ಭಾನುವಾರದ ಓದಿಗೆ ನಾಲ್ಕು ಚೆ ತ್ಸು ಯಾಂಗ್ ಪದ್ಯಗಳು
~ 1 ~
ಯಾರಾದರೂ ಬೇಕಾಗೋದಕ್ಕೆ ಕಾರಣಗಳು ಇರಬೇಕಿಲ್ಲ
ಮತ್ತು
ಯಾರಾದರೂ ಬೇಡವಾಗೋದಕ್ಕೆ ಕಾರಣಗಳು ಇರಬೇಕಾಗ್ತವೆ.
ಸಂಬಂಧಗಳಲ್ಲಿ ನಾವು ದುಃಖ ಅನುಭವಿಸೋದು ಯಾಕೆ ಗೊತ್ತೆ?
ಯಾರಾದರೂ ಬೇಕಾಗೋದಕ್ಕೆ ನಮ್ಮಲ್ಲಿ ಕಾರಣಗಳು ಇರ್ತವೆ.
ಮತ್ತು
ಯಾರಾದರೂ ಬೇಡವಾಗೋದಕ್ಕೆ ನಮ್ಮಲ್ಲಿಲ್ಲದ ಕಾರಣಗಳನ್ನ ಹುಡುಕಿಕೊಳ್ತೇವೆ!
~ 2 ~
ಒಂದೊಂದು ಕನ್ನಡಿಯಲ್ಲಿ ಒಂದೊಂಧು ಥರ ಕಾಣಿಸ್ತೀವಿ;
ಎದುರಿಗಿರೋರು ಹೇಗೆ ತೋರಿಸಿಕೊಡ್ತಾರೋ
ನಾವು ಹಾಹಾಗೇ ಕಾಣಿಸ್ತೀವಿ.
ನಮ್‌ನಮ್ಮ ನಿಜ ಚಹರೆ ನಮನಮಗೆ ಮಾತ್ರ ಗೊತ್ತು,
ಒಳಗನ್ನಡಿ ನಮ್ಮ ಮುಖವನ್ನೇ ತೋರೋದಿಲ್ಲ;
ವಾಸ್ತವ- ನಾವೇನೂ ಆಗಿರೋದಿಲ್ಲ…
~ 3 ~
ಕನ್ನ ಹಾಕೋದು ಶ್ರೀಮಂತರ ಮನೆಗೇನೆ
ರಾಜನಿಗೇನೆ ಶತ್ರುಗಳ ಕಾಟ ಜಾಸ್ತಿ
ಚೆಂದದ ಹುಡುಗಿಗೆ ಊರೆಲ್ಲ ಪ್ರೇಮಿಗಳು
ಹಣ್ಣು ತುಂಬಿದ ಮರಕ್ಕೇನೆ ಜಾಸ್ತಿ ಕಲ್ಲು ಹೊಡೆಯೋದು…
ಹಾಗೇ,
ತುಂಬಾ ಕೆಲಸ ಮಾಡೋರದ್ದೆ ತಲೆದಂಡ ಕೇಳೋದು!!
~ 4 ~
ಶತ್ರುವಾದ್ರೂ ಸರಿ, ನಾಳೆ ಸಾಯ್ತಾನೆ ಅಂತ ಗೊತ್ತಾದಾಗ
ಮಮಕಾರ ಹುಟ್ಟಿಬಿಡತ್ತೆ. ಅವರ ಒಳ್ಳೆತನಗಳು ಕಣ್ಣ ಮುಂದೆ
ಪೆರೇಡ್ ಮಾಡತೊಡಗುತ್ತೆ.
ಈ ಕ್ಷಣ ನನ್ನ ಕೊನೇ ಕ್ಷಣ ಅಂದುಕೊಂಡಾಗ
ಚೆಂದವಾಗಿ ಬದುಕುವ ಉತ್ಕಟತೆ ಹುಟ್ಟಿಕೊಳ್ಳುತ್ತೆ.
ಖುಷಿಯಾಗಿರೋದು, ಪ್ರೀತಿಯಿಂದ ಇರೋದು ನಮ್ಮ ಸಹಜ ಸ್ವಭಾವ.
ಹೇಟ್ ಮಾಡೋಕೆ, ದುಃಖ ಪಡೋಕೆ ಎಷ್ಟು ಎಫರ್ಟ್ ಹಾಕ್ಬೇಕು ಗೊತ್ತಾ?