ಪ್ರಶ್ನೆಗಳನ್ನೂ ಕೇಳುತ್ತಿರಲಿಲ್ಲ. ರಾ-ಉಮ್ ಮಾತುಗಳನ್ನು ಅದರ ನಿಜವಾದ ಅರ್ಥದಲ್ಲಿ ಶಿಷ್ಯರಿಗೆ ವಿವರಿಸುವ ಸಾಮರ್ಥ್ಯವಿದ್ದದ್ದು ವಾ-ಐನ್‌ಗೆ ಮಾತ್ರ ಎಂದು ಇತರ ಶಿಷ್ಯರು ಭಾವಿಸಿದ್ದರು.

ತರ್ಕಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದ ದಕ್ಷಿಣದ ಕಡೆಯವನೊಬ್ಬ ಆಗಷ್ಟೇ ರಾ-ಉಮ್ ಆಶ್ರಮಕ್ಕೆ ಸೇರಿದ್ದ. ಎಲ್ಲವನ್ನೂ ತಾರ್ಕಿಕವಾಗಿ ಸಾಬೀತು ಮಾಡುವುದು ಅವನಿಗೊಂದು ಗೀಳಾಗಿತ್ತು.

ಸಂಜೆಯ ಧ್ಯಾನ ಪಾಠಕ್ಕಾಗಿ ರಾ-ಉಮ್ ತನ್ನ ಪಾನೀಯದ ಬುರುಡೆಯೊಂದಿಗೆ ಬಂದು ಕಟ್ಟೆಯ ಮೇಲೆ ಕುಳಿತಾಗ ಈ ತರ್ಕಶಾಸ್ತ್ರಿ ಒಂದು ಪ್ರಶ್ನೆಯನ್ನೆಸೆದ.
‘ದೇವರ ಮಹಿಮೆಯನ್ನು ನಿರಾಕರಿಸುವಷ್ಟು ದೊಡ್ಡ ತರ್ಕವಿದೆಯೇ?’

ತನ್ನೊಂದಿಗೆ ತರ್ಕಯುದ್ಧಕ್ಕಾಗಿ ಈ ಶಿಷ್ಯ ಆಹ್ವಾನಿಸುತ್ತಿದ್ದಾನೆಂದು ರಾ-ಉಮ್‌ಗೆ ಅರ್ಥವಾಯಿತು. ಅವಳು ವಾ-ಐನ್ ಕಡೆ ನೋಡಿದಳು.

ಸೇವಿಸುವುದಕ್ಕೆಂದು ಎತ್ತಿಕೊಂಡಿದ್ದ ಬುರುಡೆಯನ್ನು ಪಕ್ಕಕ್ಕೆ ಇಟ್ಟು ವಾ-ಐನ್ ಹೇಳಿದ ‘ದೇವರ ಮಹಿಮೆಯನ್ನು ತರ್ಕಬದ್ಧವಾಗಿ ಮಂಡಿಸುವ ಭಕ್ತನೊಂದಿಗೆ ಮಾತನಾಡುವುದು’

ರಾ-ಉಮ್ ಪಾನೀಯವನ್ನು ಆಸ್ವಾದಿಸುತ್ತಾ ಧ್ಯಾನ ಮಗ್ನಳಾದಳು

2 Comments

Leave a Reply