ವೈರಭಾವದಲ್ಲಿ ಸಂಚಯವಾಗುವ ಶಕ್ತಿ ನಕಾರತ್ಮಕವಾಗಿರುತ್ತದೆ ~ ಓಶೋ ಚಿಂತನೆ

oshoನಿಮ್ಮ ಬದುಕನ್ನು ನೀವೇ ಒಮ್ಮೆ ಅವಲೋಕಿಸಿಕೊಳ್ಳಿ. ನೀವು ವೈರಭಾವದಲ್ಲಿ ಶಕ್ತಿಶಾಲಿಗಳಾಗುವಿರಿ ಮತ್ತು ಶಾಂತಸ್ಥಿತಿಯಲ್ಲಿ ಶಕ್ತಿಹೀನರಾಗಿರುತ್ತೀರಿ ಎಂದು ನಿಮಗೇ ಅರಿವಾಗುತ್ತದೆ. ಇದರ ಅರ್ಥ, ವೈರಭಾವದಿಂದ ಹೆಚ್ಚು ಲಾಭ ಎಂದಲ್ಲ, ನೀವು ಕಲುಷಿತ ಭಾವದ ಗಾಢ ಪ್ರಭಾವಕ್ಕೆ ಒಳಗಾಗಿದ್ದೀರಿ ಎಂದು! ನಿಮಗೆ ನೀವು ಚಿಕಿತ್ಸೆ ಕೊಟ್ಟುಕೊಳ್ಳಬೇಕಾಗಿರುವುದು ಇಲ್ಲಿ. ಕಲುಷಿತ ಭಾವದ ಪ್ರಭಾವ ಗಾಢವಾದಷ್ಟೂ ಅಂತರಂಗದ ಪ್ರವೇಶ ಕಷ್ಟಕರವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ~ ಓಶೋ ರಜನೀಶ್

ನುಷ್ಯನ ಭಾವ ವಿಕಲ್ಪಗಳಲ್ಲಿ ನಾಲ್ಕು ವಿಕಲ್ಪಗಳು ಬಹಳ ಮುಖ್ಯವಾದವು. ಅವುಗಳಲ್ಲಿ ಮೊದಲನೆಯದು ಮೈತ್ರಿ, ಎರಡನೆಯದು ಕರುಣೆ, ಮೂರನೆಯದು ಪ್ರಫುಲ್ಲತೆ ಮತ್ತು ನಾಲ್ಕನೆಯದು ಕೃತಾರ್ಥ ಭಾವ. ಈ ನಾಲ್ಕು ವಿಕಲ್ಪಗಳ ನೆರವಿನಿಂದ ಭಾವಶುದ್ಧಿಯನ್ನು ನೆರವೇರಿಸಿಕೊಳ್ಳುವುದು ಸಾಧ್ಯ. ಮತ್ತು ಈ ನಾಲ್ಕು ವಿಕಲ್ಪಗಳ ವಿರೋಧ ರೂಪವೇ ಭಾವ ಅಶುದ್ಧಿಗೆ ಕಾರಣವಾಗುತ್ತವೆ. ಮೈತ್ರಿಗೆ ವಿರುದ್ಧವಾಗಿ ದ್ವೇಷ, ಕರುಣೆಗೆ ವಿರುದ್ಧವಾಗಿ ಕ್ರೌರ್ಯ, ಪ್ರಫುಲ್ಲತೆಗೆ ವಿರುದ್ಧವಾಗಿ ವಿಷಾದ ಮತ್ತು ಕೃತಾರ್ಥಕ್ಕೆ ವಿರುದ್ಧವಾಗಿ ಕೃತಘ್ನತೆಗಳನ್ನು ಬೆಳೆಸಿಕೊಂಡರೆ ನಾವು ಅಧಃಪತನಕ್ಕೆ ಇಳಿಯುತ್ತೇವೆ.

ಉದಾಹರಣೆಗೆ, ಮೊದಲನೆಯದಾಗಿ ಮೈತ್ರಿಯನ್ನು ತೆಗೆದುಕೊಳ್ಳೋಣ. ಮೈತ್ರಿಯ ಬದಲಾಗಿ ದ್ವೇಷವನ್ನು ಬೆಳೆಸಿಕೊಂಡರೆ ಅದರಿಂದೇನಾಗುತ್ತದೆ? ಬಹುತೇಕವಾಗಿ ನಾವು ಮೈತ್ರಿಗಿಂತ ದ್ವೇಷಕ್ಕೇ ಹೆಚ್ಚಿನ ಒತ್ತುಕೊಡುತ್ತೇವೆ. ಮೈತ್ರಿಯಿಂದ ಉಲ್ಲಸಿತವಾಗುವುದಕ್ಕಿಂತ ಹೆಚ್ಚು ದ್ವೇಷದಲ್ಲಿ ಉಲ್ಲಸಿತರಾಗುತ್ತೇವೆ. ಕೋಪ ಅಥವಾ ದ್ವೇಷವು ನಮ್ಮಲ್ಲಿ ಶಕ್ತಿಯನ್ನು ತುಂಬುತ್ತದೆ. ಅದು ನಿಜವೇ. ಬೇಕಿದ್ದರೆ ಗಮನಿಸಿ; ಶಾಂತಿ ಸುವ್ಯವಸ್ಥೆಗಳು ಇರುವಾಗ ಯಾವುದೇ ದೇಶವು ದುರ್ಬಲವಾಗಿ ತೋರುತ್ತದೆ. ಮತ್ತು ಅದೇ ದೇಶ ಯುದ್ಧ ಸಂದರ್ಭದಲ್ಲಿ ಶಕ್ತಿಶಾಲಿಯಾಗಿಬಿಡುತ್ತದೆ. 

ನಾವು ಶತ್ರುತ್ವದಿಂದ ಬಹಳ ಬೇಗ ಸಂಚಲಿತರಾಗುತ್ತೇವೆ. ಆದರೆ ಇದೇ ಸಂಚಲನ ಮೈತ್ರಿಯಿಂದಲೂ ದೊರೆಯುತ್ತದೆ. ಅದಕ್ಕಿಂತ ಹೆಚ್ಚಿನ ಮತ್ತು ಸಕಾರಾತ್ಮಕವಾದ ಶಕ್ತಿ ಮೈತ್ರಿಯಿಂದ ದೊರೆಯುತ್ತದೆ. ನಾವು ಅದನ್ನು ನಮ್ಮದಾಗಿಸಿಕೊಳ್ಳಲು ಸೋತಿದ್ದೇವೆ ಅಷ್ಟೇ. ಮೈತ್ರಿಯಿಂದ ಶಕ್ತಿಯನ್ನು ಉದ್ದೀಪಿಸಿಕೊಳ್ಳಲು ಸಾಧ್ಯವಿಲ್ಲದೆ ಇರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಶಾಂತ ಸ್ಥಿತಿಯನ್ನು ದುರ್ಬಲ ಸ್ಥಿತಿ ಎಂದು ನಾವು ಭಾವಿಸುತ್ತೇವೆ. ಮತ್ತು ಅದನ್ನು ಒಳಗೊಳಿಸಿಕೊಳ್ಳುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತೇವೆ. ನಮಗೆ ಶತ್ರುತ್ವ, ವೈರತ್ವಗಳಿಂದ ಶಕ್ತಿಯನ್ನು ಉದ್ದೀಪಿಸಿಕೊಳ್ಳುವ ದಾರಿಯಷ್ಟೆ ಗೊತ್ತಿರುವುದು. ಅದರಿಂದ ಉಂಟಾಗುವ ನಷ್ಟವನ್ನು ನಾವು ಗಮನಿಸುವ ಗೋಜಿಗೇ ಹೋಗುವುದಿಲ್ಲ.

“ಒಂದು ದೇಶ ಶಕ್ತಿಶಾಲಿಯಾಗಬೇಕಾದರೆ ಅದು ತನ್ನ ಸುತ್ತ ಶತ್ರುಗಳನ್ನು ಹುಟ್ಟಿಸಿಕೊಳ್ಳಬೇಕು, ಕೊನೆಯ ಪಕ್ಷ ಹುಸಿ ಶತ್ರುಗಳನ್ನಾದರೂ ಇರಿಸಿಕೊಳ್ಳಬೇಕು” ಎಂದು ಹಿಟ್ಲರ್ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾನೆ. ಅಂತಹ ಪ್ರಭುತ್ವ ತನಗೆ ಶತ್ರುಗಳಿಲ್ಲದಿದ್ದರೂ ತನ್ನ ಪ್ರಜೆಗಳನ್ನು “ನಿನ್ನ ಶತ್ರುಗಳು ನಿನ್ನ ಸುತ್ತಮುತ್ತಲೇ ಇದ್ದಾರೆ” ಎಂದು ಭೀತಿಗೊಳಿಸುವ ಕೆಲಸ ಮಾಡುತ್ತಲೇ ಇರುತ್ತದೆ. ಶತ್ರುಗಳು ಆಸುಪಾಸಿನಲ್ಲೆ ಇದ್ದಾರೆ ಎಂದು ಭಾಸವಾದಾಗ ಪ್ರಜೆಗಳಲ್ಲಿ ವಿಚಿತ್ರವಾದ ಆವೇಗ ಉಂಟಾಗುತ್ತದೆ. ಜರ್ಮನಿಯಲ್ಲಿ ಹಿಟ್ಲರ್ ‘ಯಹೂದಿ’ ಎಂಬ ಅಂಥ ಒಬ್ಬ ಹುಸಿ ಶತ್ರುವಿಗೆ ಜನ್ಮ ನೀಡಿದ. ಹತ್ತು ವರ್ಷಗಳ ಕಾಲ ಪ್ರಚಾರ ಮಾಡಿ ಯಹೂದಿಗಳೇ ನಿಮ್ಮ ಶತ್ರುಗಳು ಎಂದು ಪ್ರತಿಯೊಬ್ಬ ಜರ್ಮನ್ ಪ್ರಜೆಯನ್ನೂ ನಂಬಿಸಿದ. ಜರ್ಮನಿ, ಜಪಾನ್’ಗಳಲ್ಲಿ ಹುಟ್ಟಿದ ಶಕ್ತಿಗಳೆಲ್ಲೂ ವೈಮನಸ್ಯ ಪ್ರೇರಿತ ಶಕ್ತಿಗಳೇ ಆಗಿದ್ದವು. ರಷ್ಯಾ, ಅಮೆರಿಕಾ ಕೂಡ ವೈರಜನ್ಯ ಶಕ್ತಿಯ ಆಧಾರದ ಮೇಲೆಯೇ ಬೆಳೆದುನಿಂತವು. ಅದರ ಫಲವನ್ನು ಅವು ಈಗಾಗಲೇ ಅನುಭವಿಸಲು ಆರಂಭಿಸಿವೆ. ವೈರಭಾವದಲ್ಲಿ ಸಂಚಯವಾಗುವ ಶಕ್ತಿ ಯಾವತ್ತೂ ನಕಾರಾತ್ಮಕವೇ ಆಗಿರುತ್ತದೆ ಮತ್ತು ಮೈತ್ರಿಭಾವದಲ್ಲಿ ಸಂಚಯವಾಗುವ ಶಕ್ತಿ ಸಕಾರಾತ್ಮಕವಾಗಿರುತ್ತದೆ. 

ಈವರೆಗಿನ ಮನುಷ್ಯ ಇತಿಹಾಸವು ಶತ್ರುತ್ವದಿಂದ ಉದ್ದೀಪನಗೊಳ್ಳುವ ಶಕ್ತಿಯನ್ನು ಮಾತ್ರ ಅರಿತಿದೆ. ನಮಗೆ ಮೈತ್ರಿಯಿಂದ ಜನಿಸುವ ಶಕ್ತಿಯ ಅರಿವು ಇದ್ದಂತಿಲ್ಲ. ಬುದ್ಧ, ಮಹಾವೀರ, ಏಸುಕ್ರಿಸ್ತನಂಥವರು ಮೈತ್ರಿಜನ್ಯ ಶಕ್ತಿಗೆ ನಾಂದಿ ಹಾಡಿದವರು. ಅವರು ನಮಗೆ ಆದರ್ಶವಾಗಬೇಕೇ ಹೊರತು, ಹಿಟ್ಲರನಂಥವರಲ್ಲ. ಅವರು ಶಾಂತಿ, ಮೈತ್ರಿ ಎಂದೆಲ್ಲ ಹೇಳುವಾಗ ಆ ಮಾತುಗಳ ನಮ್ಮ ಕಿವಿಯ ಮೇಲೆ ಬೀಳುತ್ತವಾದರೂ ಮನಸ್ಸಿನ ಒಳಹೊಕ್ಕುವುದಿಲ್ಲ.

ನೀವೇ ಗಮನಿಸಿ ನೋಡಿ. ನಿಮ್ಮಲ್ಲಿ ಯಾವಾಗ ಶಕ್ತಿ ಸಂಚಯವಾದ ಅನುಭವವಾಗುತ್ತದೆ? ಯಾರಿಗಾದರೂ ವಿಶ್ವಾಸ ತೋರಿದಾಗಲೋ ಅಥವಾ ಯಾರ ಬಗ್ಗೆಯಾದರೂ ವೈರತ್ವ ಬೆಳೆಸಿಕೊಂಡಾಗಲೋ ಎಂದು ನಿಮ್ಮ ಬದುಕನ್ನು ನೀವೇ ಒಮ್ಮೆ ಅವಲೋಕಿಸಿಕೊಳ್ಳಿ. ನೀವು ವೈರಭಾವದಲ್ಲಿ ಶಕ್ತಿಶಾಲಿಗಳಾಗುವಿರಿ ಮತ್ತು ಶಾಂತಸ್ಥಿತಿಯಲ್ಲಿ ಶಕ್ತಿಹೀನರಾಗಿರುತ್ತೀರಿ ಎಂದು ನಿಮಗೇ ಅರಿವಾಗುತ್ತದೆ. ಇದರ ಅರ್ಥ, ವೈರಭಾವದಿಂದ ಹೆಚ್ಚು ಲಾಭ ಎಂದಲ್ಲ, ನೀವು ಕಲುಷಿತ ಭಾವದ ಗಾಢ ಪ್ರಭಾವಕ್ಕೆ ಒಳಗಾಗಿದ್ದೀರಿ ಎಂದು! ನಿಮಗೆ ನೀವು ಚಿಕಿತ್ಸೆ ಕೊಟ್ಟುಕೊಳ್ಳಬೇಕಾಗಿರುವುದು ಇಲ್ಲಿ. ಕಲುಷಿತ ಭಾವದ ಪ್ರಭಾವ ಗಾಢವಾದಷ್ಟೂ ಅಂತರಂಗದ ಪ್ರವೇಶ ಕಷ್ಟಕರವಾಗುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಇಲ್ಲಿ ನಾವು ಅರಿತಿರಬೇಕಾದ ವಿಷಯವೊಂದಿದೆ. ಶತ್ರುತ್ವವೆಂದಿಗೂ ಬಾಹ್ಯಕೇಂದ್ರಿತವಾಗಿರುತ್ತದೆ. ನಾವು ಹೊರ ಜಗತ್ತಿನೊಂದಿಗೆ ಮಾತ್ರ ವೈರತ್ವ ಹೊಂದಲು ಸಾಧ್ಯವೇ ಹೊರತು ನಮ್ಮ ಮೇಲೆ ನಾವು ಹಗೆತನ ಸಾಧಿಸಲಾರೆವು. ದ್ವೇಷಿಸಲು ಹೊರಗೆ ಯಾರೂ ಉಳಿಯದೆ ಹೋದಾಗ ನಮ್ಮೊಳಗೂ ವೈರತ್ವ ಉಳಿಯುವುದಿಲ್ಲ. ಆದರೆ ಪ್ರೀತಿ ಹಾಗಲ್ಲ. ಅದು ಬಾಹ್ಯಕೇಂದ್ರಿತವಲ್ಲ. ಹೊರಗೆ ಯಾರೂ ಇಲ್ಲದಾಗಲೂ ನಮ್ಮ ಅಂತರಂಗದಲ್ಲಿ ಪ್ರೀತಿ ನೆಲೆಸಿರುತ್ತದೆ. ಅದು ಸ್ವಕೇಂದ್ರಿತ. ದ್ವೇಷ ಪರಕೇಂದ್ರಿತ. ದ್ವೇಷಕ್ಕೆ ಹೊರಗಿನ ಪ್ರೇರಣೆ ಅತ್ಯಗತ್ಯ. ಪ್ರೀತಿ ಅಂತರಂಗದ ಸ್ಫುರಣೆ.

ದ್ವೇಷ ಮಾತ್ರವಲ್ಲ, ಎಲ್ಲ ಕಲುಷಿತ ಭಾವಗಳೂ ಹೊರಗಿನಿಂದ ಉಂಟಾಗುತ್ತವೆ ಮತ್ತು ಎಲ್ಲ ಪರಿಶುದ್ಧ ಭಾವಗಳೂ ಅಂತರಂಗದ ಸೆಲೆಯಿಂದ ಹೊಮ್ಮುತ್ತವೆ. ಹೊರಗಿನ ಕಾರಣಗಳಿಂದ ಹುಟ್ಟುವ ಯಾವ ಭಾವವೂ ಪರಿಶುದ್ಧವಾಗಿರದು. ಬಾಹ್ಯಪ್ರೇರಿತ ಪ್ರೇಮವೂ ಕೂಡಾ ಒಂದು ವ್ಯಸನ ಎನ್ನಿಸಿಕೊಳ್ಳುವುದೇ ವಿನಃ, ಅದು ನಿಜವಾದ ಪ್ರೇಮವಾಗಿರಲಾರದು. ಆದ್ದರಿಂದಲೇ ನಾವು ಪ್ರೀತಿ ಮೋಹಗಳನ್ನು ಸ್ಪಷ್ಟವಾಗಿ ಬೇರ್ಪಡಿಸುತ್ತೇವೆ. ಮೋಹವು ಬಾಹ್ಯಪ್ರೇರಿತ ಭಾವವಿಕಲ್ಪವಾಗಿದೆ.

Leave a Reply